ಭಾನುವಾರ, ಮೇ 22, 2022
22 °C

ಶಾಲೆಗಳ ವಿಲೀನಕ್ಕೆ ಕೋರ್ಟ್ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಸರ್ಕಾರಿ ಶಾಲೆಗಳನ್ನು ಸಮೀಪದ ಶಾಲೆಗಳೊಂದಿಗೆ ವಿಲೀನಗೊಳಿಸಲು ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.ಐವರಿಗಿಂತ ಕಡಿಮೆ ವಿದ್ಯಾರ್ಥಿಗಳು ಇರುವ 617 ಹಾಗೂ 10ಕ್ಕಿಂತ ಕಡಿಮೆ ಮಕ್ಕಳು ಇರುವ 322 ಶಾಲೆಗಳನ್ನು ವಿಲೀನಗೊಳಿಸುವ ಸಂಬಂಧ 2011ರ ಸೆಪ್ಟೆಂಬರ್ 24ರಂದು ಸರ್ಕಾರ ಹೊರಡಿಸಿರುವ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಊರ್ಜಿತಗೊಳಿಸಿದೆ. ಆದೇಶಕ್ಕೆ ಇಲ್ಲಿಯವರೆಗೆ ಇರುವ ತಡೆಯಾಜ್ಞೆ ಇದರಿಂದ ತೆರವುಗೊಂಡಿದೆ.ಆದರೆ ಮಕ್ಕಳಿಗೆ ಕಡ್ಡಾಯವಾಗಿ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ನ್ಯಾಯಮೂರ್ತಿಗಳು ಸರ್ಕಾರಕ್ಕೆ ನಿರ್ದೇಶಿಸಿದ್ದಾರೆ. ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸದೇ ಹೋದರೆ ನ್ಯಾಯಾಂಗ ನಿಂದನೆ ಮೊಕದ್ದಮೆ ಎದುರಿಸಬೇಕಾಗುತ್ತದೆ, ಕಠಿಣ ಕ್ರಮಕ್ಕೆ ಆದೇಶಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಇದೇ ವೇಳೆ ನ್ಯಾಯಮೂರ್ತಿಗಳು ನೀಡಿದ್ದಾರೆ.ಶಾಲೆಗೆ ಹೋಗುವ ಮಕ್ಕಳನ್ನು ಗುರುತಿಸಿ ಅವರಿಗೆ ಉಚಿತವಾಗಿ ಬಸ್ ಪಾಸ್‌ಗಳನ್ನು ನೀಡುವ ಬಗ್ಗೆ ಚಿಂತನೆ ನಡೆಸುವಂತೆಯೂ ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ.ವಿಲೀನಕ್ಕೆ ಸಂಬಂಧಿಸಿದ ಸರ್ಕಾರದ ಆದೇಶದ ರದ್ದತಿಗೆ ಕೋರಿ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಸೇರಿದಂತೆ ಹಲವು ಸಾಹಿತಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು.`ಪ್ರತಿ ಮಗುವಿಗೆ ಕಡ್ಡಾಯ ಶಿಕ್ಷಣ ನೀಡಬೇಕು ಎಂದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಗಣನೆಗೆ ತೆಗೆದುಕೊಂಡರೆ ಸರ್ಕಾರ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗುತ್ತದೆ. ಅದನ್ನು ಬಿಟ್ಟು ಇರುವ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಸರಿಯಲ್ಲ~ ಎನ್ನುವುದು ಅರ್ಜಿದಾರರ ವಾದ.ಸರ್ಕಾರ ಹೇಳಿದ್ದೇನು?: `ಶಾಲೆಗಳನ್ನು ವಿಲೀನಗೊಳಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆಯೇ ವಿನಾ ಅದನ್ನು ಮುಚ್ಚಲಾಗುತ್ತಿದೆ ಎನ್ನುವುದು ಸರಿಯಲ್ಲ. ಕೇವಲ ಮೂರು ಕಿ.ಮೀ. ವ್ಯಾಪ್ತಿಯ ಒಳಗಿನ ಶಾಲೆಗಳೊಂದಿಗೆ ವಿಲೀನಗೊಳಿಸಲಾಗುತ್ತಿದೆ.ಶಿಕ್ಷಕರು ಹಾಗೂ ಮಕ್ಕಳ ನಡುವೆ ಸೌಹಾರ್ದ ವಾತಾವರಣ ಕಲ್ಪಿಸಲು, ಗುಣಮಟ್ಟದ ಶಿಕ್ಷಣ ನೀಡಲು, ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಇಲಾಖೆ ಈ ನಿರ್ಣಯ ತೆಗೆದುಕೊಂಡಿದೆ~ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೆ.ಎಂ.ನಟರಾಜ್ ಹಾಗೂ ಸರ್ಕಾರದ ಪರ ವಕೀಲ ದೇವದಾಸ್ ಅವರು ವಿಚಾರಣೆ ವೇಳೆ ಕೋರ್ಟ್ ಗಮನಕ್ಕೆ ತಂದರು.`ಮಕ್ಕಳು ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ ಸರ್ಕಾರದಿಂದ ಹೆಚ್ಚಿಗೆ ಅನುದಾನ ನೀಡಲು ಸಹಕಾರಿಯಾಗುತ್ತದೆ. ಶಾಲೆಗಳಿಗೆ ಹೆಚ್ಚಿನ ಮಟ್ಟದಲ್ಲಿ ಮೂಲ ಸೌಕರ್ಯ ನೀಡಲು ಅನುಕೂಲವಾಗುತ್ತದೆ. ಶಾಲೆಯಲ್ಲಿ ಕಡಿಮೆ ಮಕ್ಕಳು ಕಲಿಯುತ್ತಿದ್ದರೆ ಅವರ ಮನೋವಿಕಾಸ ಕಷ್ಟ ಎಂಬ ಕಾರಣಕ್ಕೆ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ~ ಎಂದು ಅವರು ವಿವರಿಸಿದರು.`ಮಕ್ಕಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ~ ಎಂದೂ ನಟರಾಜ್ ವಿವರಿಸಿದರು. ಆಗ ಅರ್ಜಿದಾರರ ಪರ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು, `ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ನ್ಯಾಯಾಲಯವೇ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಸರ್ಕಾರ ವ್ಯವಸ್ಥೆ ಕಲ್ಪಿಸುವ ಬಗ್ಗೆ ಖಚಿತವಾಗಿ ಹೇಳಲು ಆಗದು~ ಎಂದರು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಸಾರಿಗೆ ವ್ಯವಸ್ಥೆ ಬಗ್ಗೆ ಒತ್ತಿ ಹೇಳಿದ್ದು ಮಾತ್ರವಲ್ಲದೇ, ಆದೇಶದಲ್ಲಿಯೂ ಅದನ್ನು ಉಲ್ಲೇಖಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.