ಶಾಲೆಗಳನ್ನು ಮುಚ್ಚುವುದು ಬೇಡ

7

ಶಾಲೆಗಳನ್ನು ಮುಚ್ಚುವುದು ಬೇಡ

Published:
Updated:

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಉಂಟಾಗುತ್ತಿದೆ ಎಂಬ ನೆಪದಿಂದ ರಾಜ್ಯ ಸರ್ಕಾರವು ಬರುವ ಮಾರ್ಚ್ ಹೊತ್ತಿಗೆ 3,174 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಅತ್ಯಂತ ಕರಾಳ ನಿರ್ಧಾರ. ಬಿಜೆಪಿ ಸರ್ಕಾರದ ಈ ನಿರ್ಧಾರದಿಂದ ಅನ್ಯಾಯಕ್ಕೊಳಗಾಗುವವರು ಹಳ್ಳಿಗಳಲ್ಲಿರುವ ಕಡು ಬಡವರ ಮಕ್ಕಳು ಮತ್ತು ದೂರದ ಶಾಲೆಗಳಿಗೆ ಹೋಗಲಾರದ ಹೆಣ್ಣುಮಕ್ಕಳು. ಇದರಿಂದಾಗಿ ಸರ್ಕಾರವು ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನೇ ನಿರಾಕರಿಸಿದಂತಾಗಿದೆ. ಸರ್ವ ಶಿಕ್ಷಣ ಅಭಿಯಾನ ಯೋಜನೆ ಜಾರಿಗೆ ಬಂದ ಮೇಲೆ ಕೇಂದ್ರ ಸರ್ಕಾರ ಪ್ರಾಥಮಿಕ ಶಿಕ್ಷಣಕ್ಕಾಗಿ ಕೋಟಿಗಟ್ಟಲೆ ಹಣ ನೀಡುತ್ತಿದೆ. ಅದನ್ನು ಬಳಸಿಕೊಳ್ಳಲು ವಿಫಲವಾಗಿರುವ ಕರ್ನಾಟಕ ಸರ್ಕಾರ ಶಾಲೆಗಳನ್ನೇ ಮುಚ್ಚಲು ಹೊರಟಿರುವುದು ಖಂಡನೀಯ. ಇದು ಬಡಮಕ್ಕಳನ್ನು ಅಕ್ಷರಜ್ಞಾನದಿಂದ ವಂಚಿತಗೊಳಿಸುವ ಅಮಾನವೀಯ ನಿರ್ಧಾರ. ಇಂತಹ ಮನಃಸ್ಥಿತಿಯ ಅಧಿಕಾರಸ್ಥರಿಗೆ `ಬಡ~ ಮತ್ತು `ಗ್ರಾಮೀಣ~ ಭಾರತದ ಮುಖದ ಪರಿಚಯವೇ ಇದ್ದಂತ್ತಿಲ್ಲ. ಬಾಯಲ್ಲಿ ಕನ್ನಡದ ಮಂತ್ರ ಜಪಿಸುವ ಇದೇ ಸರ್ಕಾರ ಪ್ರತಿ ವರ್ಷವೂ ಓಣಿ ಓಣಿಗಳಲ್ಲಿ ಮಾತೃಭಾಷೆ ಶಿಕ್ಷಣದ ಹೆಸರಿನಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಉದಾರವಾಗಿ ಅನುಮತಿ ನೀಡುತ್ತಿದೆ. ಇದನ್ನು ಗಮನಿಸಿದರೆ ಶಿಕ್ಷಣವನ್ನು ಖಾಸಗಿಯವರಿಗೆ ಕೊಟ್ಟು ತನ್ನ ಸಾಮಾಜಿಕ ಹೊಣೆಯಿಂದ ಕೈತೊಳೆದುಕೊಳ್ಳಲು ಬಿಜೆಪಿ ಸರ್ಕಾರ ಉತ್ಸುಕವಾಗಿರುವುದು ಸ್ಪಷ್ಟವಾಗಿದೆ. ಜನಹಿತ ಬಯಸುವ ಯಾವುದೇ ಒಂದು ನಾಗರಿಕ ಸರ್ಕಾರ ಮಾಡುವ ಕೆಲಸ ಇದಲ್ಲ.

ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳೇ ಬರುತ್ತಿಲ್ಲ ಎನ್ನುವ ವಾದ ಕೆಲಮಟ್ಟಿಗೆ ನಿಜವಿರಬಹುದು. ಸರ್ಕಾರಿ ಶಾಲೆಗಳಿಗೆ ಜನರು ಮಕ್ಕಳನ್ನು ಏಕೆ ಕಳುಹಿಸುತ್ತಿಲ್ಲ ಎನ್ನುವುದನ್ನು ಗಂಭೀರವಾಗಿ ಚಿಂತಿಸಿ ಅದಕ್ಕೆ ಪರಿಹಾರ ಕಂಡುಹಿಡಿಯಬೇಕು. ಇದು ನೆಗಡಿ ಬಂದಿತೆಂದು ಮೂಗನ್ನೇ ಕತ್ತರಿಸಿ ಹಾಕುವ ಮೂರ್ಖತನ. ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳು ಇತ್ತೀಚಿನ ವರ್ಷಗಳಲ್ಲಿ ಜನರಿಗೆ ಹೆಚ್ಚು ಆಕರ್ಷಣೀಯವಾಗಿ ಕಂಡಿರುವುದು ನಿಜ. ಪ್ರಾಥಮಿಕ ಹಂತದಲ್ಲಿಯೇ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡುವವರಿಗೆ ಮುಂದೆ ಹೆಚ್ಚು ಉದ್ಯೋಗಾವಕಾಶಗಳು ಮುಕ್ತವಾಗಿವೆ ಎನ್ನುವ ಭ್ರಮೆಯನ್ನು ಹುಟ್ಟುಹಾಕಲಾಗಿದೆ. ಆದರೆ ಮಾತೃಭಾಷೆಯಲ್ಲಿ ಕಲಿತ ಮಕ್ಕಳು ಹೆಚ್ಚು ವಿಷಯಜ್ಞಾನ ಉಳ್ಳವರಾಗುತ್ತಾರೆ ಎಂಬುದನ್ನು ಜಗತ್ತಿನಾದ್ಯಂತ ಶಿಕ್ಷಣ ತಜ್ಞರು ಪ್ರತಿಪಾದಿಸಿದ್ದಾರೆ. ಇದೇ ಅಭಿಪ್ರಾಯವನ್ನೇ ನಾಡಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕರಾದ ಚಂದ್ರಶೇಖರ ಕಂಬಾರ, ಯು.ಆರ್.ಅನಂತಮೂರ್ತಿ ಅವರೂ ಹೇಳಿದ್ದಾರೆ. ಇದನ್ನು ಜನರಲ್ಲಿ ಮನವರಿಕೆ ಮಾಡಿಕೊಡುವುದಕ್ಕೆ ರಾಜ್ಯ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಉಚಿತ ಪುಸ್ತಕ, ಸಮವಸ್ತ್ರ ಮತ್ತು ಮಧ್ಯಾಹ್ನದ ಊಟ ನೀಡಿದರೂ ಸರ್ಕಾರಿ ಶಾಲೆಗಳು ಏಕೆ ಆಕರ್ಷಣೆ ಕಳೆದುಕೊಂಡಿವೆ ಎನ್ನುವುದರ ಬಗೆಗೆ ಗಂಭೀರ ಚಿಂತನೆ ನಡೆಯಬೇಕು. ಸರ್ಕಾರಿ ಶಾಲೆಗಳಲ್ಲಿನ ಗುಣಮಟ್ಟವನ್ನು ಸುಧಾರಿಸಬೇಕು.ಸರ್ಕಾರಿ ಶಾಲೆಗಳನ್ನು ಮುಚ್ಚುವುದರಿಂದ ಆಂಗ್ಲಮಾಧ್ಯಮದ ಖಾಸಗಿ ಶಾಲೆಗಳಿಗೆ ಲಾಭವಾಗುತ್ತದೆ. ಈ ದುಷ್ಟ ಉದ್ದೇಶ ಸರ್ಕಾರಕ್ಕೆ ಇಲ್ಲದಿದ್ದರೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂರ್ಖ ನಿರ್ಧಾರದಿಂದ ಹಿಂದೆ ಸರಿಯಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry