ಶಾಲಾ ಪ್ರವೇಶಾತಿ: ಶಿಕ್ಷಣ ಇಲಾಖೆ ಆಯುಕ್ತರ ಎಚ್ಚರಿಕೆ

7

ಶಾಲಾ ಪ್ರವೇಶಾತಿ: ಶಿಕ್ಷಣ ಇಲಾಖೆ ಆಯುಕ್ತರ ಎಚ್ಚರಿಕೆ

Published:
Updated:

ಬೆಂಗಳೂರು: ಶಿಕ್ಷಣ ಇಲಾಖೆ   ಶಾಲಾ ಪ್ರವೇಶ ವೇಳಾಪಟ್ಟಿ        ಪ್ರಕಟಿಸುವುದಕ್ಕೂ ಮೊದಲೇ ಶಾಲೆಗಳು ಮಕ್ಕಳನ್ನು ದಾಖಲಾತಿ    ಮಾಡಿಕೊಳ್ಳಬಾರದು. ಇದನ್ನು  ಉಲ್ಲಂಘಿಸಿದರೆ ಅಂತಹ           ಪ್ರವೇಶಗಳನ್ನು ಮಾನ್ಯ ಮಾಡುವುದಿಲ್ಲ ಎಂದು ಶಿಕ್ಷಣ ಇಲಾಖೆ ಆಯುಕ್ತ ಎಸ್.ಆರ್.ಉಮಾಶಂಕರ್ ಎಚ್ಚರಿಕೆ ನೀಡಿದ್ದಾರೆ.ಬೆಂಗಳೂರು ಸೇರಿದಂತೆ ಕೆಲವು  ನಗರಗಳಲ್ಲಿ ಖಾಸಗಿ ಶಾಲೆಗಳು    2013-14ನೇ ಸಾಲಿನ ಪ್ರವೇಶ   ಪ್ರಕ್ರಿಯೆಯನ್ನು ಈಗಾಗಲೇ       ಆರಂಭಿಸಿ,   ಆನ್‌ಲೈನ್ ಮೂಲಕ ಮತ್ತು ನೇರವಾಗಿ ಅರ್ಜಿಗಳನ್ನು   ಪಡೆಯುತ್ತಿರುವ ಹಿನ್ನೆಲೆಯಲ್ಲಿ    ಪ್ರವೇಶಕ್ಕೆ ಸಂಬಂಧಪಟ್ಟಂತೆ    ಸುತ್ತೋಲೆಯೊಂದನ್ನು        ಹೊರಡಿಸಿದ್ದಾರೆ.

2013-14ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಪ್ರವೇಶ ದಾಖಲಾತಿ ಪ್ರಕ್ರಿಯೆ ಮುಂಬರುವ ಜನವರಿಯಲ್ಲಿ ಆರಂಭವಾಗಲಿದೆ.ಇದಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಲಿದೆ.      ಅಲ್ಲಿಯವರೆಗೂ ಪ್ರವೇಶ ನೀಡಬಾರದು ಎಂದು ಪ್ರಕಟಣೆಯಲ್ಲಿ   ತಿಳಿಸಿದ್ದಾರೆ. ವೇಳಾಪಟ್ಟಿ ಪ್ರಕಟವಾದ    ಕೂಡಲೇ ಅನುದಾನರಹಿತ   ಶಾಲೆಗಳು, ತಮ್ಮ ಶಾಲೆಯಲ್ಲಿ 1ನೇ ತರಗತಿ ಅಥವಾ ಪೂರ್ವ ಪ್ರಾಥಮಿಕ ತರಗತಿಯ ಪ್ರವೇಶಕ್ಕಾಗಿ ಲಭ್ಯವಿರುವ ಸೀಟುಗಳನ್ನು ಘೋಷಣೆ ಮಾಡಿ  ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ      ಲಿಖಿತವಾಗಿ ತಿಳಿಸಬೇಕು.ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳ ಅನುದಾನದಿಂದ ನಡೆಯುತ್ತಿರುವ ಶಾಲೆಗಳಿಗೂ ಇದು ಅನ್ವಯ ಆಗಲಿದೆ ಎಂದು ಅವರು ತಿಳಿಸಿದ್ದಾರೆ.ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾವಾರು ಲಭ್ಯವಿರುವ ಶೇ 25ರಷ್ಟು ಸೀಟುಗಳ ಪಟ್ಟಿಯನ್ನು   ಶಿಕ್ಷಕರು, ಪೋಷಕರ ಮಾಹಿತಿಗಾಗಿ ಪ್ರಕಟಿಸಲಿದ್ದಾರೆ.ಅಲ್ಲಿಯವರೆಗೂ ಖಾಸಗಿ ಶಾಲೆಗಳು ಮಕ್ಕಳಿಗೆ ಪ್ರವೇಶ ನೀಡಬಾರದು ಎಂದು ಹೇಳಿದ್ದಾರೆ.

ವೇಳಾಪಟ್ಟಿ ಪ್ರಕಟವಾಗುವುದಕ್ಕೆ ಮೊದಲೇ ಯಾವುದೇ ಶಾಲೆಗಳು ಮಕ್ಕಳ ದಾಖಲಾತಿ ಮಾಡಿಕೊಳ್ಳುವುದು ಕಾನೂನುಬಾಹಿರ. ಅದಕ್ಕೆ ಇಲಾಖೆಯ ಮಾನ್ಯತೆ ಇರುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry