ಶಾಲಾ ವಾಹನ ಪಲ್ಟಿ: ಕ್ಲೀನರ್ ಸಾವು

7

ಶಾಲಾ ವಾಹನ ಪಲ್ಟಿ: ಕ್ಲೀನರ್ ಸಾವು

Published:
Updated:

ಚಿಕ್ಕಬಳ್ಳಾಪುರ: ಚಾಲಕನ ಬದಲು ತೋಟಗಾರಿಕೆ ಇಲಾಖೆ ಸಿಬ್ಬಂದಿಯೊಬ್ಬ ವಾಹನ ಚಾಲನೆ ಮಾಡಿದ ಪರಿಣಾಮ ಶಾಲಾ ವಾಹನ ಉರುಳಿ ಬಿದ್ದು ಕ್ಲೀನರ್ ಮೃತಪಟ್ಟು ಶಿಕ್ಷಕ ಮತ್ತು ಮಕ್ಕಳು ಸೇರಿದಂತೆ ಒಟ್ಟು 30 ಮಂದಿ ಗಾಯಗೊಂಡ ಘಟನೆ ಚಿಕ್ಕಬಳ್ಳಾಪುರ ಹೊರವಲಯದ ಮರಸನಹಳ್ಳಿ ಬಳಿಯಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.ತಾಲ್ಲೂಕಿನ ಇಣಿಚೇನಹಳ್ಳಿ ನಿವಾಸಿ ರಾಮಾಂಜನೇಯ (25) ಮೃತಪಟ್ಟವರು. ತೀವ್ರ ಸ್ವರೂಪದಲ್ಲಿ ಗಾಯಗೊಂಡಿರುವ ಬಿಜಿಎಸ್ ಗ್ರಾಮೀಣ ಇಂಗ್ಲಿಷ್ ಶಾಲೆ ಶಿಕ್ಷಕ ನಯಾಜ್ ಪಾಷಾ, ಐವರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಉಳಿದ ಮಕ್ಕಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಘಟನೆ ನಡೆದು 45 ನಿಮಿಷಗಳು ಕಳೆದರೂ ಅಂಬುಲೆನ್ಸ್ ಬರಲಿಲ್ಲ ಎಂದು ಆರೋಪಿಸಿ ರೊಚ್ಚಿಗೆದ್ದ ಗ್ರಾಮಸ್ಥರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ನಂತರ ಬಂದ ಅಂಬುಲೆನ್ಸ್ ಮೇಲೆ ಕಲ್ಲು ತೂರಿ ಗಾಜುಗಳನ್ನು ಒಡೆದು ಹಾಕಿದರು. ಸುಮಾರು 2 ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿದ ಕಾರಣ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಟಿ.ಡಿ.ಪವಾರ್ ಮತ್ತು ಇತರ ಪೊಲೀಸ್ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಿದರು.‘ತಾಲ್ಲೂಕಿನ ಅಗಲಗುರ್ಕಿಯಲ್ಲಿನ ಬಿಜಿಎಸ್ ಗ್ರಾಮೀಣ ಇಂಗ್ಲಿಷ್ ಶಾಲೆಗೆ 30 ಮಕ್ಕಳನ್ನು ಶಾಲಾ ವಾಹನದಲ್ಲಿ ಕರೆದೊಯ್ಯಲಾಗುತ್ತಿತ್ತು.ವಾನದ ಚಾಲಕ ಮತ್ತೊಂದು ಬದಿಯಲ್ಲಿ ಕೂತಿದ್ದರೆ, ಕ್ಲೀನರ್ ವಾಹನದ ಬಾಗಿಲು ಬಳಿ ನಿಂತಿದ್ದ. ಶಾಲೆಯ ತೋಟಗಾರಿಕೆ ಸಿಬ್ಬಂದಿಯೊಬ್ಬ ವಾಹನವನ್ನು ಚಾಲನೆ ಮಾಡುತ್ತಿದ್ದ. ಮರಸನಹಳ್ಳಿ ಬಳಿ ನಿಯಂತ್ರಣ ಕಳೆದುಕೊಂಡ ಪರಿಣಾಮ ವಾಹನ ಉರುಳಿ ಬಿತ್ತು. ಬಾಗಿಲು ಬಳಿ ನಿಂತಿದ್ದ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟರೆ, ಇತರ ಪ್ರಯಾಣಿಕರು ಗಾಯಗೊಂಡರು’ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry