ಬುಧವಾರ, ಆಗಸ್ಟ್ 21, 2019
27 °C
ಹೊಸಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ

ಶಾಲಾ ಮಕ್ಕಳಿಗೆ `ಕ್ಷೀರ ಭಾಗ್ಯ' ಶುರು

Published:
Updated:

ಬೆಂಗಳೂರು:  ಕೆಲವು ಯೋಜನೆಗಳಿಂದಾಗಿ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಇದೆ. ಈ ಹಿನ್ನೆಲೆಯಲ್ಲಿ `ಕ್ಷೀರ ಭಾಗ್ಯ' ಯೋಜನೆಯಡಿ ಮಕ್ಕಳಿಗೆ 18 ಗ್ರಾಂ ಹಾಲಿನ ಪುಡಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ `ಫ್ಲೆಕ್ಸಿ ಪ್ಯಾಕ್'ನಲ್ಲಿ ಹಸಿ ಹಾಲನ್ನು ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.ಸರ್ಕಾರಿ ಶಾಲಾ ಹಾಗೂ ಅಂಗನವಾಡಿ ಮಕ್ಕಳಿಗೆ ವಾರದಲ್ಲಿ ಮೂರು ದಿನ ಹಾಲು ವಿತರಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ `ಕ್ಷೀರ ಭಾಗ್ಯ' ಯೋಜನೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿದರು.ಹಸಿ ಹಾಲು ಒಂದು ತಿಂಗಳ ಕಾಲ ಕೆಡದಂತೆ `ಫ್ಲೆಕ್ಸಿ ಪ್ಯಾಕ್'ನಲ್ಲಿ ಪ್ಯಾಕ್ ಮಾಡಿ ಮಕ್ಕಳಿಗೆ ವಿತರಿಸಲು ಚಿಂತನೆ ನಡೆಸಲಾಗುತ್ತಿದೆ. `ಟೆಟ್ರಾ ಪ್ಯಾಕ್'ನಲ್ಲಿ ಹಾಲು ವಿತರಿಸಿದರೆ ವೆಚ್ಚ ಹೆಚ್ಚಾಗಲಿರುವ ಕಾರಣ ಕಡಿಮೆ ವೆಚ್ಚದ `ಫ್ಲೆಕ್ಸಿ ಪ್ಯಾಕ್'ಗೆ ಆದ್ಯತೆ ನೀಡಲು ಆಲೋಚಿಸಲಾಗುತ್ತಿದೆ ಎಂದು ವಿವರಿಸಿದರು. ಬೆಂಗಳೂರು ನಗರ ಹಾಗೂ ಹುಬ್ಬಳ್ಳಿಯನ್ನು ಹೊರತುಪಡಿಸಿ ಉಳಿದ ಎಲ್ಲ ಕಡೆಗಳಲ್ಲೂ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಪ್ರದೇಶಗಳಲ್ಲಿ ಇಸ್ಕಾನ್ ಹಾಗೂ ಸ್ವಯಂಸೇವಾ ಸಂಸ್ಥೆಗಳು ಯೋಜನೆಗೆ ಸಿದ್ಧತೆ ಮಾಡಿಕೊಳ್ಳಲು 10 ದಿನಗಳ ಕಾಲಾವಕಾಶ ಕೋರಿವೆ. ಈ ಹಿನ್ನೆಲೆಯಲ್ಲಿ 10ರ ಒಳಗಾಗಿ ರಾಜ್ಯದ ಎಲ್ಲೆಡೆ ಯೋಜನೆ ಸಂಪೂರ್ಣವಾಗಿ ಪ್ರಾರಂಭವಾಗಲಿದೆ ಎಂದರು.   `ದಕ್ಷಿಣ ಭಾರತದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಬಡತನ ಹೆಚ್ಚಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ನಿವಾರಿಸುವ ಉದ್ದೇಶದಿಂದಲೇ ಈ ಯೋಜನೆಗೆ ಚಾಲನೆ ನೀಡಲಾಗಿದೆ' ಎಂದರು.ಕಪಟತನ ಅರಿಯದ ಮಕ್ಕಳು ದೇವರ ಸಮಾನ, ಹಾಲು ಅಮೃತಕ್ಕೆ  ಸಮಾನ ಹಾಗೂ ತಾಯಿಯ ಎದೆ ಹಾಲು ಮಕ್ಕಳಿಗೆ ಸಂಜೀವಿನಿಯಂತೆ ಎಂದು ಹೇಳಲಾಗುತ್ತದೆ. ಅದರಲ್ಲೂ ವಿಶ್ವ ಸ್ತನ್ಯ ಪಾನ ದಿನಾಚರಣೆಯಂದೆ ಈ ಯೋಜನೆಗೆ ಚಾಲನೆ ನೀಡಿರುವುದು ಒಳ್ಳೆಯ ಸಂಗತಿ ಎಂದರು.ಇದಕ್ಕೂ ಮುನ್ನ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ಹಾಲಿನ ಪುಡಿ ಮೇಲೆ ವಿಧಿಸಲಾಗುತ್ತಿರುವ ತೆರಿಗೆಯನ್ನು ತೆಗೆದು ಹಾಕಿದರೆ ರಾಜ್ಯ ಸಹಕಾರಿ ಹಾಲು ಮಹಾ ಮಂಡಳಿ ಆರ್ಥಿಕವಾಗಿ ಬಲಿಷ್ಠಗೊಳ್ಳಲಿದೆ ಎಂದು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಮನವಿಯನ್ನು ಪರಿಶೀಲಿಸುವುದಾಗಿ ತಿಳಿಸಿದರು. ಹೊಸಕೋಟೆ ತಾಲ್ಲೂಕು ಅಭಿವೃದ್ಧಿಯಲ್ಲಿ ತುಂಬಾ ಹಿಂದುಳಿದಿದ್ದು, ರೈತರು ಹಾಗೂ ಜನರು ಹಲವಾರು ಸಮಸ್ಯೆಗಳು ಎದುರಿಸುತ್ತಿದ್ದಾರೆ. ಸರ್ಕಾರ ಹೆಚ್ಚಿನ ಅನುದಾನ ನೀಡುವ ಮೂಲಕ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದು ಶಾಸಕ ಎನ್. ನಾಗರಾಜ್ (ಎಂ.ಟಿ.ಬಿ) ಮನವಿ ಮಾಡಿದರು.ಸಚಿವರಾದ ಕೃಷ್ಣಬೈರೇಗೌಡ, ಉಮಾಶ್ರೀ, ಎಚ್.ಎಸ್. ಮಹದೇವಪ್ರಸಾದ್ ಮತ್ತು ಕಿಮ್ಮನೆ ರತ್ನಾಕರ, ಶಾಸಕ ಬೈರತಿ ಬಸವರಾಜು, ಹಾಲು ಮಹಾಮಂಡಳಿ ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.ಮಹಿಳೆಯರ ಸಂಕಟ

`ಹಳ್ಳಿಯ ಹಾಲು ಪಟ್ಟಣಕ್ಕೆ, ಪಟ್ಟಣದ ಸಾರಾಯಿ ಹಳ್ಳಿಗೆ ಎಂಬ ಮಾತಿದೆ. ಇದು ಸತ್ಯ ಸಂಗತಿ. ಹಾಲು ಉತ್ಪಾದಿಸುವ ರೈತರು ಬಡತನದಿಂದಾಗಿ ಮನೆಯಲ್ಲಿ ಮಕ್ಕಳಿಗೆ ಹಾಲು ನೀಡದೆ ಅದನ್ನು ಹಾಲು ಉತ್ಪಾದಕರ ಸಂಘಕ್ಕೆ ಮಾರುತ್ತಾರೆ. ಮತ್ತೊಂದೆಡೆ ಹಿಂದಿನ ಸರ್ಕಾರ ಕಡಿಮೆ ದರದಲ್ಲಿ ದೊರೆಯುತ್ತಿದ್ದ ಸಾರಾಯಿಯನ್ನು ನಿಲ್ಲಿಸಿ, ಹೆಣ್ಣುಮಕ್ಕಳ ಕಣ್ಣೀರನ್ನು ನಿಲ್ಲಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿತ್ತು. ಆದರೆ ವಾಸ್ತವದಲ್ಲಿ ಹಳ್ಳಿ ಜನರು ಸಾರಾಯಿ ಬಿಟ್ಟು ಹೆಚ್ಚಿನ ಬೆಲೆಯ ಮದ್ಯದ ಮೊರೆ ಹೋಗಿದ್ದಾರೆ. ಇದರಿಂದ ಅವರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಕುಸಿದಿದ್ದು, ಹೆಣ್ಣು ಮಕ್ಕಳ ಸಂಕಟ ಮತ್ತಷ್ಟು ಹೆಚ್ಚಾಗಿದೆ'.

- ಸಿದ್ದರಾಮಯ್ಯ, ಮುಖ್ಯಮಂತ್ರಿ">ಸನ್ಮಾನ ವಿಳಂಬಕ್ಕೆ ಕೋಪ

">ಕಾರ್ಯಕ್ರಮದ ಪ್ರಾರಂಭದಲ್ಲಿ ಮುಖ್ಯಮಂತ್ರಿಗಳ ನಂತರ ಶಾಸಕ ಎಂ ಟಿ ಬಿ ನಾಗರಾಜು ಅವರನ್ನು ಸನ್ಮಾನಿಸಲಿಲ್ಲ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಿಲ್ಲ ಎಂದು ಸ್ಥಳೀಯರು ಮಾತಿನ ಚಕಮಕಿ ನಡೆಸಿದರು. ಇದರಿಂದ ಕೆಲಕಾಲ ಗೊಂದಲ ಉಂಟಾಗಿತ್ತು. ತಕ್ಷಣವೇ ಶಾಸಕ ನಾಗರಾಜ್ ಅವರಿಗೆ ಸನ್ಮಾನ ಮಾಡಿ, ಸಾರ್ವಜನಿಕರ ಕೋಪ ಶಮನಗೊಳಿಸಲಾಯಿತು.

 

Post Comments (+)