ಶುಕ್ರವಾರ, ನವೆಂಬರ್ 22, 2019
20 °C

ಶಾಲೆಗಳಲ್ಲಿ ಪುಸ್ತಕ ಮಾರಾಟ ತಡೆಗೆ ಮನವಿ

Published:
Updated:

ಬಳ್ಳಾರಿ: ನಗರದಲ್ಲಿರುವ ಖಾಸಗಿ ಶಾಲೆ, ಕಾಲೇಜುಗಳಲ್ಲಿ ಅಕ್ರಮವಾಗಿ ನೋಟ್ ಪುಸ್ತಕ, ಪಠ್ಯ ಪುಸ್ತಕ ಹಾಗೂ ಪಾಠೋಪಕರಣ ಹಾಗೂ ಶಾಲಾ ಸಾಮಗ್ರಿಗಳನ್ನು ಮಾರಾಟ ಮಾಡದಂತೆ ತಡೆಯುವಂತೆ ಕೋರಿ ಪುಸ್ತಕ ಅಂಗಡಿ ಮಾಲೀಕರ ಸಂಘದ ಜಿಲ್ಲಾ ಘಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಇತ್ತೀಚೆಗೆ ಮನವಿ ಸಲ್ಲಿಸಿದೆ.ನಗರದ ವಿವಿಧ ಖಾಸಗಿ ಶಾಲೆ ಹಾಗೂ ಕಾಲೇಜುಗಳಲ್ಲಿ ಪಾಲಕರಿಂದ ಅಧಿಕ ಶುಲ್ಕ ಸಂಗ್ರಹಿಸಿ, ನೋಟ್ ಪುಸ್ತಕ, ಪಠ್ಯ ಪುಸ್ತಕ, ಪೆನ್ನು, ಕಂಪಾಸ್ ಪೆಟ್ಟಿಗೆ, ಪೆನ್ಸಿಲ್, ಹಾಗೂ ಮತ್ತಿತರೆ ಸಾಮಗ್ರಿಗಳನ್ನು ನಿಯಮಬಾಹಿರವಾಗಿ ಮಾರಾಟ ಮಾಡಲಾಗುತ್ತಿದೆ. ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಗಳು ಈ ಅಕ್ರಮವನ್ನು ತಡೆಯುವ ಮೂಲಕ ಪಾಲಕರ ಸುಲಿಗೆಯನ್ನೂ, ಈ ಅಕ್ರಮ ಮಾರಾಟದಿಂದ ಪುಸ್ತಕದ ಅಂಗಡಿಯವರಿಗೆ ಉಂಟಾಗುತ್ತಿರುವ ನಷ್ಟವನ್ನೂ ತಡೆಯಬೇಕು ಎಂದು ಕೊರಲಾಯಿತು.ಶಾಲೆ- ಕಾಲೇಜುಗಳಲ್ಲಿ ಯಾವುದೇ ವಸ್ತುವನ್ನು ಒತ್ತಾಯಪೂರ್ವಕ ಮಾರಾಟ ಮಾಡಬಾರದು ಎಂಬ ನಿಯಮವಿದ್ದರೂ ಅದನ್ನು ಉಲ್ಲಂಘಿಸಿ, ಶಾಲೆಗಳಲ್ಲಿ ಬಟ್ಟೆ, ಶೂ, ಸಾಕ್ಸ್, ಊಟದ ಡಬ್ಬಿ, ಪಾಠೋಪಕರಣ, ಪಠ್ಯಪುಸ್ತಕ, ನೋಟ್ ಪುಸ್ತಕ, ಕಂಪಸ್ ಪೆಟ್ಟಿಗೆ, ನಕಾಶ ಮತ್ತಿತರ ವಸ್ತುಗಳನ್ನು ಹೆಚ್ಚು ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮೂಲಕ ಆಗ್ರಹಿಸಲಾಯಿತು.ಈ ಹಿಂದೆಯೇ ಈ ಕುರಿತು  ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ   ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಬಿಸ್ವಾಸ್ ಅವರು ಅಕ್ರಮ ಮಾರಾಟ ತಡೆಯುವಂತೆ ಶಿಕ್ಷಣಾಧಿಕಾರಿ ಅವರಿಗೆ ಆದೇಶ ಹೊರಡಿಸಿದ್ದರೂ, ಜಿಲ್ಲಾಧಿಕಾರಿಯವರ ಆದೇಶಕ್ಕೇ ಬೆಲೆ ಇಲ್ಲದಂತಾಗಿದೆ.ಬೇಸಿಗೆ ರಜೆಯ ವೇಳೆಯಲ್ಲೇ ವಿದ್ಯಾರ್ಥಿಗಳ ಪಾಲಕರಿಗೆ ವಿವಿಧ ಪರಿಕರ ಖರೀದಿಸುವಂತೆ ಶಾಲಾ ಆಡಳಿತ ಮಂಡಳಿಯವರು ಚೀಟಿ ನೀಡಿ ಕಳುಹಿಸಿದ್ದು, ಹಣ ಕಟ್ಟುವಂತೆ ಲಿಖಿತವಾಗಿಯೇ ಹೇಳಿದ್ದಾರೆ. ಈ ಎಲ್ಲ ಸಾಕ್ಷಾಧಾರಗಳನ್ನು ಪರಿಗಣಿಸಿ ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದ ಆಗ್ರಹಿಸಲಾಗಿದೆ.ನೋಟ್ ಪುಸ್ತಕ ಹಾಗು ಇತರ ಪರಿಕರಗಳ ಉತ್ಪಾದಕರು, ಏಜೆಂಟರು ನೇರವಾಗಿ ಖಾಸಗಿ ಶಾಲೆ- ಕಾಲೇಜುಗಳ ಮುಖ್ಯಸ್ಥರೊಂದಿಗೆ ಒಳ ಒಪ್ಪಂದ ಮಾಡಿಕೊಂಡು, ಕಡಿವೆು ದರದಲ್ಲಿ ಮಾರಾಟ ಮಾಡುತ್ತಿದ್ದು, ಶಾಲಾ ಆಡಳಿತ ಮಂಡಳಿಯವರು  ಅಕ್ರಮದಲ್ಲಿ ತೊಡಗಿದ್ದಾರೆ ಎಂದು ದೂರಲಾಗಿದೆ.ಇನ್ನೂ ಕೆಲವೊಂದು ಶಾಲಾ ಕಾಲೇಜುಗಳಲ್ಲಿ ಈಗಾಗಲೇ ದಾಖಲಾತಿ ಆರಂಭವಾಗಿದ್ದು, ಆಡಳಿತ ಮಂಡಳಿಗಳ ಮುಖ್ಯಸ್ಥರು ವಿದ್ಯಾರ್ಥಿ ಹಾಗೂ ಪಾಲಕರಿಗೆ ಪುಸ್ತಕಗಳನ್ನು ತಮ್ಮಲ್ಲೇ ಖರೀದಿಸುವಂತೆ ತಿಳಿಸುತ್ತಿದ್ದು, ಹೊರಗಡೆ ಕೊಂಡುಕೊಳ್ಳದಿರುವಂತೆ ಸೂಚಿಸಿ ಸುಲಿಗೆ ಮಾಡುತ್ತಿದ್ದಾರೆ.ಇದರಿಂದಾಗಿ ಸಾವಿರಾರು ರೂಪಾಯಿ ಬಂಡವಾಳ ಹೂಡಿ ಪಠ್ಯ, ನೋಟ್ ಪುಸ್ತಕ ಖರೀದಿಸುವ ಅನಿವಾರ್ಯತೆ ಪಾಲಕರಿಗೆ ಒದಗಿದೆ. ಅಲ್ಲದೆ, ಪುಸ್ತಕ ಮಾರಾಟದ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಶಾಲೆ- ಕಾಲೇಜುಗಳ ಆಡಳಿತ ಮಂಡಳಿಯವರ ಹಣದ ದಾಹವನ್ನು ತಗ್ಗಿಸಿ, ವಿದ್ಯಾರ್ಥಿಗಳಿಗೆ ಮುಕ್ತ ಮಾರುಕಟ್ಟೆಯಲ್ಲೇ ಪಠ್ಯ, ನೋಟ್ ಪುಸ್ತಕಗಳು ಹಾಗೂ ಶಾಲಾ ಸಾಮಗ್ರಿ ಖರೀದಿಸಲು ಅವಕಾಶ ಕಲ್ಪಿಸಬೇಕು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧರಾಮನ ಗೌಡ, ಗೌರವಾಧ್ಯಕ್ಷ ಶಾಂತಮೂರ್ತಿ, ಉಪಾಧ್ಯಕ್ಷ ವಿನೋದಬಾಬು, ಪ್ರಧಾನ ಕಾರ್ಯದರ್ಶಿ ಟಿ.ಗಣೇಶ ಖಜಾಂಚಿ ಯು. ಉಮಾಪತಿ ಮತ್ತಿತರರು ಕೋರಿದ್ದಾರೆ.

ಪ್ರತಿಕ್ರಿಯಿಸಿ (+)