ಶಾಲಾ ಮಕ್ಕಳಿಂದ ಸ್ವಚ್ಛತಾ ಕಾರ್ಯ

7

ಶಾಲಾ ಮಕ್ಕಳಿಂದ ಸ್ವಚ್ಛತಾ ಕಾರ್ಯ

Published:
Updated:

ಚಿಕ್ಕಬಳ್ಳಾಪುರ: ವರ್ಷದ 12-12-12 ವಿಶೇಷ ದಿನದ ಪ್ರಯುಕ್ತ  ಕೆ.ವಿ.ಟ್ರಸ್ಟ್ ಮತ್ತು ಪಂಚಗಿರಿ ಬೋಧನಾ ಪ್ರೌಢಶಾಲೆ ವಿದ್ಯಾರ್ಥಿಗಳು ಬುಧವಾರ ತಾಲ್ಲೂಕಿನ ರಂಗಸ್ಥಳ ದೇವಾಲಯದ ಆವರಣದಲ್ಲಿ ವಿಶಿಷ್ಟ ರೀತಿಯ ಕಾರ್ಯದಲ್ಲಿ ತೊಡಗಿಕೊಂಡರು.ಶಿಕ್ಷಕರ ಮಾರ್ಗದರ್ಶನದಲ್ಲಿ  ಶ್ರಮದಾನ ಮಾಡಿ ಇಡೀ ಆವರಣದ ತ್ಯಾಜ್ಯವನ್ನು ತೆರವುಗೊಳಿಸಿ ಶುಚಿಗೊಳಿಸಿದ್ದಲ್ಲದೆ ಸಸಿ ನೆಡುವ ಕಾರ್ಯಕ್ರಮದಲ್ಲೂ ಭಾಗಿಯಾದರು.ಪ್ರವಾಸಿಗರಿಂದ ಎಸೆಯಲ್ಪಟ್ಟ ಪ್ಲಾಸ್ಟಿಕ್ ಲೋಟ, ತಟ್ಟೆಗಳು, ತ್ಯಾಜ್ಯ ವಸ್ತುಗಳು, ಕಾಗದ, ಪ್ಲಾಸ್ಟಿಕ್‌ಗಳು ಮುಂತಾದವುಗಳನ್ನು ತೆರವುಗೊಳಿಸಿದರು. ಕಳೆಗಿಡಗಳು, ಪರಿಸರದ ಅಂದಗೆಡಿಸುತ್ತಿದ್ದ ವಸ್ತುಗಳನ್ನು ಒಂದೆಡೆ ಶೇಖರಿಸಿ ಸುಟ್ಟು ಹಾಕಿದರು. ಕೆಲ ವಸ್ತುಗಳನ್ನು ಮೂಟೆ ಮಾಡಿಕೊಂಡು  ಎಸೆದರು. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲಿ ಮತ್ತು ಪರಿಸರ ಸದಾ ಶುಚಿಯಾಗಿರಲಿ ಎಂಬ ಉದ್ದೇಶದಿಂದ ಸ್ವಚ್ಛತಾ ಕಾರ್ಯ ಕೈಗೊಂಡಿರುವುದಾಗಿ ಮಕ್ಕಳು ಹೇಳಿದರು.ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಕೆ.ಪಿ.ಬಚ್ಚೇಗೌಡ, `ಮಕ್ಕಳು ಆಯಾ ಪ್ರಮುಖ ದಿನಗಳಂದು ಮಾತ್ರ ಸ್ವಚ್ಛತಾ ಕಾರ್ಯ ಕೈಗೊಂಡರೆ ಸಾಲದು, ಪ್ರತಿ ದಿನವೂ ಸ್ವಚ್ಛತೆಯತ್ತ ಗಮನ ಹರಿಸಬೇಕು. ದೇವಾಲಯ, ಪ್ರಮುಖ ಸ್ಥಳಗಳತ್ತ ಮಾತ್ರವೇ ಗಮನಹರಿಸದೆ ರಸ್ತೆ, ಮನೆ, ಶಾಲಾ ಆವರಣ, ಉದ್ಯಾನ ಮುಂತಾದ ಕಡೆಗಳಲ್ಲೂ ಸ್ವಚ್ಛತೆ ಹಮ್ಮಿಕೊಳ್ಳಬೇಕು' ಎಂದರು.ಶಾಲೆ ಮುಖ್ಯಸ್ಥ ಬಿ.ಆರ್.ರಾಮಚಂದ್ರ, `ಎಕೊ ಕ್ಲಬ್' ಸದಸ್ಯೆ ಡಿ.ವಿ.ಮಂಜುಳಾ ಉಪಸ್ಥಿತರಿದ್ದರು.

`ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಮಕ್ಕಳಿಗೆ ವಾಹನ, ಊಟದ ವ್ಯವಸ್ಥೆ ಮಾಡಲಾಗಿತ್ತು. 12-12-12 ಎಂಬ ವಿಶೇಷ ದಿನದ ಬಗ್ಗೆ ಹಲವರಿಗೆ ಒಂದೊಂದು ರೀತಿಯ ಕಲ್ಪನೆಗಳಿದ್ದವು. ಪ್ರಳಯವಾಗುತ್ತದೆ ಅಥವಾ ಅನಾಹುತ ಸಂಭವಿಸುತ್ತದೆ ಎಂಬ ಭಾವನೆಗಳಿದ್ದವು.ಅಂತಹ ಯಾವುದೇ ಘಟನೆಗಳು ಸಂಭವಿಸುವುದಿಲ್ಲ ಎಂಬ ವಿಷಯವನ್ನು ಮಕ್ಕಳಿಗೆ ತಿಳಿ ಹೇಳಬೇಕಿತ್ತು. ಪರಿಸರವನ್ನು ಉತ್ತಮ ರೀತಿಯಲ್ಲಿ ಕಾಪಾಡಿದರೆ, ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲವೆಂದು ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಿದೆವು' ಎಂದು ಪರಿಸರವಾದಿ `ಗುಂಪುಮರದ' ಆನಂದ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry