ಶುಕ್ರವಾರ, ಜೂನ್ 25, 2021
22 °C

ಶಾಲಾ ಮಕ್ಕಳ ಮನೋವೇದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ದೇಶದಾದ್ಯಂತ ಶೇ 80ರಷ್ಟು ಶಾಲಾ ಮಕ್ಕಳು ಸರಿಯಾಗಿ ವಿದ್ಯಾಭ್ಯಾಸ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಶಿಕ್ಷಕರಿಂದ ಅವಮಾನಿತರಾಗುತ್ತಿದ್ದಾರೆ ಎಂಬ ಕಳವಳಕಾರಿ ವಿಷಯ ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ನಡೆಸಿರುವ ಸಮೀಕ್ಷೆಯಿಂದ ತಿಳಿದು ಬಂದಿದೆ.

ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯುತ್ ಶಾಕ್‌ನಂತಹ ಕ್ರೂರ ಶಿಕ್ಷೆ ನೀಡಲಾಗುತ್ತಿರುವುದನ್ನೂ ಇನ್ನಷ್ಟೇ ಬಿಡುಗಡೆ ಆಗಬೇಕಿರುವ ಸಮೀಕ್ಷೆ ಪತ್ತೆ ಹಚ್ಚಿದೆ.2009-10ನೇ ಸಾಲಿನ  ಶೈಕ್ಷಣಿಕ ವರ್ಷದಲ್ಲಿ ಏಳು ರಾಜ್ಯಗಳಲ್ಲಿ 6,632 ಮಕ್ಕಳನ್ನು ಸಂದರ್ಶನಕ್ಕೆ ಒಳಪಡಿಸಿ, ಯಾವ ರೀತಿಯ ದೈಹಿಕ ದಂಡನೆ ನೀಡಲಾಗುತ್ತಿದೆ ಎಂಬ ಬಗ್ಗೆ ಅಧ್ಯಯನ ನಡೆಸಲಾಗಿತ್ತು.

ಇವರಲ್ಲಿ ಶೇ 96.86 ಮಕ್ಕಳು ಒಂದಲ್ಲ ಒಂದು ರೀತಿಯ ದಂಡನೆಗೆ ಒಳಗಾಗಿದ್ದರೆ, ಕೇವಲ 9 ಮಕ್ಕಳು ತಾವು ಯಾವುದೇ ರೀತಿಯ ಶಿಕ್ಷೆಗೆ ಒಳಗಾಗಿಲ್ಲ ಎಂದು ತಿಳಿಸಿದ್ದರು.ಆಯೋಗದ ಪ್ರಕಾರ ದಂಡನೆ, ಮಾನಸಿಕ ಕಿರುಕುಳ, ಭೇದ-ಭಾವ ಮಾಡುವುದು ದೈಹಿಕ ಶಿಕ್ಷೆಯ ವ್ಯಾಪ್ತಿಗೆ ಬರುತ್ತದೆ. ಕಟ್ಟಿಗೆಯಿಂದ ಥಳಿಸುವುದು, ಕೆನ್ನೆಗೆ ಹೊಡೆಯುವುದು, ಕಿವಿ ಹಿಂಡುವುದು, ಬೆನ್ನಿಗೆ ಬಾರಿಸುವುದು ಇವು ಮಕ್ಕಳಿಗೆ ನೀಡುತ್ತಿರುವ ಪ್ರಮುಖ ದೈಹಿಕ ದಂಡನೆಯಾಗಿವೆ.

ಶೇ 75ರಷ್ಟು ಮಕ್ಕಳು ಬೆತ್ತದಿಂದ ಥಳಿಸಿಕೊಳ್ಳುವ ದಂಡನೆಗೆ ಒಳಗಾದರೆ, ಶೇ 69ರಷ್ಟು ಮಕ್ಕಳು ಕೆನ್ನೆಗೆ ಹೊಡೆಸಿಕೊಳ್ಳುತ್ತಾರೆ.ಮಕ್ಕಳಿಗೆ ನೀಡುತ್ತಿರುವ ದೈಹಿಕ ದಂಡನೆ ತಪ್ಪಿಸಲು ಅಳವಡಿಸಿಕೊಳ್ಳಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ಸೋಮವಾರ ತಿಳಿಸುವುದಾಗಿ ಸಂಸ್ಥೆಯ ಹಿರಿಯ ಅಧಿಕಾರಿ ಹೇಳಿದ್ದಾರೆ. ಮಕ್ಕಳ ಸಕಾರಾತ್ಮಕ ಬೆಳವಣಿಗೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಸೂತ್ರಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.