ಶಾಲೆಗೆ ಮರಳಿದ ವಿದ್ಯಾರ್ಥಿಗಳು

7
ರಾಗಿಮರೂರು ಜೀತ ಘಟನೆ

ಶಾಲೆಗೆ ಮರಳಿದ ವಿದ್ಯಾರ್ಥಿಗಳು

Published:
Updated:

ಹಾಸನ: ಅರಕಲಗೂಡು ತಾಲ್ಲೂಕು ರಾಗಿ ಮರೂರಿನಲ್ಲಿ ಶಾಲೆ–ಕಾಲೇಜುಗಳನ್ನು ಬಿಟ್ಟು ಕೂಲಿಗೆ ಹೋಗುತ್ತಿದ್ದ 21 ವಿದ್ಯಾರ್ಥಿಗಳನ್ನು ಪುನಾ ಕಲಿಕೆಗೆ ಸೇರಿಸಲಾಗಿದ್ದು, ಅವರಿಗೆ ಹಾಸ್ಟೆಲ್‌ ಸೇರಿದಂತೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಚ್‌.ವಿ. ನಾಗರಾಜು ಗುರುವಾರ ಈ ಮಾಹಿತಿ ನೀಡಿದರು.ಜೀತ ವಿಚಾರದಿಂದ ಈಚೆಗೆ ರಾಗಿ ಮರೂರು ಸುದ್ದಿ ಮಾಡಿತ್ತು. ಇದಾದ ಬಳಿಕ ಸಕಲೇಶಪುರ ಉಪವಿಭಾಗಾಧಿಕಾರಿ ನೇತೃತ್ವದ ಸಮಿತಿ ರಚಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು.‘ರಾಗಿ ಮರೂರಿನ ಎಲ್ಲ 73 ದಲಿತ ಮನೆಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದೇವೆ. ಅವರಲ್ಲಿ 28 ಮಂದಿ ಮಾತ್ರ ತಾವು ಜೀತ ಮಾಡುತ್ತಿರುವುದಾಗಿ ಹೇಳಿದ್ದಾರೆ. ಅಲ್ಲಿನ ಇತರ ವಗರ್ದವರ ಜತೆಗೂ ನಾವು ಮಾತುಕತೆ ನಡೆಸಿದ್ದು, ‘ನಾವು ಜೀತ ಮಾಡಿಸುತ್ತಿಲ್ಲ. ಅವರು ನಮ್ಮಲ್ಲಿ ಕೆಲಸ ಮಾಡುತ್ತಾರೆ, ನಾವೂ ಅವರಿಗೆ ಅನೇಕ ರೀತಿಯಲ್ಲಿ ನೆರವಾಗುತ್ತಿದ್ದೇವೆ’ ಎಂದಿದ್ದಾರೆ.ಇಲ್ಲಿನ ಕೆಲವು ದಲಿತ ಕುಟುಂಬದವರು ಮೂರು – ನಾಲ್ಕು ಗುಂಟೆ ಜಮೀನು ಹೊಂದಿದ್ದಾರೆ. ಕೆಲವರು ಅಲ್ಲಿ ಹೊಗೆಸೊಪ್ಪು ಬೆಳೆಯುತ್ತಾರೆ. ಅಂಥವರಿಗೆ ಕೃಷಿಗೆ ಬೇಕಾದ ಟ್ರ್ಯಾಕ್ಟರ್‌, ಬೆಳೆದ ಸೊಪ್ಪನ್ನು ಬೇಯಿಸಲು ವ್ಯವಸ್ಥೆಗಳನ್ನು ನಾವೇ ಕಲ್ಪಿಸುತ್ತೇವೆ’ ಎಂದು ಇತರ ವಗರ್ದವರು ನುಡಿದಿದ್ದಾರೆ ಎಂದರು.ಮನೆಮನೆಗೆ ಭೇಟಿ ನೀಡಿದಾಗ ಅನೇಕ ವಿದ್ಯಾರ್ಥಿಗಳು ಬೇರೆ ಬೇರೆ ಕಾರಣದಿಂದ ಶಾಲೆ ಬಿಟ್ಟಿರುವುದು ಗಮನಕ್ಕೆ ಬಂದಿದೆ. ಅಂಥವರಲ್ಲಿ 8 ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳು, 11 ವಿದ್ಯಾಥಿರ್ಗಳು ಪಿಯುಸಿ ಮಟ್ಟದಲ್ಲಿ ಹಾಗೂ ಒಬ್ಬ ಐಟಿಐಯನ್ನು ಅರ್ಧಕ್ಕೆ ಬಿಟ್ಟಿದ್ದರು. ಅಂಥವರಿಗೆ ಅರಕಲಗೂಡಿನ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿ ಉಚಿತ ಊಟ, ವಸತಿ, ಸಮವಸ್ತ್ರಗಳ ಜತೆಗೆ ಅವರ ಶುಲ್ಕವನ್ನೂ ಇಲಾಖೆ ಭರಿಸಲಿದೆ. ಒಬ್ಬ ವಿದ್ಯಾಥಿರ್ಗೆ ಹಾಸನದಲ್ಲಿ ಹಾಸ್ಟೆಲ್‌ ನೀಡಿ ಇಲ್ಲಿಯೇ ಶಿಕ್ಷಣ ಮುಂದುವರಿಸಲು ಸಹಕಾರ ಕಲ್ಪಿಸಲಾಗಿದೆ ಎಂದರು.ದಲಿತ ಕೇರಿಯಲ್ಲಿ ಸೌಲಭ್ಯಗಳ ಕೊರತೆ ಇದೆ. ಆ ಇದ್ದೇಶದಿಂದ ಅಲ್ಲಿ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. ಮೊದಲು ಇಲ್ಲಿ ರಸ್ತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದ್ದು, ಅದಕ್ಕಾಗಿ ಈಗಾಗಲೇ 16 ಲಕ್ಷ ರೂಪಾಯಿಯ ಯೋಜನೆ ಸಿದ್ಧಪಡಿಸಲಾಗಿದೆ. ಅನುಮೋದನೆ ಲಭಿಸಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು.ಇದಲ್ಲದೆ ಮನೆ ಇಲ್ಲದ 31 ಮಂದಿಗೆ ಮನೆ ನಿರ್ಮಿಸಿ ಕೊಡುವುದು, 51 ಮನೆಗಳಿಗೆ ಶೌಚಾಲಯ ನಿರ್ಮಾಣ, 6 ಮಂದಿಗೆ ಕಂಪ್ಯೂಟರ್‌ ಶಿಕ್ಷಣ ಹಾಗೂ 8 ಜನರಿಗೆ ಹೊಲಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈ ಕೇರಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 48 ಲಕ್ಷ ರೂಪಾಯಿಯ ಕಾಮಗಾರಿ ನಡೆಸುವ ಬಗ್ಗೆಯೂ ಜಿಲ್ಲಾ ಪಂಚಾಯಿತಿ ಯೋಜನೆ ರೂಪಿಸುತ್ತಿದೆ ಎಂದು ನಾಗರಾಜು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry