ಬುಧವಾರ, ಏಪ್ರಿಲ್ 14, 2021
24 °C

ಶಾಲೆಗೆ ಬೀಗ ಹಾಕಿ ಗ್ರಾಮಸ್ಥರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಲೆಗೆ ಬೀಗ ಹಾಕಿ ಗ್ರಾಮಸ್ಥರ ಪ್ರತಿಭಟನೆ

ಚಳ್ಳಕೆರೆ: ತಾಲ್ಲೂಕಿನ ತಳಕು ಹೋಬಳಿ ಚಿಕ್ಕಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ವರ್ಷವಾದರೂ ಪೂರ್ಣಗೊಳ್ಳದ ಅಡುಗೆ ಮತ್ತು ಶಾಲಾ ಕೊಠಡಿ. ಮುಖ್ಯ ಶಿಕ್ಷಕ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಮತ್ತು ಇಲ್ಲಿನ ಶಿಕ್ಷಕರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಶುಕ್ರವಾರ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.ಮೂರು ವರ್ಷಗಳಿಂದ ಮುಖ್ಯಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಹನುಮಂತರೆಡ್ಡಿ ಹಾಗೂ ಸಹಶಿಕ್ಷಕರಾದ ಜಿ.ಟಿ. ಆನಂದ, ಚನ್ನಬಸಪ್ಪ ಶಾಲೆಗೆ ತಡವಾಗಿ ಬರುವುದರ ಜತೆಗೆ ಪಾನಮತ್ತರಾಗಿ ಮಕ್ಕಳಿಗೆ ಪಾಠ ಹೇಳುತ್ತಾರೆ. ಇದಲ್ಲದೇ ಕಳೆದ ಎರಡು ವರ್ಷಗಳ ಹಿಂದೆ ಇಲ್ಲಿನ ಶಾಲೆಗೆ ಮಂಜೂರಾದ ರೂ.65ಸಾವಿರ ವೆಚ್ಚದ ಅಡುಗೆ ಕೋಣೆ ಹಾಗೂ ರೂ.3.50ಲಕ್ಷದ ಒಂದು ಶಾಲಾ ಕೊಠಡಿ ನಿರ್ಮಾಣ ಕಾರ್ಯ ಕಳಪೆ ಮಟ್ಟದಲ್ಲಿದೆ. ಆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಹಣ ಮಾತ್ರ ಖಾತೆಯಿಂದ ಡ್ರಾ ಆಗಿದೆ ಎಂದು ಗ್ರಾಮಸ್ಥರು ತಿಳಿಸಿದರು.ಈ ಕುರಿತು ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎ. ತಿಮ್ಮಣ್ಣ ಅವರಿಗೆ ಮಾಹಿತಿ ನೀಡಿದರೂ ಗಮನಹರಿಸುತ್ತಿಲ್ಲ. ಶಾಲೆ ಮತ್ತು ಮಕ್ಕಳ ಹಿತಾಸಕ್ತಿಗಿಂತ ಶಿಕ್ಷಕರ ಹಿತಾಸಕ್ತಿಯೇ ಅವರಿಗೆ ಮುಖ್ಯವಾಗಿದೆ. ಶಾಲೆಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ವಿಷಯ ತಿಳಿಸಿದರೂ ಅಧಿಕಾರಿ ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಾರೆ ಎಂದು ಬಿಇಒ ವಿರುದ್ಧ ಗ್ರಾಮಸ್ಥರು ಹರಿಹಾಯ್ದರು.ಮಧ್ಯಾಹ್ನದ ಹೊತ್ತಿಗೆ ಆಗಮಿಸಿದ ಬಿಇಒ ತಿಮ್ಮಣ್ಣ ಅವರನ್ನುತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಇಲ್ಲಿನ ಮುಖ್ಯ ಶಿಕ್ಷಕ ಶಾಲಾ ಕೊಠಡಿಗೆ ಉಪಯೋಗಿಸುವ ಕಬ್ಬಿಣದ ಆ್ಯಂಗ್ಲರ್ ಅನ್ನು ರೂ.1,800ಗಳಿಗೆ ಮಾರಾಟ ಮಾಡಿದ್ದರು. ಇದನ್ನು ಸಾಗಿಸಲು ಬಂದಿದ್ದ ಆಟೋರಿಕ್ಷಾವನ್ನು ಹಿಡಿದು ಗ್ರಾಮಸ್ಥರು ಶಾಲಾ ವಸ್ತುವನ್ನು ಉಳಿಸಿಕೊಂಡಿದ್ದೇವೆ. ರಾತ್ರಿ ಹತ್ತು ಗಂಟೆ ಸಮಯದಲ್ಲಿ ಶಾಲಾ ಕೊಠಡಿಗಳ ಬಾಗಿಲು ತೆರೆದಿರುತ್ತವೆ ಎಂದು ದೂರುಗಳ ಸುರಿಮಳೆಗೈದರು.ನಂತರ ಮಾತನಾಡಿದ ಬಿಇಒ ತಿಮ್ಮಣ್ಣ, ಈಗಾಗಲೇ ನಿಮ್ಮ ದೂರುಗಳನ್ನು ಕೇಳಿ ಹಿಂದೆ ಇದೇ ಮುಖ್ಯ ಶಿಕ್ಷಕರನ್ನು ಹಣ ದುರುಪಯೋಗದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿತ್ತು. ಇದನ್ನೇ ಪುನರಾವರ್ತನೆ ಮಾಡುತ್ತಿರುವ ಮುಖ್ಯ ಶಿಕ್ಷಕನ ವಿರುದ್ಧ ಕಡ್ಡಾಯ ನಿವೃತ್ತಿಗೆ ವರದಿ ಸಲ್ಲಿಸುತ್ತೇನೆ. ನಿಮ್ಮ ಗ್ರಾಮದವರೇ ಎಸ್‌ಡಿಎಂಸಿ ಅಧ್ಯಕ್ಷರಾಗಿರುತ್ತಾರೆ. ಅವರಿಗೂ ಶಾಲೆಯ ಬಗ್ಗೆ ಆಸಕ್ತಿ ಇರಬೇಕು ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಸ್ಥರು, ಎಸ್‌ಡಿಎಂಸಿ ಅಧ್ಯಕ್ಷರೂ ಮುಖ್ಯಶಿಕ್ಷಕರ ಜತೆಗೆ ಶಾಮೀಲಾಗಿದ್ದಾರೆ. ಇದಲ್ಲದೇ ಸಹಶಿಕ್ಷಕರಾದ ಜಿ.ಟಿ. ಆನಂದ, ಚನ್ನಬಸಪ್ಪ ಗ್ರಾಮಸ್ಥರ ಮೇಲೆ ಬೆದರಿಕೆ ಹಾಕುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಶಾಲೆಗೆ ಬಿಡುಗಡೆ ಆದ ಅನುದಾನದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.  ಹಳೆ ಶೌಚಾಲಯಕ್ಕೆ ಬಣ್ಣ ಬಳಿದು ಹಣ ದೋಚಿದ್ದಾರೆ. ಎರಡು ವರ್ಷಗಳಲ್ಲಿ ಒಂದು ದಿನವಾದರೂ ಎಸ್‌ಡಿಎಂಸಿ ಸಭೆ ಕರೆದಿಲ್ಲ. ಖರ್ಚು ಮಾಡಿದ ಹಣದ ಲೆಕ್ಕ ಇಟ್ಟಿಲ್ಲ. ಮನಸೋ ಇಚ್ಛೆ ಹಣ ಬಳಸಿಕೊಂಡಿದ್ದಾರೆ. ಆದ್ದರಿಂದ ಈ ಕೂಡಲೇ ಮುಖ್ಯಶಿಕ್ಷಕ ಹಾಗೂ ಇಬ್ಬರು ಸಹಶಿಕ್ಷಕರು ನಮ್ಮ ಊರಿನ ಶಾಲೆಗೆ ಬೇಡ ಎಂದು ಪಟ್ಟು ಹಿಡಿದರು.ಮುಂದಿನ ವಾರದ ಒಳಗಾಗಿ ತಪ್ಪಿಸ್ಥ ಶಿಕ್ಷಕರನ್ನು ಬೇರೆಡೆಗೆ ತಾತ್ಕಾಲಿಕ ನಿಯೋಜನೆ ಮಾಡಿ, ಶಿಸ್ತು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಮಧ್ಯಾಹ್ನ 2.30ರ ವೇಳೆಗೆ ಶಾಲೆಯ ಬೀಗ ತೆಗೆದರು. ಬಿಆರ್‌ಸಿ ವೆಂಕಟೇಶ್, ಶಿಕ್ಷಣ ಸಂಯೋಜಕ ಕೆ.ಎ. ಮೂರ್ತಪ್ಪ, ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಸಿಆರ್‌ಪಿ ವೀರಣ್ಣ ಸ್ಥಳಕ್ಕೆ ಭೇಟಿ ನೀಡಿದ್ದರು.  

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.