ಶನಿವಾರ, ಮೇ 21, 2022
25 °C

ಶಾಲೆಗಳಲ್ಲಿ ಮಧ್ಯಾಹ್ನದ ಊಟ: ಹಾಲು ಅಗತ್ಯ, ಮಾತ್ರೆ ಬೇಕೆ?

ಪ್ರೊ .ಬಿ.ಕೆ.ಚಂದ್ರಶೇಖರ್,ಬೆಂಗಳೂರು,(ಲೇಖಕರು ಮಾಜಿ ಸಚಿವರು) Updated:

ಅಕ್ಷರ ಗಾತ್ರ : | |

ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಳೆ ವಯಸ್ಸಿನ ಮಕ್ಕಳಲ್ಲಿ ಕಂಡು ಬರುವ ರಕ್ತಹೀನತೆಯನ್ನು ತಡೆಯಲು ಕಬ್ಬಿಣಾಂಶ ಹಾಗೂ ಪೌಷ್ಟಿಕಾಂಶವಿರುವ  ಕ್ಯಾಪ್‌ಸ್ಯೂಲ್ಸ್ ಹಾಗೂ ಮಾತ್ರೆಗಳನ್ನು ಊಟದೊಂದಿಗೆ ಸರಬರಾಜು ಮಾಡುವ ನಿರ್ಧಾರವನ್ನು ಆರೋಗ್ಯ ಸಚಿವರು ಪ್ರಕಟಿಸಿದ್ದಾರೆ. 

ಈ ಯೋಜನೆ ಜಾರಿಗೆ  2005-06ರ  ರಾಷ್ಟ್ರೀಯ ಕುಟುಂಬ ಆರೋಗ್ಯ ಇಲಾಖೆಯ ಸಮೀಕ್ಷೆ  -3ರಲ್ಲಿ ಬಹಿರಂಗಗೊಂಡ ಮಾಹಿತಿಗಳು ಕಾರಣ ಎಂದು ಸಚಿವರೇ ಹೇಳಿಕೊಂಡಿದ್ದಾರೆ. ಪತ್ರಿಕಾ ವರದಿಯ ಪ್ರಕಾರ, 6 ರಿಂದ 35 ತಿಂಗಳ  ಶೇ  82.7ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಸಮೀಕ್ಷೆಯು ತಿಳಿಸುವಂತೆ 49 ವಯಸ್ಸಿನವರೆಗಿನ ವಿವಾಹಿತ ಸ್ತ್ರೀಯರಲ್ಲಿ ಶೇ 50.3ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.ಈ ವರದಿ ಸತ್ಯಾಂಶದಿಂದ ಕೂಡಿರಬಹುದು. ಆದರೆ ಈ ಗಂಭೀರ ಸಮಸ್ಯೆಗೆ ಕೇವಲ ಮಾತ್ರೆ ಸೇವನೆಯೊಂದೇ ಪರಿಹಾರವೇ? ಎಲ್ಲಾ ಮಕ್ಕಳಿಗೂ ಅದರ ಅವಶ್ಯಕತೆ ಇದೆಯೇ? ಕಬ್ಬಿಣಾಂಶ ಮತ್ತು ಫೋಲಿಕ್ ಆಮ್ಲಗಳು (ಬಿ ಗುಂಪಿನ ಜೀವಸತ್ವ)  ಕೆಂಪು ರಕ್ತ ಕಣಗಳನ್ನು ವೃದ್ಧಿಸುವ ಮೂಲಕ ರಕ್ತಹೀನತೆಯನ್ನು ಎದುರಿಸುತ್ತವೆ.

ಆದರೂ ಇದಕ್ಕೆ ಬದಲಾಗಿ ಆಹಾರ ಆಧಾರಿತ ಸೂತ್ರ ಸೂಕ್ತವಲ್ಲವೆ? ಇದೇ ಆಡಳಿತ ಕ್ರಮದ ಔಪಚಾರಿಕ ವಿಧಿವಿಧಾನವೆ? ಅಥವಾ ಇದು ಸರ್ಕಾರದ ಕಾರ್ಯಕ್ರಮಗಳ ಗುತ್ತಿಗೆ ಪಡೆದು ಲಾಭ ಮಾಡುವ ಹುನ್ನಾರದ ಔಷಧ ತಯಾರಕರ ಹಾಗೂ ಮಾರಾಟಗಾರರ ಒತ್ತಾಯಪೂರ್ವಕ  ಹಾಗೂ ಜಾಣತನದ ಮಾರಾಟದ ಮಾರ್ಗವೇ? ಇದೇ ಲೇಖಕ 2002-03ರಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸದ ಸಚಿವನಾಗಿದ್ದಾಗ ಈ ಯೋಜನೆ ಕುರಿತು ಅನುಷ್ಠಾನಕ್ಕೆ ತರುವಲ್ಲಿ ಪಡೆದುಕೊಂಡ ಅನುಭವದ ಮಾತು ಇದು.

ಆ ಅನುಭವದಿಂದ ಆದ ಲಾಭವೆಂದರೆ ನಿರ್ಧಾರಕ್ಕೆ ಮುನ್ನ ಕೇಂದ್ರ ಆಹಾರ ತಾಂತ್ರಿಕ, ವೈಜ್ಞಾನಿಕ ಸಂಶೋಧನೆ ಕೇಂದ್ರದ ನಿರ್ದೇಶಕರಾದ ಡಾ. ವಿ. ಪ್ರಕಾಶ್ ಮತ್ತು ಅವರ ತಂಡದಿಂದ ಪಡೆದಂತಹ ಆಹಾರ ವಿಜ್ಞಾನ ಹಾಗೂ ಅದರ ಪ್ರಯೋಗಗಳ ವಿಚಾರಗಳು, ವಿಮರ್ಶೆಗಳು.ಔಷಧ, ಮಾತ್ರೆಗಳನ್ನು ನಾವು ಕೊಂಡುಕೊಳ್ಳಬೇಕಾಗುವ ಮುನ್ನ ಹಲವು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವುದು ಅನಿವಾರ್ಯವಾಗಿತ್ತು. ಆ ಸಮಸ್ಯೆಗಳು ಈಗಲೂ ಜೀವಂತವಾಗಿವೆಯೇ ಹೊರತು ನಶಿಸಿಲ್ಲ. ಏಕೆಂದರೆ, ಉದಾಹರಣೆಗೆ ಈ ಔಷಧ, ಮಾತ್ರೆಗಳನ್ನು ಅಗತ್ಯವೇ ಇಲ್ಲದಂತಹ ಮಕ್ಕಳಿಗೂ ಕೊಡುವಂತಾಗಬಹುದು. ಅದು ಸರಿಯಲ್ಲ. ಹಾಗೆಯೇ, ನಿಖರವಾಗಿ, ನಿಜವಾದ ಅಶಕ್ತ ಮಕ್ಕಳನ್ನು ಗುರುತಿಸುವುದು, ಗಣನೆಗೆ ತೆಗೆದುಕೊಳ್ಳುವುದು, ಕುಟುಂಬದ ಆನುವಂಶಿಕ ಹಿನ್ನೆಲೆಯಲ್ಲಿ ಪೌಷ್ಟಿಕಾಂಶದ ಕೊರತೆಯಿದ್ದು ಅಶಕ್ತತತೆಯ ಹೊಸ್ತಿಲಲ್ಲಿ ಇರುವವರನ್ನು ಗುರುತಿಸುವುದು ಇತ್ಯಾದಿ ಅಗತ್ಯ ಕ್ರಮಗಳು ಮೂಲೆಗುಂಪಾಗಬಹುದು.ಎರಡನೆಯದಾಗಿ ಈ ಬಲವರ್ಧನೆಯ ಪ್ರಯೋಗ ದೀರ್ಘಕಾಲದ ದೃಷ್ಟಿಗಿಂತ ಪ್ರತಿಯೊಂದು ಮಗುವಿನ ಅವಶ್ಯಕತೆಯ ಮೇರೆಗೆ ಮೊಟಕಾಗಿ ಪ್ರಯೋಗಿಸಿ ಪರಿಣಾಮಕಾರಿಯಾಗಿ ಮಾಡಬೇಕು ಎಂಬುದು ಆಹಾರ ವಿಜ್ಞಾನಿಗಳ ವಾದ. ಈಗಲೂ ಅದು ಸತ್ಯ. ಮಕ್ಕಳಿಗೆ  ಬೇಕಾಗಿರುವ ಅಂಶವನ್ನು ಕಾಲಕಾಲಕ್ಕೆ ಪರೀಕ್ಷೆ ಮಾಡದೇ ಇದ್ದಲ್ಲಿ, ಮಕ್ಕಳಿಗೆ ಹಾನಿಯಾಗುವ ಸಾಧ್ಯತೆಯೇ ಹೆಚ್ಚಾಗಬಹುದು.

ಇದರಿಂದಾಗಿ ವೈದ್ಯರು ಹಾಗೂ ವಿಜ್ಞಾನಿಗಳು ಅವಲೋಕಿಸಿ, ಪ್ರತಿಯೊಬ್ಬ ಮಗುವನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ, ಜೈವಿಕ ಮಾಪನ ಆಧಾರದ ಮೇಲೆ ಅವಶ್ಯಕತೆಗೆ ತಕ್ಕಂತೆ ಕಡಿಮೆ ಅವಧಿಗೆ ಜಾರಿಗೊಳಿಸಲು ಶಿಫಾರಸ್ಸು ಮಾಡಲು ಸೂಕ್ಷ್ಮವಾಗಿ ಯೋಚಿಸ ಬೇಕಾಗಿದೆ. ದೀರ್ಘಾವಧಿಗೆ ಮಕ್ಕಳಿಗೆ ಈ ಪ್ರಯೋಗ ಜಾರಿ ಮಾಡಿದಲ್ಲಿ ಅವರಲ್ಲಿ ಕರಳು ಬೇನೆ ಜೊತೆಗೆ ಜೀರ್ಣಾವಸ್ಥೆ ಕೂಡ ಹಾನಿಯಾಗಬಹುದೆಂದು ಹೇಳಲಾಗುತ್ತದೆ.ಹೀಗಾದಲ್ಲಿ ಸಿದ್ಧಪಡಿಸಿರುವ ವಿಶ್ಲೇಷಣೆಗಳ ಮೌಲ್ಯಮಾಪನವಾಗಿವೆಯೆ? ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಮಕ್ಕಳನ್ನು ಕಠಿಣ ಪರೀಕ್ಷೆಗೊಳಪಡಿಸಲು ಬೇಕಾಗುವಂತಹ ಸೌಕರ್ಯ ನಮ್ಮಲ್ಲಿದೆಯೇ? ಹಾಗಾಗಿ ಕಾಲಾನುಕಾಲಕ್ಕೆ ಆರೋಗ್ಯ ಬಲವರ್ಧನೆಗೆ ಮಧ್ಯಾಹ್ನದ ಊಟದ ಜೊತೆಗೆ ಪೌಷ್ಟಿಕತೆಯ ಆಹಾರವನ್ನು ಒದಗಿಸುವುದೇ ಸೂಕ್ತ. ಅಂತಹ ಆಹಾರ ಒದಗಿಸಿದಲ್ಲಿ ಜೀರ್ಣಾವಸ್ಥೆಗೆ ಬೇಕಾಗುವಂತಹ ಎಲ್ಲಾ ಅಂಶಗಳೂ ಸೇರಿರುತ್ತವೆ.

ಈ ನಿಟ್ಟಿನಲ್ಲಿ,  ಸರ್ಕಾರ ಪೌಷ್ಟಿಕವಾದ ಆಹಾರ ಜೊತೆಗೆ ಬಲವರ್ಧನೆಗೆ ಸೂಕ್ತವಾದಂತಹ ದ್ವಿಗುಣ ಶಕ್ತಿಯುಳ್ಳ ಉಪ್ಪಿನಂಶವುಳ್ಳ (ಡಬಲ್ ಫೋರ್ಟಿಫೈಡ್ ಸಾಲ್ಟ್) ಆಹಾರ ಸೇವಿಸುವಲ್ಲಿ ಸಹಕಾರಿಯಾಗುವಂತಹ ಪ್ರಯೋಗ ಮಾಡುವುದು ಒಳ್ಳೆಯದು. ಇಂತಹ ಉತ್ಪಾದನೆಯನ್ನು ಅನುದಾನಿತ ಬೆಲೆಗಳಲ್ಲಿ ನೀಡುವಂತೆ ಒಪ್ಪಿರುವ ಟಾಟಾ ಸಂಸ್ಥೆಯ ಉತ್ಪಾದನೆಗಳು ಲಭ್ಯವಿದ್ದು ಅದರ ಫಾರ್ಮುಲ ಕೂಡ ಸರ್ಕಾರದ ಅಧೀನದಲ್ಲಿರುವುದರಿಂದ ಇದು ಇನ್ನಷ್ಟು ಪರಿಣಾಮಕಾರಿ ಪ್ರಯೋಗವಾಗಬಹುದು.

ಎಲ್ಲಾ ಶಾಲೆಗಳಿಗೂ ಇದನ್ನು ಉಪಯೋಗಿಸುವ ಸಲಹೆ ಕೂಡ ನೀಡಬಹುದು. ಈ ಉಪ್ಪಿನಲ್ಲಿ ಅಶಕ್ತತತೆಯ ಪರಿಹಾರಕ್ಕೆ ಅಗತ್ಯವಾದ ಐಯೋಡಿನ್ ಜೊತೆಗೆ ಕಬ್ಬಿಣಾಂಶವೂ ಇದ್ದು ದೀರ್ಘಕಾಲದ ಬಳಕೆಗೆ ಅನುಕೂಲವಾಗಲಿದೆ. ಒಟ್ಟಾರೆ, ಇಂತಹ ಮಾರ್ಗಸೂಚಿಗಳನ್ನು ಅನುಸರಿಸುವ ಜೊತೆಗೆ ಜೈವಿಕ ಪೌಷ್ಟಿಕಾಂಶದ ಸೂಚ್ಯಂಕ ದಾಖಲಿಸಿ ತೀವ್ರ ಸಂಕಷ್ಟದಲ್ಲಿ ವೈದ್ಯರನ್ನು ಬಳಸಿಕೊಳ್ಳಲು ಪರಿಗಣಿಸಬಹುದು.

ಆಹಾರ ಆಧಾರಿತ ಕಲ್ಪನೆ ಅಪೇಕ್ಷೆ ಮಾತ್ರ ಅಲ್ಲ, ತೆರಿಗೆದಾರರ ಹಣ ಅನವಶ್ಯಕವಾಗಿ ಪೋಲಾಗುವುದನ್ನು ತಡೆಯಬಹುದು. ಇಂತಹ ಪದ್ಧತಿಗಳ ಕುರಿತಂತೆ  ಸಾಧಾರಣವಾಗಿ ಜಗತ್ತಿನಲ್ಲಿ ಜಾಗೃತಿ ಮೂಡಿದ್ದು, ನಮ್ಮ ದೇಶ ಭಾರತವೂ ಅದರಿಂದ ಹೊರತಾಗಬಾರದು.

ಶಾಲೆಯ ಮಕ್ಕಳಿಗೆ ಹಾಲು ಒದಗಿಸುವ  ಯೋಜನೆಯು ನಿಜಕ್ಕೂ ಶ್ಲಾಘನೀಯ. ಅದರಲ್ಲೂ ಕೊಬ್ಬಿನ ಅಂಶ ಹೆಚ್ಚು ಇರದ 150-200 ಎಂ.ಎಲ್.ನ ಹಾಲು ನೀಡಿದಲ್ಲಿ ಹೆಚ್ಚು ಆರೋಗ್ಯಕರ.  ಜೊತೆಗೆ ಈ ರೀತಿ ವಿತರಿಸುವ ಹಾಲು ಆರೋಗ್ಯಕರವಲ್ಲದ ಪರಿಸರದಿಂದ ಬರುವುದೇ? ಶೇಖರಣೆಯ ಜಾಗ, ಪದಾರ್ಥ ಇವೆಲ್ಲವನ್ನು ಪರೀಕ್ಷೆಗೆ ಒಳಪಡಿಸುವಲ್ಲಿ ಗಮನ ನೀಡಬೇಕಾಗುವುದು.

ಇಂತಹ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕಾದಲ್ಲಿ ವಿತರಣ ವ್ಯವಸ್ಥೆಯು ಬಹಳ ಮುಖ್ಯ. ಈ ವಿತರಣೆ ವ್ಯವಸ್ಥೆಯನ್ನು  ಈಗ ಉತ್ತಮವಾಗಿ ಕಾರ್ಯ ನಡೆಸುತ್ತಿರುವ ಸಹಕಾರಿ ಡೈರಿಗಳಿಗೆ ಒಪ್ಪಿಸಿದಲ್ಲಿ ಒಳಿತು. ಇದರಿಂದಾಗಿ ಹಾಲು ವಿತರಣೆ ಮಾತ್ರವಲ್ಲದೆ ಶಾಲೆಗೆ ತಲುಪಿದ ನಂತರ ಶಾಲೆಯ ಅಡುಗೆ ಶಾಲೆಯಲ್ಲಿ ಕುದಿಸಿ ವಿತರಿಸಲು ಸಾಧ್ಯವಾಗಬಹುದು. ಅಲ್ಲದೆ ಮಕ್ಕಳಿಗೆ ಪಾಶ್ಚೀಕರಿಸಿದ ಹಾಲು ಮಾತ್ರ ವಿತರಣೆಯಾಗುವಂತೆ ಆಗಬೇಕು.

ಅದು ನಮ್ಮದೇ ಆದ ನಂದಿನಿ ಪಾಶ್ಚೀಕರಿಸಿದ ಹಾಲಾಗಬಹುದು. ಪ್ರಾಥಮಿಕ ಶಾಲೆಯಿಂದ ಎಸ್.ಎಸ್.ಎಲ್.ಸಿ. ವರೆಗೂ ಪ್ರತಿ ಮಗುವಿಗೆ ದಿನಕ್ಕೊಂದು ಬಾಳೆಹಣ್ಣು ನೀಡುವಂತಹ ಕಾರ್ಯಕ್ರಮಕ್ಕೆ ಸರ್ಕಾರ ಮನಸ್ಸು ಮಾಡಿದಲ್ಲಿ ಬಹುಶಃ ಇನ್ನಷ್ಟು ಆರೋಗ್ಯದ ದೃಷ್ಟಿಯಿಂದ ಪರಿಣಾಮಕಾರಿಯಾಗಬಹುದು. ಬಾಳೆಹಣ್ಣು ಮೆದುಳಿನ ಬಲವರ್ಧನೆ  ನೀಡುತ್ತದೆ ಮಾತ್ರವಲ್ಲದೆ ಬೆಳವಣಿಗೆಗೂ ಸಹಕಾರಿಯಾಗುವುದು. ಬಾಳೆಹಣ್ಣನ್ನು ಶಾಲೆ ಮುಗಿದ ನಂತರ ನೀಡುವಂತೆ ಯೋಜನೆ ಹಾಕಿಕೊಳ್ಳಬಹುದು. ಏನೇ ಆಗಲಿ, ಮಕ್ಕಳ ಪೌಷ್ಟೀಕರಣ ಕುರಿತ ಸರ್ಕಾರದ ಚಿಂತನೆ ಅಭಿನಂದನೀಯ.

ಪ್ರೊ .ಬಿ.ಕೆ.ಚಂದ್ರಶೇಖರ್, ಬೆಂಗಳೂರು , (ಲೇಖಕರು ಮಾಜಿ ಸಚಿವರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.