ಶನಿವಾರ, ಆಗಸ್ಟ್ 24, 2019
28 °C

ಶಾಲಾ ಮಕ್ಕಳ ಪ್ರಯಾಣ; ಸುರಕ್ಷತೆ ನಿರ್ಲಕ್ಷ್ಯ

Published:
Updated:

ಬಾಗಲಕೋಟೆ: ನಗರದ ವಿವಿಧ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಪ್ರತಿನಿತ್ಯ ಕರೆದೊಯ್ಯವ ಆಟೋ, ಟಂಟಂ ಮತ್ತು ಟಾಂಗಾ ಗಾಡಿಗಳು ಸುರಕ್ಷತೆಯನ್ನು ಕಡೆಗಣಿಸಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.ಆಟೋ, ಟಂಟಂ ಮತ್ತು ಟಾಂಗಾ ಗಾಡಿಗಳಲ್ಲಿ ಸ್ಥಳಾವಕಾಶಕ್ಕೂ ಮೀರಿ ವಿದ್ಯಾರ್ಥಿಗಳನ್ನು ತುಂಬಿಕೊಂಡು  ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ವೇಗವಾಗಿ ಚಲಿಸುವುದು ನಗರದಲ್ಲಿ ಕಂಡುಬರುತ್ತಿದೆ.ಉಸಿರುಗಟ್ಟುವಂತೆ ವಿದ್ಯಾರ್ಥಿಗಳನ್ನು ತುಂಬಿಕೊಳ್ಳಲಾಗುತ್ತಿದೆ. ಕೂರಲು ಜಾಗವಿಲ್ಲದ ವಿದ್ಯಾರ್ಥಿಗಳು ವಾಹನದ ಒಂದು ಭಾಗದಲ್ಲಿ ನೇತಾಡಿಕೊಂಡು ಶಾಲೆಗೆ ಹರಸಾಹಸದಿಂದ ತೆರಳುವುದು ಸಾಮಾನ್ಯವಾಗಿದೆ.ಆರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಆಟೋ, ಟಂಟಂ, ಟಾಂಗಾದಲ್ಲಿ ಕರೆದೊಯ್ಯಬಾರದು ಎಂಬ ಸುಪ್ರೀಂಕೋರ್ಟ್ ನಿರ್ದೇಶನವಿದ್ದರೂ ನಗರದಲ್ಲಿ ಮಾತ್ರ ಅದಾವುದಕ್ಕೂ ಬೆಲೆಯಿಲ್ಲದಂತಾಗಿದೆ.ಆಟೋ, ಟಂಟಂಗಳಲ್ಲಿ ಚಾಲಕರು ತಮ್ಮ ಎಡಬಲದಲ್ಲಿ ವಿದ್ಯಾರ್ಥಿಗಳ ಪುಸ್ತಕ, ಊಟದ ಬ್ಯಾಗ್‌ಗಳನ್ನು ನೇತುಹಾಕಿಕೊಳ್ಳುವ ಜೊತೆಗೆ ವಿದ್ಯಾರ್ಥಿಗಳೂ ಆಚೆ, ಈಚೆ ಜೋತು ಬೀಳುತ್ತಾರೆ.ಟಾಂಗಾ ಗಾಡಿಗಳ ಚಕ್ರದ ಆಜುಬಾಜು ನಿಂತು ಕುದುರೆಗಳ ಬೆನ್ನು ಚಪ್ಪರಿಸುವ ಜೊತೆಗೆ ಸಿಳ್ಳೆ ಹೊಡೆಯುವುದು ಇತ್ಯಾದಿ ತುಂಟತನ ಮಾಡುತ್ತಾರೆ. ಈ ಬಗ್ಗೆ ಟಾಂಗಾ ಸಾರಥಿಗಳಾಗಲಿ, ಮಕ್ಕಳ ಪೋಷಕರಾಗಲಿ, ಶಾಲಾ ಶಿಕ್ಷಕರಾಗಲಿ ಸ್ವಲ್ಪವೂ ಗಮನಹರಿಸದಿರುವುದು ಅವಘಡಕ್ಕೆ ಕಾರಣವಾಗಬ್ಲ್ಲಲುದಾಗಿದೆ.ಶಾಲಾ ಮಕ್ಕಳ ಪ್ರಯಾಣ ಸುರಕ್ಷತೆ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ, `ಇದುವರೆಗು ಸಹ ನಗರದಲ್ಲಿ ಸುರಕ್ಷಿತ ವಾಹನ ಸಂಚಾರ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಇನ್ನು ಮುಂದೆ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನಗಳ ಚಾಲಕರಿಗೆ ಸೂಚನೆ ನೀಡಲಾಗುವುದು' ಎಂದರು.`ಶೀಘ್ರದಲ್ಲೇ ಚಾಲಕರ, ಸಾರಥಿಗಳ ಸಭೆ ನಡೆಸುವ ಯೋಚನೆ ಇದೆ. ಪ್ರತಿನಿತ್ಯ ವಿದ್ಯಾರ್ಥಿಗಳನ್ನು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಕರೆದೊಯ್ಯವ ಆಟೋ, ಟಂಟಂ, ಟಾಂಗಾ ಗಾಡಿಗಳ ಸಾರಥಿಗಳಿಗೆ ಸುರಕ್ಷತೆ ಕ್ರಮ ಅನುಸರಿಸುವ ಬಗ್ಗೆ ಸೂಚನೆ ನೀಡಲಾಗುವುದು' ಎಂದರು.`ಟಂಟಂ ಮತ್ತು ಆಟೋ ಚಾಲಕರಿಗೆ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯದಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಆದರೆ, ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯವಾಗ ಮಕ್ಕಳ ಸಂಖ್ಯೆ ಎಷ್ಟು ಇರಬೇಕು ಎಂಬುದನ್ನು ಮಿತಿಗೊಳಿಸಿರಲಿಲ್ಲ. ಸುರಕ್ಷತೆ ದೃಷ್ಟಿಯಿಂದ ಶೀಘ್ರದಲ್ಲೇ ಸಂಖ್ಯಾ ಮಿತಿ ಹೇರಲಾಗುವುದು' ಎಂದು ತಿಳಿಸಿದರು.

Post Comments (+)