ಶಾಲೆಗಳ ಅಭಿವೃದ್ಧಿ: ಶಿಕ್ಷಕರ ಪಾತ್ರ

7

ಶಾಲೆಗಳ ಅಭಿವೃದ್ಧಿ: ಶಿಕ್ಷಕರ ಪಾತ್ರ

Published:
Updated:
ಶಾಲೆಗಳ ಅಭಿವೃದ್ಧಿ: ಶಿಕ್ಷಕರ ಪಾತ್ರ

ಹೆಗಲ ಮೇಲೆ ದೊಡ್ಡ ಬಾಕ್ಸ್ ಹೊತ್ತು ಬಂದ ವ್ಯಕ್ತಿಯ ಹಿಂದೆ ಸುಮಾರು 65 ವರ್ಷದ ವಯೋವೃದ್ಧರೊಬ್ಬರು ಶಾಲೆಯತ್ತ ಬಂದರು. ಹಣೆಯ ಮೇಲೆ ಕುಂಕುಮದ ಬೊಟ್ಟು, ಕಣ್ಣಿಗೆ ದಪ್ಪನೆಯ ಕನ್ನಡಕ, ಕೈಯಲ್ಲಿ ಛತ್ರಿ, ಹೆಗಲ ಮೇಲೆ ಬಿಳಿ ವಸ್ತ್ರ, ತಲೆಯ ಮೇಲೆ ಸುತ್ತು ಸುತ್ತಿದ ಜುಟ್ಟು. ಆಜಾನುಬಾಹು.

 

` ನಮಸ್ತೆ, ಮಾಷ್ಟ್ರೇ !~  ಎಂದು ತರಗತಿಯತ್ತ ಬಂದ್ರು. ಏನೆಂದು ಆಶ್ಚರ್ಯದಿಂದ ಕೇಳಿದ ಶಿಕ್ಷಕರಿಗೆ,  `ಆಫೀಸ್ ರೂಂ ಎಲ್ಲಿದೆ ಸಾರ್, ಹೆಡ್ಮಾಸ್ಟ್ರು ಎಲ್ಲಿದ್ದಾರೆ? ಎಂದು ಕೇಳಿದರು. ಅದಕ್ಕೆ, ಪಾಠದಲ್ಲಿ ನಿರತರಾದ ಶಿಕ್ಷಕರು ಹೊರಗೆ ಬಂದು ನೇರವಾಗಿ ಶಾಲಾ ಕಛೇರಿಗೆ ಕರೆದುಕೊಂಡು ಹೋದ್ರು.

 

`ನಮಸ್ತೆ ಸಾರ್. ನಾನು ಈ ಶಾಲೆಯ ಹಳೆ ವಿದ್ಯಾರ್ಥಿ.  ಸುಮಾರು 55 ವರ್ಷಗಳ ಹಿಂದೆ ಈ ಶಾಲೆಯಲ್ಲಿ 4 ನೇ ತರಗತಿವರೆಗೆ ಓದಿದ್ದೆ. ನನ್ನ ಹೆಸರು ಕೃಷ್ಣಮೂರ್ತಿ~ ಎಂದು ಆ ವಯೋವೃದ್ಧರು ಯುವಕರಂತೆ ಪರಿಚಯ ಮಾಡಿಕೊಂಡರು!

 

ತಮ್ಮ ಸಹೋದರನ ಜೊತೆಯಲ್ಲಿ ಬಂದಿದ್ದ ಅವರು, ಹೊತ್ತು ತಂದಿದ್ದ ಬಾಕ್ಸ್ ತೆರೆದು, `ಓದಿದ ಶಾಲೆಗೆ ಏನಾದ್ರು ಸಹಾಯ ಮಾಡೋಣವೆಂದು ಬಂದೆ. ಇಗೋ ತಗೊಳ್ಳಿ ಸಾರ್, ಮಕ್ಕಳಿಗೆ 20 ಸ್ಲೇಟ್‌ಗಳು, ಎರಡು ಡಜನ್ ನೋಟ್ ಪುಸ್ತಕಗಳು, ಪೆನ್ನುಗಳು, ಪೆನ್ಸಿಲ್ ಹಾಗೂ ಅಳಿಸುವ ರಬ್ಬರ್~ಎಂದು ಬಾಕ್ಸ್ ಬಿಚ್ಚಿ ಕೊಟ್ಟರು. `ಇವೆಲ್ಲಾ ನಮ್ಮ ತಂದೆ ಸ್ಮರಣಾರ್ಥ ಕೊಡ್ತಿದ್ದೀನಿ ಸಾರ್~ಎಂದರು.  `ಸಾರ್ ನಾವೇನು  ಅಷ್ಟು ಸ್ಥಿತಿವಂತರಲ್ಲ. ನಾನು ಈ ಊರು ಬಿಟ್ಟು ಬೆಂಗಳೂರು ಸೇರ‌್ಕೊಂಡೆ. ಒಂದು ದೇವಸ್ಥಾನದಲ್ಲಿ ಅರ್ಚಕನಾಗಿದ್ದೀನಿ. ನಾ ಕಲಿತ ಶಾಲೆಗೆ ಏನಾದ್ರು ಸ್ವಲ್ಪ ಸಹಾಯ ಮಾಡೋಣವೆಂದು ತಂದೀವ್ನಿ~ಎಂದು ಬಹು ಉತ್ತಾಹದಿಂದ ಹೇಳಿದರು.~ನೀವು ಬರೋದ್ಕಿಂತ ಮುಂಚೆ ರಾಮಪ್ಪ ಮಾಸ್ಟ್ರು,, ಭೀಮಪ್ಪ ಮಾಸ್ಟ್ರು ಅಂತ ಇದ್ರು.  ತುಂಬಾ ಒಳ್ಳೆ ಮಾಸ್ಟ್ರುಗಳು!~ ಎಂದು ಹಳೆ ಶಿಕ್ಷಕರನ್ನು ಆತ್ಮೀಯತೆಯಿಂದ ನೆನೆದರು.

 

`ದಯವಿಟ್ಟು ಇವೆಲ್ಲಾ ತಗೋಳ್ಳಿ ಸಾರ್. ನಿಮಗೆ ಗೊತ್ತಿರುವ ಯಾವ ಮಕ್ಕಳು ತೊಂದ್ರೆಯಲ್ಲಿದ್ದಾರೋ ಅಂಥವರಿಗೆ ಹಂಚಿ~  ಎಂದು ಹೇಳಿ ಹೊರಡಲು ಸಿದ್ಧರಾದರು. ಮುಖ್ಯಶಿಕ್ಷಕರಿಗೆ ಸಂತೋಷ ಜೊತೆಗೆ ಆಶ್ಚರ್ಯ. ಕಾರಣ ಇಂಥ ವಯೋವೃದ್ಧರು ತಾವು ಓದಿದ ಶಾಲೆ ಬಗ್ಗೆ ಎಷ್ಟು ಅಭಿಮಾನ ಇಟ್ಟುಕೊಂಡಿದ್ದಾರಲ್ಲಾ ಅಂತ. ಮುಖ್ಯ ಶಿಕ್ಷಕರು ಶಾಲೆಯ ಮತ್ತು ಶಿಕ್ಷಕರ ಪರಿಚಯ ಮಾಡಿಸಿ ಅವರ ಉಡುಗೊರೆಯನ್ನು ಮಕ್ಕಳಿಗೆ ತಲುಪಿಸುವ ಭರವಸೆ ನೀಡಿ ತಮ್ಮ ಶಾಲೆಯ ಹಳೆ ವಿದ್ಯಾರ್ಥಿಯನ್ನು ಬೀಳ್ಕೊಟ್ಟರು.ಈ ರೀತಿಯ ಉದಾಹರಣೆಗಳು ಸಾಮಾನ್ಯವಾಗಿ ಎಲ್ಲಾ ಶಾಲೆಗಳಲ್ಲಿ ಒಂದಲ್ಲಾ ಒಂದು ರೀತಿ ಇರಬಹುದು. ಇಂದು ಅನೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸಹಕಾರದಿಂದ ಗ್ರಾಮದಲ್ಲಿ ತಮ್ಮ ಶಾಲೆಗೆ ಬೇಕಾದ ವಸ್ತುಗಳನ್ನು ಸಾಕಷ್ಟು ಸಂಗ್ರಹಿಸಿದ್ದಾರೆ.

 

ತಮ್ಮ ಶಾಲೆ ಉತ್ತಮ ಸ್ಥಿತಿಯಲ್ಲಿರಬೇಕು ಎಂದುಕೊಂಡು ಅನೇಕ ಶಿಕ್ಷಕರು ತಮ್ಮ ಶಾಲಾಭಿವೃದ್ಧಿಗೆ ಸಮುದಾಯದೊಂದಿಗೆ ಹೆಗಲು ಜೋಡಿಸಿದ್ದಾರೆ.  ಕೇಂದ್ರ ಸರ್ಕಾರದ ಸರ್ವ ಶಿಕ್ಷಣ ಅಭಿಯಾನ ಯೋಜನೆ ಬರುವ ಮೊದಲು ಶಾಲೆಗಳಲ್ಲಿ ಕೂರಲು ಹೆಚ್ಚಾಗಿ ಪೀಠೋಪಕರಣಗಳಿರಲಿಲ್ಲ.ಆದರೆ, ಇಂದು ಸರ್ವ ಶಿಕ್ಷಣ ಅಭಿಯಾನದ ದೆಸೆಯಿಂದ ಸಾಕಷ್ಟು ಹಣ ಶಾಲೆಗಳಿಗೆ ಹರಿದು ಬರುತ್ತಿದೆ.  ಇಲ್ಲಿ ಹಣಕಾಸಿನ ನೆರವಿನಿಂದ ಶಾಲೆಗಳು ಅಭಿವೃದ್ಧಿಯಾಗುತ್ತವೆಂದು ಕೊಂಡರೆ ಅದು ಹಸಿ ಸುಳ್ಳಾದೀತು. ಕಾರಣ ಹಲವು ಶಾಲೆಗಳಲ್ಲಿ ಶಿಕ್ಷಕರ ಅಸಮರ್ಪಕ ಹೊಂದಾಣಿಕೆಯಿಂದ ಅಂದುಕೊಂಡಂತೆ ಯೋಜನೆಗಳು ಫಲಕಾರಿಯಾಗಿ ಬಳಕೆಯಾಗುತ್ತಿಲ್ಲ.

 

ಆದರೂ ಕ್ರಿಯಾಶೀಲ ಶಿಕ್ಷಕರಿರುವ ಶಾಲೆಗಳು ಇತ್ತೀಚೆಗೆ ಹೆಚ್ಚಾಗುತ್ತಿರುವುದು ಸಂತೋಷದ ಸಂಗತಿ. ಈ ಬಾಂಧವ್ಯದಿಂದ ಹಳ್ಳಿಗಳಲ್ಲಿ, ನಗರಗಳಲ್ಲಿ ಅನೇಕ ಸರ್ಕಾರಿ ಶಾಲೆಗಳಿಗೆ ಹಳೆ ವಿದ್ಯಾರ್ಥಿ ಸಮೂಹ ತಮ್ಮ ಔದಾರ್ಯ ಮೆರೆದಿದ್ದಾರೆ.

 

ಅನೇಕ ಶಾಲೆಗಳಿಗೆ ಬೇಕಾದ ಮೂಲಭೂತ ಸೌಕರ್ಯ ಕಲ್ಪಿಸುವುದರ ಜೊತೆಗೆ ಶಾಲೆಗಳಿಗೆ ಕಂಪ್ಯೂಟರ್, ಪೀಠೋಪಕರಣಗಳು, ಪಾಠೋಪಕರಣಗಳು, ರಾಷ್ತ್ರನಾಯಕರ ಭಾವಚಿತ್ರಗಳು ಮುಂತಾದ ಕೊಡುಗೆ ನೀಡಿರುವುದೂ ಉಂಟು.

ಸರ್ಕಾರಿ ಶಾಲೆಗಳಲ್ಲಿ ತುಂಬಾ ಉಪಯುಕ್ತ ಯೋಜನೆ ಅಕ್ಷರ ದಾಸೋಹ ಕಾರ್ಯಕ್ರಮ.

 

ಆರಂಭವಾದಾಗಿನಿಂದಲೂ ನಾಡಿನ ಅನೇಕ ಧಾರ್ಮಿಕ ಕೇಂದ್ರಗಳು, ಸಂಘ ಸಂಸ್ಥೆಗಳು, ಗ್ರಾಮಸ್ಥರು ಹಾಗೂ ಪೋಷಕರಿಂದ ಅಡುಗೆಯ ಪರಿಕರಗಳು, ಊಟದ ತಟ್ಟೆಗಳನ್ನು ಕೊಡುಗೆಯಾಗಿ ಪಡೆಯದೇ ಇರುವ ಶಾಲೆಗಳಿಲ್ಲವೆಂದರೆ ಉತ್ಪ್ರೇಕ್ಷೆಯಲ್ಲ!ಶಾಲೆಯಲ್ಲಿ ಕ್ರೀಡಾಕೂಟದ ಸಮಯ ಬಂತೆಂದರೆ, ಗ್ರಾಮದಲ್ಲಿನ ಯುವಕ ಸಂಘಗಳು, ಸಂಸ್ಥೆಗಳಿಂದ ಮಕ್ಕಳಿಗೆ ಕ್ರೀಡಾ ಸಮವಸ್ತ್ರ, ಕ್ರೀಡಾ ಸಾಮಗ್ರಿಗಳನ್ನು ಅದೆಷ್ಟು ಶಾಲೆಗಳು ಪಡೆದಿಲ್ಲ?2000ನೇ ಇಸವಿಯ ನಂತರ ನಮ್ಮ ರಾಜ್ಯದಲ್ಲಿ `ಶಾಲಾ ದತ್ತು ಯೋಜನೆ~ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ನಾಡಿನ ಶಿಕ್ಷಣ ಸಂಸ್ಥೆಗಳು ಮುಖ್ಯವಾಗಿ  ಅನೇಕ ಸರ್ಕಾರಿ ಶಾಲೆಗಳು ತುಂಬಾ ಪ್ರಯೋಜನ ಪಡೆದಿವೆ. ಶಾಲಾ ಕಟ್ಟಡಗಳ ದುರಸ್ತಿ, ಹೊಸ ಕೊಠಡಿಗಳ ನಿರ್ಮಾಣ, ಪಾಠೋಪಕರಣಗಳು ಹಾಗೂ ಪೀಠೋಪಕರಣಗಳ ಕೊಡುಗೆ, ಬಡ ವಿದ್ಯಾರ್ಥಿಗಳನ್ನು ದತ್ತು ತಗೆದುಕೊಂಡು ಅವರಿಗೆ ಆರ್ಥಿಕ ನೆರವು ನೀಡುವುದು ಮುಂತಾದ ಸಹಕಾರಗಳನ್ನು ಪಡೆಯಲಾಗುತ್ತಿದೆ. ಆದರೂ, ನಮ್ಮ ಶಿಕ್ಷಣ ಕೇಂದ್ರಗಳು ಇನ್ನೂ ಅಭಿವೃದ್ಧಿಯಾಗುವ ಅವಶ್ಯಕತೆ ಹೊಂದಿವೆ.ಆದ್ದರಿಂದ, ಶಾಲೆಗಳಲ್ಲಿರುವ ಅಲ್ಪಸ್ವಲ್ಪ ಕೊರಗು ಹೊಂದಿರುವ ನಮ್ಮ ಶಿಕ್ಷಕರು ತಮ್ಮ ಅಸಹಾಯಕತೆಯ ಪೊರೆ ಕಳಚಿ ಕ್ರಿಯಾಶೀಲರಾದಲ್ಲಿ, ಶಾಲೆಗಳನ್ನು ಮತ್ತಷ್ಟು ಉತ್ತಮಗೊಳಿಸುವತ್ತ ಹೆಜ್ಜೆ ಹಾಕಿದಲ್ಲಿ, ಸರ್ಕಾರಿ ಶಾಲೆಗಳು ಸುಂದರ ತಾಣವಾಗುವುದರಲ್ಲಿ ಸಂಶಯವಿಲ್ಲ.ನಮ್ಮ ಶಾಲೆಯ ಶಿಕ್ಷಕರು ಈಗಾಗಲೇ ತಮ್ಮ ಶಾಲೆಗಳನ್ನು ಅಭಿವೃದ್ದಿ ಪಡಿಸುತ್ತಿದ್ದರೂ ಕೆಲವೊಂದು ಶಾಲೆಗಳು ಇನ್ನೂ ಪ್ರಗತಿಗೆ ಹೆಜ್ಜೆ ಹಾಕದಿದ್ದಲ್ಲಿ, ಈ ಕೆಳಗಿನ ಅಂಶಗಳನ್ನು ತಮ್ಮ ಕರ್ತವ್ಯದೊಂದಿಗೆ ಮೈಗೂಡಿಸಿಕೊಳ್ಳುವುದು ಉತ್ತಮ. ಕಾರಣ, ಇತ್ತೀಚೆಗೆ ವಿಶ್ವದ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷ ಒಬಾಮಾರಿಂದ ನಮ್ಮ ದೇಶ ಶಿಕ್ಷಣದ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೆ, ಮುಂಬರುವ ವರ್ಷಗಳಲ್ಲಿ ಭಾರತ ಮುಂದುವರೆದ ದೇಶವಾಗಲು ನಮ್ಮ ಶಾಲೆಗಳನ್ನು ಈಗಿನಿಂದಲೇ  ಸಿದ್ಧಗೊಳಿಸಬೇಕಾಗಿದೆ.

ನಮ್ಮ  ಶಾಲೆಗಳನ್ನು ಆಧುನಿಕ ವ್ಯವಸ್ಥೆಗೆ ರೂಪುಗೊಳಿಸಬೇಕಾಗಿದೆ. ಶಿಕ್ಷಕ ಸಮುದಾಯ ತಮ್ಮ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಕೆಳಗಿನ ಅಂಶಗಳನ್ನು ಕಾರ್ಯಯೋಜನೆಗೆ ತರಬೇಕಾಗಿದೆ.

*  ಪೋಷಕರನ್ನು, ಗ್ರಾಮಸ್ಥರನ್ನು ಶಾಲೆಯತ್ತ ಓಲೈಸುವುದು*  ಶಾಲೆಗೆ ಬೇಕಾದ ಅಗತ್ಯ ಪರಿಕರಗಳ, ಪಾಠೋಪಕರಣಗಳ/ಪೀಠೋಪಕರಣಗಳ ಪಟ್ಟಿಮಾಡಿ ಶಾಲೆಯಲ್ಲಿ ಪ್ರಕಟಿಸಿ ದಾನಿಗಳಿಗೆ ಆಯ್ದುಕೊಳ್ಳಲು ನೆರವಾಗುವುದು*  ದೇಣಿಗೆ ನೀಡಿದವರ ಹೆಸರನ್ನು ಶಾಲಾ ಸೂಚನಾ ಫಲಕದಲ್ಲಿ ಪ್ರಕಟಿಸುವುದು* ಶಾಲೆಗೆ ಬೇಕಾದ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಮುಂತಾದ ಪತ್ರಿಕೆಗಳ ಪಟ್ಟಿಮಾಡಿ ಪೋಷಕರು/ದಾನಿಗಳಿಗೆ ಆಯ್ದ ಪತ್ರಿಕೆ ಶಾಲೆಗೆ ತರಿಸಿಕೊಡಲು ಸಹಕರಿಸುವುದು.* ಮುಖ್ಯವಾಗಿ ಶಾಲಾ ಶಿಕ್ಷಕ ವೃಂದ ಹೊಂದಾಣಿಕೆ, ಪಾರದರ್ಶಕ ಹಾಗೂ ಉತ್ತರದಾಯಿತ್ವ ಹೊಂದುವುದು.* ಶಾಲಾ ಶಿಕ್ಷಕ ವೃಂದ ಸಮುದಾಯದೊಂದಿಗೆ ಆತ್ಮೀಯತೆ ಹಾಗೂ ಉತ್ತಮ ಬಾಂಧವ್ಯ ಹೊಂದುವುದು.* ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ದೇಣಿಗೆ ನೀಡಿದವರನ್ನು ಅಭಿನಂದಿಸುವುದು/ಸ್ಮರಿಸುವುದು* ಶಾಲಾ ಆವರಣಗಳಲ್ಲಿ ಮಕ್ಕಳಿಗೆ ಆಕರ್ಷಕ ಜಾರುಬಂಡಿ, ಉಯ್ಯೊಲೆ, ಆಟಿಕೆ ಚಕ್ರ, ಗಣಿತದ ಚಿಹ್ನೆಗಳ ಮಾದರಿ, ಜಿಲ್ಲಾ, ರಾಜ್ಯ ಹಾಗೂ ದೇಶದ ನಕ್ಷೆಗಳ ಮಾದರಿ ನಿರ್ಮಿಸಲು ಪ್ರೇರೇಪಿಸುವುದು.*  ಅವಶ್ಯಕವಾಗಿ ಶಾಲೆಯ ದಶಮಾನೋತ್ಸವ, ರಜತ ಮಹೋತ್ಸವ, ಸುವರ್ಣ ಮಹೋತ್ಸವ ಮುಂತಾದ ಆಚರಣೆಗಳನ್ನು ಮಾಡುವುದರಿಂದ ಶಾಲೆಯು ಸಮುದಾಯದೊಂದಿಗೆ ನಿರಂತರ ಸಂಪರ್ಕ ಹೊಂದುವುದು.ಈ ಎಲ್ಲಾ ಅಂಶಗಳನ್ನು ಪೂರೈಸಲು ನಮ್ಮ ಪೋಷಕ ಸಮುದಾಯ ಸಿದ್ಧವಿದೆ.   ಆದರೆ, ಅವರನ್ನು ಶಾಲೆಯತ್ತ ಕರೆತರುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಬೇಕಾಗಿದೆ.

 

ಇಂದು ವಿವಿಧ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಾಗಿರಬಹುದು, ರಾಜಕೀಯ ನಾಯಕರಿರಬಹುದು ತಾವು ಕಲಿತ  ಶಾಲೆ, ಶಿಕ್ಷಕರನ್ನು ನೆನೆಯುವಲ್ಲಿ ಮೊದಲು ಸ್ಮರಿಸುವುದು ಪ್ರಾಥಮಿಕ ಶಾಲೆ ಹಾಗೂ ಪ್ರಾಥಮಿಕ ಶಿಕ್ಷಕರನ್ನು. ಶಾಲೆ ಹಾಗೂ ಶಿಕ್ಷಕರು ಉತ್ತಮವಾಗಿದ್ದಲ್ಲಿ ಧನಾತ್ಮಕವಾಗಿ ಸ್ಮರಿಸುತ್ತಾರೆ.

 

ಆದ್ದರಿಂದ, ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೆ ಎನ್ನುವಂತೆ ಆರಂಭದ ಶಿಕ್ಷಣ ಕೇಂದ್ರಗಳು ಉತ್ತಮ ಆದರ್ಶದಿಂದ, ಸೇವೆ ಸಲ್ಲಿಸಿದ್ದಲ್ಲಿ ಶಾಲೆಯತ್ತ ಸಮುದಾಯ ತನ್ನಿಂತಾನೇ ಬರುವುದರಲ್ಲಿ ಸಂಶಯವಿಲ್ಲ.ವಿದ್ಯಾಕೇಂದ್ರಗಳು ಕೇವಲ ಇಟ್ಟಿಗೆ-ಗಾರೆಗಳಿಂದ ಕಟ್ಟಿದ ಮೂರ್ತ ಕಟ್ಟಡಗಳಾಗದೇ ಭಾವನೆಗಳಿಂದ ಬೆಸೆದ ಬಾಂಧವ್ಯದ ಭವನಗಳಾಗಬೇಕು.  ಹಾಗಾದಾಗ ಮಾತ್ರ ಶಾಲೆಗಳ ಬಗ್ಗೆ ಸಮುದಾಯ ಪೂಜ್ಯ ಭಾವನೆ ಹೊಂದಲು ಸಾಧ್ಯ.ಇಂತಹ ಭಾವನೆಯಿಂದ ಶಾಲೆಗೆ ಅಗತ್ಯ ನೆರವು ಪಡೆಯಲು ಸಾಧ್ಯ.ಈ ನಿಟ್ಟಿನಲ್ಲಿ ಶಿಕ್ಷಣ ಕೇಂದ್ರದ ಶಿಕ್ಷಕ ಸಮುದಾಯ ತಮ್ಮ ನಿತ್ಯ ಕರ್ತವ್ಯದ ಜೊತೆಗೆ ಸಮುದಾಯದೊಂದಿಗೆ ಪ್ರೀತಿ, ಸ್ನೇಹ, ಬಾಂಧವ್ಯಗಳನ್ನು ಮೈಗೂಡಿಸಿಕೊಂಡಲ್ಲಿ ತಮ್ಮ ಶಾಲೆಗಳನ್ನು ಭೌತಿಕ ಸಂಪನ್ಮೂಲಭರಿತ ಶಾಲೆಗಳನ್ನಾಗಿಸಬಹುದು. ತಮ್ಮ ಶಾಲೆಗಳ ಅಭಿವೃದ್ಧಿಯನ್ನು ಸರ್ಕಾರದಿಂದ ಆದೇಶ, ಇಲಾಖೆಯಿಂದ ಸುತ್ತೋಲೆ ಬಂದಮೇಲಷ್ಟೆ ಮಾಡಬೇಕೆಂದೇನೂ ಇಲ್ಲ.

 

ಸಮುದಾಯದೊಂದಿಗೆ ಬೆರೆತು ಶಾಲೆಗೆ ಬೇಕು ಬೇಡ ಎಂಬುದನ್ನು ಎಸ್. ಡಿ. ಎಂ, ಸಿ ಸಮಿತಿಯೊಂದಿಗೆ ಚರ್ಚಿಸಿ ಹೆಜ್ಜೆ ಇರಿಸಿದಲ್ಲಿ ಶಾಲೆಗಳು ಗ್ರಾಮದ ಸುಂದರ ಹಾಗೂ ಸರ್ವ ಧರ್ಮ ಸಮನ್ವಯ ತಾಣವಾಗುವುದರಲ್ಲಿ ಸಂದೇಹವಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry