ಶಾಲೆಗಳು ಮುಚ್ಚಲು ಸರ್ಕಾರ, ಶಿಕ್ಷಕರು ಕಾರಣ

7

ಶಾಲೆಗಳು ಮುಚ್ಚಲು ಸರ್ಕಾರ, ಶಿಕ್ಷಕರು ಕಾರಣ

Published:
Updated:
ಶಾಲೆಗಳು ಮುಚ್ಚಲು ಸರ್ಕಾರ, ಶಿಕ್ಷಕರು ಕಾರಣ

ಬೆಂಗಳೂರು:  `ಶಾಲೆಗಳು ಮುಚ್ಚುವ ಸ್ಥಿತಿ ತಲುಪಲು ಸರ್ಕಾರ ಮತ್ತು ಶಿಕ್ಷಕರೇ ಮುಖ್ಯ ಕಾರಣ. ಶಿಕ್ಷಣ ವ್ಯವಸ್ಥೆಯ ಭಿನ್ನ ಪಠ್ಯಕ್ರಮ, ದೋಷಪೂರ್ಣ ಭಾಷಾನೀತಿ, ಗ್ರಾಮೀಣ ಶಾಲೆಗಳ ಸೌಕರ್ಯದ ಕೊರತೆ ಮತ್ತು ಶಿಕ್ಷಕರ ಅನರ್ಹತೆ ಹಾಗೂ ಬೇಜವಾಬ್ದಾರಿತನವನ್ನು ಹೋಗಲಾಡಿಸಿ ಸುಧಾರಣೆ ತರಬೇಕಿದೆ~ ಎಂದು ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಿಎಂಟಿಸಿ ಸಂಯುಕ್ತವಾಗಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಐದು ಲಕ್ಷದ ಒಂದು ರೂಪಾಯಿ ಮೊತ್ತದ `ನೃಪತುಂಗ ಸಾಹಿತ್ಯ ಪ್ರಶಸ್ತಿ~ ಸ್ವೀಕರಿಸಿ ಅವರು ಮಾತನಾಡಿದರು.`ಸ್ನಾತಕ- ಸ್ನಾತಕೋತ್ತರ ಶಿಕ್ಷಣದ ಸಂದರ್ಭದಲ್ಲಿ ಪಗಾರಕ್ಕಾಗಿ ಬರುವ ಶಿಕ್ಷಕರ ಹಾಗೂ ಪ್ರಮಾಣಪತ್ರಗಳಿಗಾಗಿ ಬರುವ ವಿದ್ಯಾರ್ಥಿಗಳು ಹೆಚ್ಚಾಗುತ್ತಿದ್ದಾರೆ. ಪಗಾರ ಹೆಚ್ಚಳದಿಂದಾಗಿ ಶಿಕ್ಷಕರು ಸೋಮಾರಿಗಳಾಗಿದ್ದಾರೆ. ವಿಫುಲ ಅನುದಾನದಿಂದಾಗಿ ಭ್ರಷ್ಟರಾಗುತ್ತಿದ್ದಾರೆ. ನಿವೃತ್ತಿ ವಯೋಮಿತಿ ಹೆಚ್ಚಳ ಕೂಡ ಸಮರ್ಥನೀಯವಲ್ಲ~ ಎಂದು ಹೇಳಿದರು.`ಬಿಜೆಪಿ ಸರ್ಕಾರ ಜನಪ್ರಿಯತೆಗಾಗಿ ಶಿಕ್ಷಣ ಸಂಸ್ಕೃತಿ ಕಲೆಗಾಗಿ ಅವಶ್ಯಕತೆಗಿಂತ ಹೆಚ್ಚು ಹಣ ನೀಡುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಇದಕ್ಕೆ ಪ್ರತಿಯಾಗಿ ಕಲಾವಿದರು, ವಿದ್ವಾಂಸರು ಗುಣಮಟ್ಟದ ಫಲಿತಾಂಶವನ್ನು ನೀಡುವ ಅವಶ್ಯಕತೆ ಇದೆ. ಈ ಕೆಲಸವನ್ನು ಕಲೆ ಸಂಸ್ಕೃತಿಗಳ ಮೇಲಿನ ಪ್ರೀತಿಗಾಗಿ ಮಾಡಬೇಕೆ ಹೊರತು ಹಣದ ಮೇಲಿನ ಪ್ರೀತಿಗಾಗಿ ಮಾಡಬಾರದು. ಹಣಕ್ಕೆ ತಕ್ಕ ಕೆಲಸ, ಕೆಲಸಕ್ಕೆ ತಕ್ಕ ಹಣ ಎಂಬ ನೀತಿಯೇ ಮುಖ್ಯ ಧ್ಯೇಯವಾಗಬೇಕು~ ಎಂದರು.`ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಸಂಖ್ಯೆಯನ್ನು 50ಕ್ಕೆ ಇಳಿಸಿದ ಮುಖ್ಯಮಂತ್ರಿಗಳ ದಿಟ್ಟತನವನ್ನು ರಾಜ್ಯದ ಜನ ಮೆಚ್ಚಿಕೊಂಡಿದ್ದಾರೆ. ಇದು ಮುಖ್ಯಮಂತ್ರಿಗಳಿಗೆ ಸಂದ 51ನೇ ಪ್ರಶಸ್ತಿ ಗೌರವ ಎಂದು ಭಾವಿಸುತ್ತೇನೆ. ಇದೇ ವೇಳೆ ವಿಶ್ವವಿದ್ಯಾಲಯವೊಂದು 12 ಮಂದಿಗೆ ಗೌರವ ಡಾಕ್ಟರೇಟ್ ನೀಡಿದ್ದು ಇದಕ್ಕೆ ರಾಜ್ಯಪಾಲರು ಸಮ್ಮತಿಸಿದ್ದು ಬೇಸರದ ಸಂಗತಿ~ ಎಂದರು.`ಸತ್ಯವನ್ನು ಹೇಳುತ್ತೇನೆ ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ ಎನ್ನುವ ಮಾತಿಗೆ ಬದ್ಧನಾಗಿರುವ ಸಂಶೋಧಕ ಆಗಾಗ ಸಣ್ಣ ಸಣ್ಣ ಶಿಲುಬೆಗಳನ್ನು ಏರಬೇಕಾಗುತ್ತದೆ. ಇಂಥ ಹಿಂಸೆಯನ್ನು ಅನುಭವಿಸಿದ ನೋವೂ ನನ್ನದಾಗಿದೆ ಆದರೆ ಕಾಲ ಕೆಳಗಿನ ಬೆಂಕಿಗಿಂತ ಕಣ್ಣ ಮುಂದಿನ ಬೆಳಕು ದೊಡ್ಡದೆಂಬ ಭಾವನೆಯಿಂದ ಈವರೆಗೆ ನಡೆದು ಬಂದಿದ್ದೇನೆ. ಹೀಗಿದ್ದೂ ನನ್ನ ಶೋಧವೇ ಸತ್ಯವೆಂಬ ಭ್ರಮೆ ನನಗಿಲ್ಲ. ಏಕೆಂದರೆ ಸಂಶೋಧನೆ ಎಂಬುದು ಅಲ್ಪವಿರಾಮ, ಅರ್ಧವಿರಾಮಗಳ ಮೂಲಕ ಪೂರ್ಣ ವಿರಾಮದತ್ತ ಸಾಗುವ ಕ್ರಿಯೆಯಾಗಿದೆ~ ಎಂದು ವಿವರಿಸಿದರು.

`ಇದು ಸಾರಿಗೆ ಸಂಸ್ಥೆಯ ಶ್ರಮಿಕ ವರ್ಗದವರು ಸ್ಥಾಪಿಸಿದ ಪ್ರಶಸ್ತಿ. ಕನ್ನಡ ಜನ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಇದನ್ನು ನೀಡಿದೆ. ಹೀಗಾಗಿ ಎಲ್ಲ ದೃಷ್ಟಿಯಿಂದಲೂ ಸಮುದಾಯವನ್ನು ಸಂಕೇತಿಸುವ ಪ್ರಶಸ್ತಿಯನ್ನು ಹಳ್ಳಿಯ ಸಮುದಾಯ ಕುಟುಂಬದ, ಶ್ರಮ ಸಂಸ್ಕೃತಿಯ ನಾನು ಪ್ರೀತಿಯಿಂದ ಸ್ವೀಕರಿಸಿದ್ದೇನೆ~ ಎಂದರು.

 
`ತಪ್ಪು ಮರುಕಳಿಸದಿರಲಿ~

`ನೃಪತುಂಗ ಸಾಹಿತ್ಯ ಪ್ರಶಸ್ತಿ~ ಸ್ವೀಕರಿಸಿ ಮಾತನಾಡಿದ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ `ಈವರೆಗೆ ಸಚಿವರು ಉತ್ತಮ ಕೆಲಸಗಳೊಂದಿಗೆ ಕೆಲವು ತಪ್ಪುಗಳನ್ನು ಮಾಡಿದ್ದಾರೆ. ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡದವನೇ ಜಂಟಲ್‌ಮನ್ ಎಂದು ಹಿರಿಯರು ಹೇಳುತ್ತಾರೆ. ಈ ಮಾತನ್ನು ನೆನಪಿನಲ್ಲಿಟ್ಟುಕೊಂಡು ಸಚಿವರು ಹಳೆಯ ತಪ್ಪುಗಳು ಮರುಕಳಿಸದಂತೆ ನೃಪತುಂಗನ ಆದರ್ಶದಲ್ಲಿ ರಾಜ್ಯಭಾರ ಮಾಡಲಿ, ಪ್ರಜೆಗಳು ಸಚಿವರ ಆದರ್ಶವನ್ನು ವಾಸ್ತವವಾಗಿಸಲಿ~ ಎಂದು  ಕಿವಿಮಾತು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry