ಶಾಲೆಗಳಲ್ಲಿ ಸಿಸಿ ಕ್ಯಾಮೆರಾ (ಶಿಕ್ಷಣದ ದಿಕ್ಕು)

ಸೋಮವಾರ, ಜೂಲೈ 22, 2019
27 °C

ಶಾಲೆಗಳಲ್ಲಿ ಸಿಸಿ ಕ್ಯಾಮೆರಾ (ಶಿಕ್ಷಣದ ದಿಕ್ಕು)

Published:
Updated:

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅನುಷ್ಠಾನ ಸಂದರ್ಭದ ವಿವಾದ ಸೇರಿದಂತೆ ಖಾಸಗಿ ಶಾಲೆಗಳ ಮೇಲಾಗುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ರಾಜ್ಯದ ಖಾಸಗಿ ಶಾಲೆಗಳಲ್ಲಿ ಆನ್‌ಲೈನ್ ರೆಕಾರ್ಡಿಂಗ್ ಸಹಿತ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಲು ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಾಗಿವೆ.ನಗರದಲ್ಲಿ ಶುಕ್ರವಾರ ನಡೆದ ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ತುರ್ತು ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ ರಾಜ್ಯದಾದ್ಯಂತ 800 ಖಾಸಗಿ ಶಾಲೆಗಳಿದ್ದು, ಮೊದಲ ಹಂತದಲ್ಲಿ ನಗರದ ಖಾಸಗಿ ಶಾಲೆಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ. ಹಂತ ಹಂತವಾಗಿ ಎಲ್ಲ ಶಾಲೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.`ಖಾಸಗಿ ಶಾಲೆಗಳನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ಹಾಗೂ ದಾಳಿ ನಡೆಸುವವರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಅಮಾಯಕ ಪೋಷಕರನ್ನು ಬಳಸಿಕೊಂಡು ಕೆಲವು ಸಂಘಟನೆಗಳ ಸದಸ್ಯರು ಶಾಲಾ ಆಡಳಿತ ಮಂಡಳಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಈಗ ಆರ್‌ಟಿಇ ಅಡಿಯಲ್ಲಿ ದಾಖಲಾಗಿರುವ ಮಕ್ಕಳ ನೆಪದಲ್ಲಿ ತೊಂದರೆ ನೀಡುತ್ತಿದ್ದಾರೆ.ಇದನ್ನು ನಿಯಂತ್ರಿಸಲು ಶಾಲಾ ಪ್ರವೇಶ ದ್ವಾರ, ಮುಖ್ಯ ಶಿಕ್ಷಕರ ಕೊಠಡಿ, ಶಾಲಾ ಕಚೇರಿ ಸೇರಿದಂತೆ ನಾಲ್ಕೈದು ಕಡೆಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ. ಕೆಲವು ಶಾಲೆಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದ್ದು, ಈಗ ವ್ಯವಸ್ಥಿತವಾಗಿ ಅನುಷ್ಠಾನ ಮಾಡಲಾಗುವುದು. ಶಾಲೆಗಳ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯ~ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಶಶಿಕುಮಾರ್ `ಪ್ರಜಾವಾಣಿ~ಗೆ ಶನಿವಾರ ತಿಳಿಸಿದರು.`ನಗರದ ಮಾಗಡಿ ರಸ್ತೆ ಸಮೀಪದ ಖಾಸಗಿ ಶಾಲೆಯೊಂದರಲ್ಲಿ ಸ್ಥಳೀಯ ರಾಜಕೀಯ ಮುಖಂಡರೊಬ್ಬರು ಆರ್‌ಟಿಇ ಅಡಿಯಲ್ಲಿ 10 ಮಕ್ಕಳನ್ನು ಸೇರಿಸಿಕೊಳ್ಳುವಂತೆ ಒತ್ತಡ ಹೇರಿದರು. ಹಿಂದುಳಿದ ಮಕ್ಕಳಲ್ಲ ಎಂಬ ಕಾರಣಕ್ಕೆ ಸೇರ್ಪಡೆಗೆ ನಿರಾಕರಿಸಲಾಯಿತು. ನಂದಿನಿ ಬಡಾವಣೆಯ ಶಾಲೆಯೊಂದರಲ್ಲಿ ಸಹ ಇಂತಹದೇ ಘಟನೆ ನಡೆದಿದೆ. ಕಾಯ್ದೆಯನ್ನು ಈ ರೀತಿ ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ. ಪ್ರವೇಶ ನಿರಾಕರಿಸಿದಾಗ ದ್ವೇಷ ಸಾಧಿಸುತ್ತಾರೆ. ನಾವು ಸುರಕ್ಷತೆಯ ಕ್ರಮ ಕೈಗೊಂಡಾಗ ಇಂತಹ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬಹುದು~ ಎಂದು ಅವರು ಅಭಿಪ್ರಾಯಪಟ್ಟರು. `ವಿದ್ಯಾರ್ಥಿಗಳಿಗೆ ಸೂಕ್ತ ಶಿಕ್ಷಣ ನೀಡುತ್ತಿಲ್ಲ ಹಾಗೂ ಆಟದ ಮೈದಾನ ಇಲ್ಲ ಎಂಬ ಕಾರಣ ನೀಡಿ ಇತ್ತೀಚೆಗೆ 20 ಮಂದಿ ಶಾಲೆಗೆ ನುಗ್ಗಿ ಕೆಟ್ಟದಾಗಿ ವರ್ತಿಸಿದರು. ಶಾಲಾ ದಾಖಲೆಗಳನ್ನು ಪರಿಶೀಲಿಸಿದಾಗ ಅವರಿಗೆ ಯಾವುದೇ ಲೋಪ ಕಂಡು ಬರಲಿಲ್ಲ. ಮರುಮಾತಿಲ್ಲದೆ ತೆರಳಿದರು. ಇಂತಹ ಘಟನೆಗಳಿಂದ ಶಾಲಾ ಆಡಳಿತ ಮಂಡಳಿ ಅನಗತ್ಯವಾಗಿ ತೊಂದರೆ ಅನುಭವಿಸಬೇಕಾಗುತ್ತದೆ. ಒಕ್ಕೂಟದ ಸಭೆಯಲ್ಲಿ ಈ ಕುರಿತು ಚರ್ಚಿಸಿ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಕೆ ಉತ್ತಮ ವ್ಯವಸ್ಥೆ ಎಂಬ ತೀರ್ಮಾನಕ್ಕೆ ಬರಲಾಯಿತು~ ಎಂದು ನಂದಿನಿ ಬಡಾವಣೆಯ ನಂದಿನಿ ಪಬ್ಲಿಕ್ ಸ್ಕೂಲ್‌ನ ಆಡಳಿತ ಮಂಡಳಿಯ ಅಧ್ಯಕ್ಷ ಜ್ಞಾನಮೂರ್ತಿ ಹೇಳಿದರು.`ಶಾಲೆಯ ಸಮಸ್ಯೆಗಳ ಕುರಿತು ಹೆತ್ತವರು ಆಕ್ಷೇಪ ವ್ಯಕ್ತಪಡಿಸಿದರೆ ಲೋಪವನ್ನು ಸರಿಪಡಿಸಬಹುದು. ಶಾಲೆಗೆ ಸಂಬಂಧ ಇಲ್ಲದ ವ್ಯಕ್ತಿಗಳು ಸಕಾರಣ ಇಲ್ಲದೆ ಗಲಾಟೆ ಮಾಡಿದರೆ ಬೇಸರವಾಗುತ್ತದೆ. ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಿಕೊಂಡರೆ ದಾಖಲೆ ಇರುತ್ತದೆ. ಪೊಲೀಸರಿಗೆ ದೂರು ನೀಡುವಾಗ ಸಾಕ್ಷಿಯಾಗಿ ತೋರಿಸಬಹುದಾಗಿದೆ ಹಾಗೂ ಗಲಾಟೆಗನಿಯಂತ್ರಿಸಲು ಸಾಧ್ಯವಿದೆ~ ಎಂದು ಪೀಣ್ಯದ ಸನ್‌ರೈಸ್ ಪಬ್ಲಿಕ್ ಸ್ಕೂಲ್‌ನ ಆಡಳಿತ ಮಂಡಳಿಯ ಕಾರ್ಯದರ್ಶಿ ಮಹೇಶ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry