ಶಾಲಾ ಸೌಲಭ್ಯಕ್ಕೆ ಪ್ರಥಮ ಆದ್ಯತೆ

7

ಶಾಲಾ ಸೌಲಭ್ಯಕ್ಕೆ ಪ್ರಥಮ ಆದ್ಯತೆ

Published:
Updated:

ಬಸವಕಲ್ಯಾಣ: ತಾಲ್ಲೂಕಿನ ಪ್ರತಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಹಳ್ಳಿಗಳು ಮಹಾರಾಷ್ಟ್ರದ ಗಡಿ ಭಾಗದಲ್ಲಿದ್ದು  ಸೌಕರ್ಯಗಳಿಂದ ವಂಚಿತವಾಗಿವೆ. ಇಲ್ಲಿನ ಬಂಡಗರವಾಡಿ, ಬೇಡರವಾಡಿಗಳಿಗೆ ಕಚ್ಚಾ ರಸ್ತೆಯೇ ಇದ್ದು ಇದುವರೆಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಘೋಟಾಳ, ಜಾಜನಮುಗಳಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಕೆಲ ರಸ್ತೆಗಳ ಸುಧಾರಣೆಗೆ ಹಣ ಮಂಜೂರಾದರೂ ಕಾಮಗಾರಿ ಕೈಗೊಳ್ಳಲಾಗಿಲ್ಲ.‘ಕ್ಷೇತ್ರದ ಎಲ್ಲ ಶಾಲೆಗಳಿಗೆ ನೀರಿನ ಹಾಗೂ ಕಟ್ಟಡ ವ್ಯವಸ್ಥೆ ಕಲ್ಪಿಸಲಾಗುವುದು. ಶಿಕ್ಷಕರ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು. ಗ್ರಾಮಗಳಿಗೆ ನೀರಿನ ಸೌಲಭ್ಯ ಒದಗಿಸಲು ಹಾಗೂ ರಸ್ತೆ ಸುಧಾರಣೆಗೆ ಆದ್ಯತೆ ಕೊಡುತ್ತೇನೆ’ ಎಂದು ಜಿಪಂ ಸದಸ್ಯೆ ದೇವಿಶೀಲಾ ಮದನೆ ಹೇಳುತ್ತಾರೆ.ಪ್ರತಾಪುರ, ಬೆಟಬಾಲ್ಕುಂದಾ, ಜಾನಾಪುರ, ಗೌರ, ಖಂಡಾಳ, ನೀಲಕಂಠ, ಮೋರಖಂಡಿ, ಘೋಟಾಳ, ಉಮಾಪುರ, ಚಂಡಕಾಪುರ, ಗೌರತಾಂಡಾ, ನೀಲಕಂಠ ತಾಂಡಾ, ಪ್ರತಾಪುರ ತಾಂಡಾ, ಖಾನಾಪುರ, ಖಾನಾಪುರ ವಾಡಿ, ತಳಭೋಗ, ಹಳ್ಳಿ, ಮೋರಖಂಡಿ ವಾಡಿ, ಲಾಹೇಶ್ವರ, ಚೌಕಿವಾಡಿ, ಜಾಜನಮುಗಳಿ, ರಾಮತೀರ್ಥ, ಮದನೆವಾಡಿ, ಆನಂದವಾಡಿ, ಬೇಡರವಾಡಿ, ಕೊಂಗೆವಾಡಿ, ಮನ್ನಳ್ಳಿ, ಬಂಡಗರವಾಡಿ ಗ್ರಾಮಗಳು ಈ ಕ್ಷೇತ್ರಕ್ಕೊಳಪಟ್ಟಿವೆ.ಈ ಕ್ಷೇತ್ರದಲ್ಲಿ ಹೆಚ್ಚಿನ ಕೆರೆಗಳಿದ್ದು ಬೆಟಬಾಲ್ಕುಂದಾ ಕೆರೆ ಬಿಟ್ಟರೆ ಅನ್ಯ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಬೆಟಬಾಲ್ಕುಂದಾ ಕೆರೆ ಬಹಳಷ್ಟು ಹಳೆಯದಾಗಿದ್ದು ತಾಲ್ಲೂಕಿನಲ್ಲಿ 2ನೇ ದೊಡ್ಡ ಕೆರೆಯಾಗಿದೆ. ಇದರಲ್ಲಿನ ಹೂಳು ತೆಗೆದು ಅಭಿವೃದ್ಧಿ ನಡೆಸದ ಕಾರಣ ಒಂದು ವಾರದ ಹಿಂದೆ ಇದು ಒಡೆದಿದ್ದರಿಂದ ರೈತರಿಗೆ ಹಾನಿಯಾಗಿದೆ.ನೀಲಕಂಠ ಗ್ರಾಮದ ಅರ್ಧ ರಸ್ತೆಗೆ ಮಾತ್ರ ಡಾಂಬರು ಹಾಕಲಾಗಿದೆ. ನೀಲಕಂಠ ವಾಡಿಗೆ ರಸ್ತೆ ಇಲ್ಲ. ಗೌರ ರಸ್ತೆಯಲ್ಲಿನ ಸೇತುವೆಗಳು ಕುಸಿದು ಸಂಚಾರಕ್ಕೆ ತೊಂದರೆಯಾಗಿದೆ. ಪ್ರತಾಪುರ ರಸ್ತೆಯೂ ಹದಗೆಟ್ಟಿದ್ದು ಆಗಾಗ ತಗ್ಗುಗಳನ್ನು ಭರ್ತಿ ಮಾಡುವ ಕಾರ್ಯ ಮಾತ್ರ ನಡೆಯುತ್ತದೆ. ಉಮಾಪುರದಲ್ಲಿನ ನವಗ್ರಾಮ ಯೋಜನೆಯ ಮನೆಗಳ ಕಾಮಗಾರಿ ಅರ್ಧಕ್ಕೆ ನಿಂತಿದೆ. ಪ್ರತಾಪುರ, ಖಾನಾಪುರ ವಾಡಿ ಶಾಲೆಯಲ್ಲಿನ ಶಿಕ್ಷಕರ ಸ್ಥಾನಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.ಸದಸ್ಯರ ಭರವಸೆ

ಘೋಟಾಳಕ್ಕೆ ಪದವಿಪೂರ್ವ ಕಾಲೇಜು ಹಾಗೂ ಪ್ರತಾಪುರಕ್ಕೆ ಪ್ರೌಢಶಾಲೆ ಮಂಜೂರಾತಿಗೆ ಪ್ರಯತ್ನಿಸುತ್ತೇನೆ. ಘೋಟಾಳವಾಡಿ ಆಶ್ರಮ ಶಾಲೆಗೆ ವಿದ್ಯುತ್ ಸಂಪರ್ಕ ಒದಗಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಬಸವಕಲ್ಯಾಣದಿಂದ ಪ್ರತಾಪುರ ಮಾರ್ಗವಾಗಿ ಹೋಗುವ ರಸ್ತೆ ಕಾಮಗಾರಿ ಶೀಘ್ರ ನಡೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸದಸ್ಯೆ ದೇವಿಶೀಲಾ ಸುಧಾಕರ ಮದನೆ ಹೇಳುತ್ತಾರೆ.ಇವರ ಸ್ವಂತ ಗ್ರಾಮ ಘೋಟಾಳ. ಎಸ್ಸೆಸ್ಸೆಲ್ಸಿವರೆಗೆ ಓದಿದ್ದಾರೆ. ಪತಿ ಸುಧಾಕರ ಮದನೆ ಗ್ರಾಮದ ಪಿ.ಕೆ.ಪಿ.ಎಸ್ ಅಧ್ಯಕ್ಷರಾಗಿದ್ದಾರೆ. ಗ್ರಾಮದಲ್ಲಿನ ರಾಮನಾಥ ಮಹಾರಾಜ ದೇವಸ್ಥಾನದ ಸುಧಾರಣೆಗೆ ಶ್ರಮಿಸಿದ್ದಾರೆ. ಕುರುಬ (ಧನಗರ) ಸಮಾಜ ಸಂಘದ ಪದಾಧಿಕಾರಿಯಾಗಿ ಸಮಾಜದ ಅಭಿವೃದ್ಧಿಗೆ ಯತ್ನಿಸಿದ್ದಾರೆ. ಪತಿ ಸಮಾಜ ಮತ್ತು ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರಿಂದ ತಾವು ಚುನಾವಣೆಗೆ ನಿಲ್ಲುವಂತಾಯಿತು ಎನ್ನುತ್ತಾರೆ.ಬಂಡಗರವಾಡಿಯಿಂದ ಘೋಟಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣಕ್ಕೆ ಹಣ ಮಂಜೂರಾಗಿದೆ. ಬೆಟಬಾಲ್ಕುಂದಾ ಕೆರೆ ದುರಸ್ತಿ ಹಾಗೂ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಜಾಜನಮುಗಳಿ ಹಾಗೂ ಪ್ರತಾಪುರನ್ನು ಸುವರ್ಣ ಗ್ರಾಮ ಯೋಜನೆಯಲ್ಲಿ ಆಯ್ಕೆ ಮಾಡಿದ್ದು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಘೋಟಾಳ, ರಾಮತೀರ್ಥ, ಮೋರಖಂಡಿ, ಜಾನಾಪುರ ಮತ್ತು ಪ್ರತಾಪುರದಲ್ಲಿ ರಾಜೀವಗಾಂದಿ ಸಾಂಸ್ಕೃತಿಕ ಭವನ ನಿರ್ಮಿಸಲು ಪ್ರತಿಯೊಂದಕ್ಕೆ 10 ಲಕ್ಷ ರೂಪಾಯಿ ಮಂಜೂರಾಗಿವೆ. ತಳಭೋಗ ಕೆರೆ ಅಭಿವೃದ್ಧಿಗೆ ರೂ. 15 ಲಕ್ಷ, ಮೋರಖಂಡಿ ಲಾಲತಲಾಬ್‌ಗೆ 10 ಲಕ್ಷ, ಕಾಲಾತಲಾಬ್‌ಗೆ 5 ಲಕ್ಷ ಮತ್ತು ಗಾಂವತಲಾಬ್‌ಗೆ 15 ಲಕ್ಷ ರೂಪಾಯಿ ಮಂಜೂರು ಮಾಡಿಸಲಾಗಿದೆ. ಎಲ್ಲೆಡೆ ಉದ್ಯೋಗ ಖಾತರಿ ಕೆಲಸ ನಡೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ.

      

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry