ಸೋಮವಾರ, ಏಪ್ರಿಲ್ 19, 2021
25 °C

ಶಾಲೆಗಳಿಗೂ ಬಂದರು ಅತಿಥಿ ಶಿಕ್ಷಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಇಂತಹ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಟಿ. ರವಿಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.ಚಳ್ಳಕೆರೆ ಪಟ್ಟಣದ ವಾರಿಯರ್ಸ್‌ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಶುಕ್ರವಾರ ಶಿಕ್ಷಣ ಇಲಾಖೆ ಮತ್ತು ಬೆಂಗಳೂರಿನ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಮೊಳಕಾಲ್ಮುರು ಹಾಗೂ ಚಳ್ಳಕೆರೆ ತಾಲ್ಲೂಕಿನ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರ ಶಿಕ್ಷಕರಿಗೆ ನೀಡುವ ಸಂಬಳಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಬೇಕು. ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದರೆ ಮಾತ್ರ ಹಿಂದುಳಿದ ಮೊಳಕಾಲ್ಮುರು, ಚಳ್ಳಕೆರೆ ತಾಲ್ಲೂಕಿನಲ್ಲಿ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದರು.ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು ತಾಲ್ಲೂಕಿನಲ್ಲಿ ಇರುವ ಶಿಕ್ಷಕರ ಸಮಸ್ಯೆ ನೀಗಿಸಲು ಜಿಲ್ಲಾ ಪಂಚಾಯ್ತಿ ಮೂಲಕ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಿದೆ. ಇಡೀ ರಾಜ್ಯದಲ್ಲಿಯೇ ಇಂತಹ ಕೆಲಸವನ್ನು ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಮಾಡುತ್ತಿದೆ. ಇದಕ್ಕಾಗಿ ್ಙ 52 ಲಕ್ಷ ವಿನಿಯೋಗಿಸಲಾಗಿದೆ ಎಂದು ತಿಳಿಸಿದರು.ಮಕ್ಕಳಲ್ಲಿರುವ ವಿಜ್ಞಾನ ಪ್ರತಿಭೆಯನ್ನು ಶಾಲೆಯಲ್ಲಿ ಶಿಕ್ಷಕರು ಗುರುತಿಸಿ ಬಾಲವಿಜ್ಞಾನಿಗಳನ್ನಾಗಿ ರೂಪಿಸಬೇಕಿದೆ. ಜಾಗತಿಕಮಟ್ಟದಲ್ಲಿ ಭಾರತ ದೇಶ ಮಾಹಿತಿ ತಂತ್ರಜ್ಞಾನದಲ್ಲಿ ಹೆಚ್ಚು ಸಾಧನೆ ಮಾಡಿದೆ. ವಿಜ್ಞಾನಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ವೈಜ್ಞಾನಿಕ ಪ್ರಗತಿಯತ್ತ ಸಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಮಾತನಾಡಿ, ಹಿಂದುಳಿದ ತಾಲ್ಲೂಕಿನ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಹೆಚ್ಚಿಸಲು ಇಂತಹ ವಿಜ್ಞಾನ ಪ್ರದರ್ಶನಗಳು ಹೆಚ್ಚಾಗಿ ಆಯೋಜಿಸಬೇಕಿದೆ. ಇದಕ್ಕೆ ಬೇಕಾದ ಅಗತ್ಯ ನೆರವನ್ನು ಜಿಲ್ಲಾ ಪಂಚಾಯ್ತಿ ನೀಡಲಿದೆ ಎಂದು ಹೇಳಿದರು.ಸದಸ್ಯೆ ಜಯಮ್ಮ ಬಾಲರಾಜ್ ಮಾತನಾಡಿ, ಇಂದಿನ ಮಕ್ಕಳಿಗೆ ಅಬ್ದುಲ್ ಕಲಾಂ ಅಂಥವರು ಮಾದರಿಯಾಗಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಕಲಿಯುತ್ತಿರುವ ಮಕ್ಕಳೇ ಇಲ್ಲಿ ಹೆಚ್ಚಾಗಿ ಆಗಮಿಸಿರುವುದರಿಂದ ಒಬ್ಬರ ಪ್ರತಿಭೆ ಮತ್ತೊಬ್ಬರು ವೀಕ್ಷಿಸಲು ವಸ್ತುಪ್ರದರ್ಶನಗಳು ಪೂರಕವಾಗಲಿವೆ ಎಂದು ಹೇಳಿದರು.ಡಿಡಿಪಿಐ ಮಂಜುನಾಥ್ ಮಾತನಾಡಿ, ಹಿಂದುಳಿದ ತಾಲ್ಲೂಕಿನ ಮಕ್ಕಳಲ್ಲಿ ವೈಜ್ಞಾನಿಕ ಪರಿಕಲ್ಪನೆ ಮೂಡಿಸಲು ್ಙ 5 ಸಾವಿರ ಸಹಾಯಧನ ನೀಡಲಾಗುವುದು. ಪ್ರದರ್ಶನದಲ್ಲಿ ವಿಜ್ಞಾನ ಮಾದರಿಯೊಂದಿಗೆ ಭಾಗವಹಿಸಿದ ಶಾಲೆಗೆ ಈ ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.ಡಯಟ್ ಪ್ರಾಂಶುಪಾಲ ಮಲ್ಲಣ್ಣ, ಜಯಕುಮಾರ್, ಜಿ.ಪಂ. ಸದಸ್ಯ ನಾಗಿರೆಡ್ಡಿ, ತಾ.ಪಂ. ಸದಸ್ಯ ಸಿ.ಟಿ. ಶ್ರೀನಿವಾಸ್ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಜಯಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜೆ. ತಿಪ್ಪೇಶ್‌ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಸಣ್ಣ ಸೂರಮ್ಮ, ಕಾರ್ಯದರ್ಶಿ ದುರುಗಪ್ಪ, ಬಿಇಒ ತಿಮ್ಮಣ್ಣ, ಉಮಾದೇವಿ, ಮುಜೀಬುಲ್ಲಾ, ಬಿಆರ್‌ಸಿ ವೆಂಕಟೇಶ್, ನಿವೃತ್ತ ಶಿಕ್ಷಣಾಧಿಕಾರಿ ನಾರಾಯಣಪ್ಪ, ವಿದ್ಯಾಸಂಸ್ಥೆಯ ಲೋಕನಾಥ್, ದೊಡ್ಡಯ್ಯ, ಲಕ್ಷ್ಮಣಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ಜಗದೀಶ್, ಬಿಆರ್‌ಪಿ ಸೋಮನಾಥ್, ಶಿಕ್ಷಣ ಸಂಯೋಜಕ ಕೆ.ಎ. ಮೂರ್ತಪ್ಪ ಇದ್ದರು.600 ವಿದ್ಯಾರ್ಥಿಗಳು

ಹಿಂದುಳಿದ ಮೊಳಕಾಲ್ಮೂರು, ಚಳ್ಳಕೆರೆ ತಾಲ್ಲೂಕಿನ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮಕ್ಕೆ ಎರಡೂ ತಾಲ್ಲೂಕುಗಳ ಶಾಸಕರ ಗೈರು ಎದ್ದು ಕಾಣಿಸುತ್ತಿತ್ತು. ಸುಮಾರು 600 ಶಾಲಾ ವಿದ್ಯಾರ್ಥಿಗಳು ವಿಜ್ಞಾನ ಮಾದರಿ ಪ್ರದರ್ಶಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.