ಶಾಲೆಗಳನ್ನು ಮುಚ್ಚಿದರೆ ಕೊಚ್ಚೆಗುಂಡಿಗಳೇ ಇರುವುದಿಲ್ಲ!

ಮಂಗಳವಾರ, ಜೂಲೈ 23, 2019
26 °C

ಶಾಲೆಗಳನ್ನು ಮುಚ್ಚಿದರೆ ಕೊಚ್ಚೆಗುಂಡಿಗಳೇ ಇರುವುದಿಲ್ಲ!

Published:
Updated:

ರಾಜ್ಯ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ)ವು, ಜುಲೈ 16 ರಿಂದ 22 ರವರೆಗೆ  ಶಾಲಾ ಬಂದ್ ನ್ನು ಘೋಷಿಸಿದೆ.  ಶಿಕ್ಷಣ ಹಕ್ಕು ಕಾಯ್ದೆ ಯ ನಿಯಮದ ಪ್ರಕಾರ ಪ್ರತಿ ಅನುದಾನರಹಿತ ಶಾಲೆಯೂ (ಅಲ್ಪ ಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ) ತನ್ನ ನೆರೆಹೊರೆಯಲ್ಲಿರುವ ಹಿಂದುಳಿದ, ದಲಿತ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಮಕ್ಕಳಿಗೆ ತನ್ನ ಶಾಲೆಯ ಒಟ್ಟು ಸೀಟುಗಳಲ್ಲಿ ಶೇ. 25ರಷ್ಟನ್ನು ಮೀಸಲಿರಿಸಬೇಕೆಂಬುದು ಇಂತಹ  ಹೋರಾಟಕ್ಕೆ ಕಾರಣ.ವಾಸ್ತವದಲ್ಲಿ ಈ ಯಾವ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳೂ, ಈ ಶಾಲೆಗಳನ್ನು ನಡೆಸುತ್ತಿರುವುದು  ಸಮಾಜದ ಉದ್ಧಾರಕ್ಕಾಗಿಯಲ್ಲ. ಇವರ‌್ಯಾರೂ ಸಮಾಜದ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ನಿಸ್ವಾರ್ಥಿ ಸಂತರಲ್ಲ. ಆಂಗ್ಲ ಮಾಧ್ಯಮ, ಸಿಬಿಎಸ್‌ಇ ಪಠ್ಯಕ್ರಮ, ಉತ್ತಮ ಶಿಕ್ಷಣ ಮೊದಲಾದವುಗಳ ಕುರಿತು ಇಂದು ಪೋಷಕರಲ್ಲಿ ಮೂಡಿಸಲಾಗಿರುವ ಗೀಳು ಮತ್ತು ಗೊಂದಲಗಳನ್ನು ಬಂಡವಾಳವಾಗಿಸಿಕೊಂಡಿರುವ ಸಂಸ್ಥೆಗಳಿವು! ಇವುಗಳ ಆಡಳಿತ ಮಂಡಳಿಗಳಲ್ಲಿ ಹೆಚ್ಚಿನವುಗಳು ದೊಡ್ಡ ವ್ಯಾಪಾರಿಗಳ, ಮಠಾಧೀಶರ ಅಥವಾ ರಾಜಕಾರಣಿಗಳ ಹಿಡಿತದಲ್ಲಿವೆ. ಕನ್ನಡ ಮಾಧ್ಯಮ ಶಾಲೆಗೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ನಡೆಸುತ್ತಿರುವಂತಹ ತಾವು ಕೊಡುವ ಶಿಕ್ಷಣದ ಗುಣಮಟ್ಟಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಹಣವನ್ನು ಪೋಷಕರಿಂದ ಸುಲಿಗೆ ಮಾಡುತ್ತಿರುವಂತಹ, ಬಿಡಿಗಾಸಿಗೆ ತನ್ನ ಶಿಕ್ಷಕರನ್ನು ಮತ್ತು ಸಿಬ್ಬಂದಿಯನ್ನು ಜೀತ ಮಾಡಿಸುತ್ತಿರುವಂತಹ, ಸರಿಯಾದ ಆಡಿಟ್ ವರದಿ ಸಲ್ಲಿಸದೇ ಸರ್ಕಾರಕ್ಕೆ ಕೋಟಿಗಟ್ಟಲೆ ತೆರಿಗೆ ವಂಚಿಸುತ್ತಿರುವಂತಹ ಈ ಶಿಕ್ಷಣ ಸಂಸ್ಥೆಗಳು, ತಮ್ಮ ಲಾಭಗಳಿಕೆಯಲ್ಲಿ ಏರುಪೇರಾಗಬಹುದೇನೋ ಎಂಬ ಶಂಕೆ ಮೂಡಿದ ಕೂಡಲೇ ಉಗ್ರ ಕ್ರಮಗಳಿಗೆ ಮುಂದಾಗಿವೆ. ತಮ್ಮ ವಿದ್ಯಾರ್ಥಿಗಳ ಹಿತವನ್ನು ಕಡೆಗಣಿಸಿ  ಬಂದ್  ಘೋಷಿಸಿವೆ.ಭಾರತದಲ್ಲಿ  ಶಿಕ್ಷಣದ ಹಕ್ಕು  ಮೂಲಭೂತ ಹಕ್ಕುಗಳ ಪಟ್ಟಿಗೆ ಸೇರದೇ ಇದ್ದರೂ ರಾಜ್ಯ ನಿರ್ದೇಶಕ ತತ್ವಗಳ ಕಲಂ 41 ಮತ್ತು 45ರ ಪ್ರಕಾರ ಮೂಲಭೂತ ಹಕ್ಕಿನಷ್ಟೇ ಪ್ರಾಮುಖ್ಯ ಅದಕ್ಕೆ ಸಿಕ್ಕಿದೆ.ಅದರಂತೆ ಭಾರತದಲ್ಲಿ 14 ವರ್ಷ ವಯಸ್ಸಿನವರೆಗೆ ಪ್ರತಿಯೊಂದು ಮಗುವಿಗೂ ಕಡ್ಡಾಯವಾಗಿ ಮತ್ತು ಉಚಿತವಾಗಿ ಶಿಕ್ಷಣ ನೀಡುವುದು ಸರ್ಕಾರದ ಆದ್ಯ ಕರ್ತವ್ಯಗಳಲ್ಲಿ ಒಂದು.  ಮುಂದಿನ ಹತ್ತು ವರ್ಷಗಳಲ್ಲಿ ದೇಶದ ಪ್ರತಿಯೊಂದು ಮಗುವೂ ಶಿಕ್ಷಣ ಪಡೆದಿರಬೇಕು  ಎಂದು ಬೇರಾವ ರಾಜ್ಯ ನಿರ್ದೇಶನಾ ತತ್ವಕ್ಕೂ ಇಲ್ಲದ ಸಮಯ ಮಿತಿಯನ್ನು ವಿಧಿಸಿರುವುದೇ, ಸಂವಿಧಾನ ಕರ್ತೃಗಳು ಇದಕ್ಕೆ ನೀಡಿರುವ ಮಹತ್ವವನ್ನು ತೋರಿಸುತ್ತದೆ. ಆದರೆ ನಮ್ಮ ಸರ್ಕಾರಗಳು ಇದುವರೆಗೂ ಇದನ್ನು ನಿರ್ಲಕ್ಷಿಸುತ್ತಲೇ ಬಂದಿರುವುದರಿಂದಲೇ ಇಂದಿಗೂ ಭಾರತದ ಶೇ.12ಕ್ಕಿಂತ ಹೆಚ್ಚು ಮಕ್ಕಳು ಶಾಲೆಯ ಮೆಟ್ಟಿಲನ್ನೂ ತುಳಿದಿಲ್ಲ.ಆದರೆ ಈ ಪರಿಸ್ಥಿತಿಗೆ ಇನ್ನೊಂದು ಮುಖವೂ ಇದೆ. ಸಂವಿಧಾನದಲ್ಲಿ ಹೇಳಿರುವ ಎಲ್ಲಾ ಹಕ್ಕುಗಳೂ ಪ್ರಜೆಗಳಿಗೆ ದಕ್ಕುವಂತೆ ಮಾಡುವುದು ಸರ್ಕಾರದ ಹೊಣೆ; ಆದರೆ ಇದು ಕೇವಲ ಸರ್ಕಾರದ ಹೊಣೆ ಮಾತ್ರವೇ ಅಲ್ಲ; ಭಾರತದ ಪ್ರತಿಯೊಬ್ಬ ಪ್ರಜೆಗೂ ಕೂಡಾ ಈ ಹೊಣೆಗಾರಿಕೆ ಇರುತ್ತದೆ. ಹಾಗೆ ಭಾರತದ ಯಾವುದೇ ಪ್ರಜೆಯನ್ನು ಅಥವಾ ಸಂಸ್ಥೆಯನ್ನು ತನ್ನ ಕರ್ತವ್ಯ ಈಡೇರಿಸುವಲ್ಲಿ ಸರ್ಕಾರ ಉಪಕರಣವಾಗಿ ತೊಡಗಿಸಬಹುದು (ಇನ್‌ಸ್ಟ್ರುಮೆಂಟ್ ಆಫ್ ಸ್ಟೇಟ್); ಹಾಗೆಯೇ ಈ ಎಲ್ಲರಿಗೂ ಸರ್ಕಾರಕ್ಕೆ ನೆರವಾಗುವುದು ಪರ್ಯಾಯ ಹೊಣೆಗಾರಿಕೆ (parallel responsibility) (when a right is a fundamental right it is the bounden duty of the state to ensure the same. At the same time even the private  persons have parallel responsibility along with the state) ಆಗಿರುತ್ತದೆ ಎಂದು ಇದೇ 25% ಸೀಟುಗಳ ವಿಚಾರದಲ್ಲಿ  ರಾಜಸ್ತಾನದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಹೂಡಿದ್ದ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ಹೇಳಿದೆ! ಈ ಹಿನ್ನೆಲೆಯಲ್ಲಿ ನಾವು  `ಕುಸ್ಮಾ ` ಒಡ್ಡಿರುವ ಬೆದರಿಕೆ  ಪರಿಶೀಲಿಸಬೇಕಿದೆ.ತನ್ನ ಬಂದ್‌ಗೆ ಅದು ಕಾಯ್ದೆಯು  ಅಲ್ಪಸಂಖ್ಯಾತ ಸಂಸ್ಥೆಗಳು  ಎಂಬುದಕ್ಕೆ ಸರಿಯಾದ ವ್ಯಾಖ್ಯಾನ ನೀಡದಿರುವುದು, ನೋಟೀಸ್ ನೀಡುತ್ತಿರುವುದು, ಅಧಿಕಾರಿಗಳ ದುರ್ವರ್ತನೆ ಇತ್ಯಾದಿ ಏನೇ ಕಾರಣ ನೀಡಿದರೂ, ತಮ್ಮ ಸಂಸ್ಥೆಯ 25% ಸೀಟುಗಳನ್ನು ಆರ್ಥಿಕವಾಗಿ ದುರ್ಬಲ, ಹಿಂದುಳಿದ, ದಲಿತ ವರ್ಗಗಳ ಮಕ್ಕಳಿಗೆ ಬಿಟ್ಟುಕೊಡಬೇಕೆಂಬ ಸಂಕಟವೇ ಇದರ ಹಿಂದಿದೆಯೆಂಬುದು ನಿಚ್ಚಳ. ಅದೂ ಕೂಡಾ ಉಚಿತವಾಗಿಯಲ್ಲ; 25% ಅಡಿಯಲ್ಲಿ  ಖಾಸಗಿ ಶಾಲೆಗೆ ದಾಖಲಾಗುವ ಪ್ರತಿ ಮಗುವಿಗೆ ಸರ್ಕಾರ ವರ್ಷಕ್ಕೆ 11,800 ರೂಪಾಯಿಗಳನ್ನು ಸಾರ್ವಜನಿಕ ಹಣದಿಂದ ಖಾಸಗಿ ಸಂಸ್ಥೆಗಳ ಬಾಯಿಗೆ ಸುರಿಯುತ್ತಿದೆ. ಇಷ್ಟಾದರೂ ಆರ್‌ಟಿಇ ಜಾರಿ ಮಾಡುವುದನ್ನು ಮುಂದೂಡಬೇಕೆಂದು ಖಾಸಗಿ ಸಂಸ್ಥೆಗಳು ಒತ್ತಾಯಿಸುವುದರ ಹಿಂದೆ, ಆ ಆಡಳಿತ ಮಂಡಳಿಗಳ ವರ್ಗ ಧೋರಣೆ, ಜಾತಿವಾದಿ ಧೋರಣೆ ಎದ್ದು ಕಾಣುತ್ತಿದೆ.ಕರ್ನಾಟಕದಲ್ಲಿ ಆರ್‌ಟಿಇ ಜಾರಿಮಾಡಲು ಹೊರಟ ಆರಂಭದಲ್ಲಿ, ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಸಂಸ್ಥೆಯೊಂದು  `ಹಿಂದುಳಿದ ವರ್ಗಗಳ ಮಕ್ಕಳು ಬಂದು ನಮ್ಮ ಶಾಲೆಯ ವಾತಾವರಣ ಕಲುಷಿತಗೊಳ್ಳಲು ನಾವು ಅವಕಾಶ ನೀಡುವುದಿಲ್ಲ.  ಸರ್ಕಾರ ಅದು ಹೇಗೆ 25% ಮಕ್ಕಳನ್ನು ನಮ್ಮ ಸಂಸ್ಥೆಯೊಳಗೆ ಸೇರಿಸುತ್ತದೋ ನೋಡುತ್ತೇವೆ~  ಎಂಬ ಉದ್ಧಟತನದ ಸವಾಲೆಸೆದದ್ದನ್ನು ಯಾರೂ ಮರೆತಿಲ್ಲ.ಆಗಲೇ  `ನಾವೇನು ಸರ್ಕಾರದಿಂದ ಅನುದಾನ ಪಡೆಯುತ್ತಿಲ್ಲ ನಾವ್ಯಾಕೆ ಸರ್ಕಾರದ ಮಾತು ಕೇಳಬೇಕು~ ಎಂಬ ಪ್ರಶ್ನೆಯೆತ್ತಿದ್ದವು. ಅದೇ ಮಾತನ್ನೇ  `ಕುಸ್ಮಾ~ ಅಧ್ಯಕ್ಷ ಶರ್ಮಾ ಸಮುದ್ರಕ್ಕೆ ಕೊಚ್ಚೆ ನೀರು ಸೇರುವ ಮಾತಿನ ಮೂಲಕ ಮುಂದುವರೆಸಿದ್ದಾರೆ.ಈ ಶಿಕ್ಷಣ ಸಂಸ್ಥೆಗಳು ಸರ್ಕಾರದ ಅನುದಾನ ಪಡೆಯದಿದ್ದರೂ ಚಾರಿಟಬಲ್ ಟ್ರಸ್ಟ್‌ಗಳನ್ನು ಅಥವಾ ಎಜುಕೇಷನ್ ಸೊಸೈಟಿಗಳನ್ನು ಸ್ಥಾಪಿಸಿಕೊಂಡು ಹತ್ತು ಹಲವು ರೀತಿಗಳಲ್ಲಿ ಸರ್ಕಾರದ ನೆರವನ್ನು ಬಾಚಿಕೊಂಡಿರುವಂಥವೇ.ಒಂದು ವೇಳೆ ಅದಿಲ್ಲವೆಂದುಕೊಂಡರೂ ಅವು ಸಂವಿಧಾನವೇ ತಮಗೆ ವಿಧಿಸಿರುವ ಪರ್ಯಾಯ ಹೊಣೆಗಾರಿಕೆ ಎಂದು ನುಣುಚಿಕೊಳ್ಳವಂತೆಯೇ ಇಲ್ಲ. ಅಷ್ಟಕ್ಕೂ ಭಾರತದಲ್ಲಿ ಶಿಕ್ಷಣ ಇನ್ನೂ  ಸೇವಾಕ್ಷೇತ್ರವೇ!ಸರ್ಕಾರಗಳು ಮತ್ತು ನ್ಯಾಯಾಂಗ ಉನ್ನಿಕೃಷ್ಣನ್ ತೀರ್ಪು, 2002ರ ಟಿ.ಎಂ.ಎ ಪೈ ತೀರ್ಪುಗಳಲ್ಲಿ ಕಡ್ಡಾಯವಾಗಿ  ಸೇವೆಯಾಗಿದ್ದ ಶಿಕ್ಷಣವನ್ನು ಒಂದು ಮಟ್ಟಕ್ಕೆ ಸಡಿಲಗೊಳಿಸಿದ್ದರೂ, ಸಂವಿಧಾನದ ಚೌಕಟ್ಟನ್ನು ಮೀರುವುದು ಸಾಧ್ಯವಾಗಿಲ್ಲ.ಆದರೆ ಅದನ್ನು ಬಂಡವಾಳ ಹೂಡಿ ಲಾಭ ತೆಗೆಯುವ ಅನಿಷ್ಟ ಉದ್ದಿಮೆಯ ಕೀಳುಸ್ಥಿತಿಗೆ ಇಳಿಸಿರುವುದು ಇಂದು ಬೀದಿಗಿಳಿದಿರುವ ಇಂತಹ ಲಾಭಕೋರ ಶಿಕ್ಷಣ ಸಂಸ್ಥೆಗಳೇ! ಶಿಕ್ಷಣವೆಂಬ ಪವಿತ್ರ ಕರ್ತವ್ಯವನ್ನು ವ್ಯಾಪಾರವನ್ನಾಗಿಸಿರುವ ಕೊಚ್ಚೆಗುಂಡಿಗಳಿವು.ಒಂದಿಡೀ ಸಮಾಜದ ಏಳ್ಗೆಗೆ, ತಲೆತಲೆಮಾರುಗಳ ಅಭ್ಯುದಯಕ್ಕೆ ಅತಿಮುಖ್ಯವಾದ ಅಡಿಪಾಯವಾದ ಶಿಕ್ಷಣ ವ್ಯವಸ್ಥೆಯನ್ನು ಇಂತಹ ಧನದಾಹಿಗಳ ವಶಕ್ಕೆ ಒಪ್ಪಿಸಿರುವುದರಲ್ಲಿ ಸರ್ಕಾರದ ಖಾಸಗೀಕರಣದ ಪರವಾದ ನಿಲುವುಗಳನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.ಈಗಲೂ ಕೂಡಾ ಸರ್ಕಾರಿ ಶಾಲೆ ಮುಚ್ಚುವುದರ ವಿರುದ್ಧ, ಭಾಷಾನೀತಿಯ ಗೊಂದಲ ಬಗೆಹರಿಸುವುದಕ್ಕಾಗಿ, ಸಮಾನ ಶಿಕ್ಷಣವ್ಯವಸ್ಥೆಗಾಗಿ ದಶಕಗಳಿಂದ ನಿರಂತರವಾಗಿ ಹೋರಾಡುತ್ತಿರುವ ಪ್ರಾಮಾಣಿಕ ಸಂಘಟನೆಗಳನ್ನು, ಸಾಹಿತಿ-ಚಿಂತಕರನ್ನು ಇದುವರೆಗೂ ಮಾತುಕತೆಗೆ ಕರೆಯದ ಸರ್ಕಾರ, ಖಾಸಗಿ ಶಿಕ್ಷಣ ವ್ಯಾಪಾರಿಗಳು ಒಮ್ಮೆ ಗುಟುರು ಹಾಕಿದೊಡನೆ ಬಾಲ ಮುದುರಿಕೊಂಡು ಅವರೊಂದಿಗೆ ಮಾತಿಗೆ ಕೂತಿದೆ!ಈಗಾಗಲೇ ಶಿಕ್ಷಣ ವ್ಯವಸ್ಥೆಯಲ್ಲಿನ ಅಸಂಖ್ಯಾತ ಲೋಪದೋಷಗಳನ್ನು ಸರಿಪಡಿಸಲು ಹೆಣಗುತ್ತಿರುವವರಿಗೆ ಇದು ನಿಜಕ್ಕೂ ಆತಂಕವನ್ನೂ, ಆಕ್ರೋಶವನ್ನೂ ಉಂಟುಮಾಡಿದೆ. ಶಿಕ್ಷಣ ಹಕ್ಕು ಕಾಯ್ದೆಯ ಒಂದು ಸಣ್ಣ ಪ್ರಯತ್ನವನ್ನೂ ಶಾಲೆಗಳು ಒಪ್ಪುವಂತೆ ಮಾಡಲಾಗದ ಸರ್ಕಾರದ ನಿರ್ವೀರ್ಯತೆ ಅಪಾಯಕಾರಿ!ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯ ಅತಿದೊಡ್ಡ ಸಮಸ್ಯೆಯೆಂದರೆ ಸರ್ಕಾರಿ-ಖಾಸಗಿ ತಾರತಮ್ಯವಾಗಿದೆ.  `ಕುಸ್ಮಾ~ ವು ಏಳು ದಿನಗಳ  ಶಾಲಾ ಬಂದ್  ಬದಲಿಗೆ ಶಾಶ್ವತವಾಗಿಯೇ ತನ್ನೆಲ್ಲಾ ಶಾಲೆಗಳನ್ನು ಮುಚ್ಚಿಬಿಟ್ಟರೆ (ಮತ್ತು ಅಂತಹ ಉಳಿದೆಲ್ಲಾ ಖಾಸಗಿ ಶಾಲೆಗಳನ್ನೂ) ಆ ಸಮಸ್ಯೆ ಒಮ್ಮೆಗೇ ಬಗೆಹರಿಯುತ್ತದೆ! ಆದ್ದರಿಂದ ಅವುಗಳನ್ನು ಶಾಶ್ವತವಾಗಿ ಮುಚ್ಚಿ, ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry