ಭಾನುವಾರ, ಮೇ 22, 2022
24 °C

ಶಾಲೆಗೆ ನುಗ್ಗಿದ ಮಳೆ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ: ಪಟ್ಟಣದಲ್ಲಿ ಭಾನುವಾರ ಮತ್ತು ಸೋಮವಾರ ಸುರಿದ ಧಾರಾಕಾರ ಮಳೆಯು ರೈತರಲ್ಲಿ ಸಂತಸ ಮೂಡಿಸಿದರೆ, ಇತ್ತ ಶಾಲಾ ಕೋಣೆಗಳು ಜಲಾವೃತಗೊಂಡಿವೆ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಡಬೇಕಾದ ಪ್ರಸಂಗ ನಡೆದಿದೆ.ಸೋಮವಾರ ಮಧ್ಯಾಹ್ನ ಸುರಿದ ಭಾರಿ ಮಳೆಯಿಂದ ಪಟ್ಟಣ ಸಮೀಪದ ಇಂಗಳಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣ ಸೇರಿದಂತೆ ಕೆಲವು ಕೋಣೆಗಳಿಗೆ ನೀರು ನುಗ್ಗಿತು. ಕೊಠಡಿಗಳಲ್ಲಿ ನೀರು ನಿಂತಿದ್ದರಿಂದ ಹೊರಗಡೆಯೇ ಪಾಠ ಮಾಡುವಂಥ ಪರಿಸ್ಥಿತಿ ಎದುರಾಗಿದೆ.ಪ್ರತಿವರ್ಷ ಮಳೆ ಬಂದಾಗ ಮಳೆ ನೀರು ಶಾಲೆಗೆ ನುಗ್ಗುವುದು ಸಾಮಾನ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ಧಕ್ಕೆಯಾಗುತ್ತಿದೆ. ಆದರೂ ಶಾಲಾ ಮೇಲುಸ್ತುವಾರಿ ಸಮಿತಿಯಾಗಲಿ ಅಥವಾ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮ ಅಭಿವೃದ್ಧಿ ಹೋರಾಟ ಸಮಿತಿ ಗೌರವ ಅಧ್ಯಕ್ಷ ಬಸವರಾಜ ಅಳ್ಳೊಳಿ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಹೂಗಾರ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಮಿತಿ ಸದಸ್ಯರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೀರಪ್ಪ ಅವರನ್ನು ಸಂಪರ್ಕಿಸಿ ಸ್ಥಳಕ್ಕೆ ಬರುವಂತೆ ಮನವಿ ಮಾಡಿದರು. ನಂತರ ಅಲ್ಲಿಗೆ ಆಗಮಿಸಿದ ಅಧಿಕಾರಿಯು, ಮುಂದಿನ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ, ಮಳೆ ನೀರು ಒಳಬರದಂತೆ ತಡೆಗೋಡೆ ನಿರ್ಮಿಸಲಾಗುವುದು ಎಂದು ತಿಳಿಸಿದರು.ಶಾಲೆಯೊಳಗೆ ಮಳೆ ನೀರು ಹೋಗದಂತೆ ಕೂಡಲೇ ಕ್ರಮ ಕೈಗೊಳ್ಳಬೇಕು. ವಿಳಂಬವಾದರೆ ಗ್ರಾಮ ಪಂಚಾಯಿತಿ ಎದುರು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಸಮಿತಿ ಸದಸ್ಯರು ಎಚ್ಚರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.