ಶುಕ್ರವಾರ, ಮೇ 14, 2021
21 °C

ಶಾಲೆಯಲ್ಲಿ ಅಸ್ಪೃಶ್ಯತೆ: ಬಿಸಿಯೂಟಕ್ಕೆ ಬಹಿಷ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಲೆಯಲ್ಲಿ ಅಸ್ಪೃಶ್ಯತೆ: ಬಿಸಿಯೂಟಕ್ಕೆ ಬಹಿಷ್ಕಾರ

ತಿಪಟೂರು: ಮಧ್ಯಾಹ್ನದ ಬಿಸಿಯೂಟವನ್ನು ಪರಿಶಿಷ್ಟ ಜಾತಿ ಮಹಿಳೆ ತಯಾರಿಸುತ್ತಾರೆಂಬ ಕಾರಣಕ್ಕೆ ತಾಲ್ಲೂಕಿನ ಬುರುಡೇಘಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಕ್ಕಾಲು ಮಕ್ಕಳು ಅದನ್ನು ತಿರಸ್ಕರಿಸುವಂತೆ ಮಾಡಿರುವ ಅಸ್ಪಶ್ಯತೆ ಆಚರಣೆ ಬೆಳಕಿಗೆ ಬಂದಿದೆ.ರಾಜ್ಯ ರಾಜಕಾರಣದಲ್ಲಿ ಜ್ಯೋತಿಷ್ಯದ ಜೊತೆ ಬೆಸೆದುಕೊಂಡಿರುವ ತಾಲ್ಲೂಕಿನ ಬುರುಡೇಘಟ್ಟ ಗ್ರಾಮ ಇಂಥದ್ದೊಂದು ಅಸಮಾನತೆ ಆಚರಣೆಗೆ ಸಾಕ್ಷಿಯಾಗಿದೆ.ವಿಶಾಲ ಮೈದಾನವುಳ್ಳ ಈ ಶಾಲೆಗೆ ಯಾವುದೇ ಸೌಲಭ್ಯ ಕೊರತೆಗಳಿಲ್ಲ. ನಾಲ್ಕಾರು ಜಾತಿಗಳ ಜನರಿರುವ ಈ ಗ್ರಾಮದಲ್ಲಿ ಜನಾಂಗೀಯ ದ್ವೇಷವೂ ಈ ಹಿಂದೆ ಅಷ್ಟಾಗಿ ಕೇಳಿಬಂದಿಲ್ಲ. ಆದರೆ ಕಳೆದ ಆಗಸ್ಟ್ ತಿಂಗಳಿಂದ ಕಳಂಕವೊಂದು ತಗುಲಿದೆ.ಶಾಲೆಯಲ್ಲಿ ಸಾಮಾನ್ಯ ಜಾತಿಯ ಶಿವಗಂಗಮ್ಮ ಎಂಬ ಮುಖ್ಯ ಅಡುಗೆಯವರೊಂದಿಗೆ ಹಿಂದುಳಿದ ವರ್ಗದ ಸುನಂದಮ್ಮ ಮತ್ತು ಪರಿಶಿಷ್ಟ ಜಾತಿಯ ಲಕ್ಷ್ಮೀದೇವಮ್ಮ ಎಂಬ ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದರು.ಲಕ್ಷ್ಮೀದೇವಮ್ಮ ಅವರನ್ನು ಅಡುಗೆಗೆ ಅಷ್ಟಾಗಿ ಬಳಸದ್ದರಿಂದ ಸಹಾಯಕ್ಕೆ ಮಾತ್ರ ಕೈ ಜೋಡಿಸುತ್ತಿದ್ದರು. ಅಲ್ಲಿವರೆಗೆ ಮಕ್ಕಳು ಬಿಸಿಯೂಟ ಸೇವಿಸುವುದು ಸಾಂಗವಾಗಿ ನಡೆದಿತ್ತು. ಆದರೆ ಶಾಲೆಯ ಮಕ್ಕಳ ಸಂಖ್ಯೆ 66ಕ್ಕೆ ಇಳಿದಿದ್ದರಿಂದ ಮೇಲಿನ ಆದೇಶದಂತೆ ಒಬ್ಬ ಸಹಾಯಕಿಯನ್ನು ಕೈಬಿಟ್ಟು ನಿಯಮದಂತೆ ಲಕ್ಷ್ಮೀದೇವಮ್ಮನನ್ನು ಉಳಿಸಿಕೊಳ್ಳಲಾಯಿತು. ಆ ಆದೇಶ ಬಂದ ಆಗಸ್ಟ್‌ನಿಂದ ಅಡುಗೆ ಕೆಲಸದಲ್ಲಿ ಲಕ್ಷ್ಮೀದೇವಮ್ಮ ಸಕ್ರಿಯವಾಗಿ ತೊಡಗಿಸಿಕೊಂಡರು. ಅಲ್ಲಿಂದಲೇ ಸಮಸ್ಯೆಯೂ ಶುರುವಾಯಿತು.ಲಕ್ಷ್ಮೀದೇವಮ್ಮ ಅಡುಗೆ ಮಾಡುತ್ತಾರೆಂಬ ಕಾರಣಕ್ಕೋ ಅಥವಾ ಮತ್ಯಾವ ಒಳ ಮರ್ಮಕ್ಕೋ ಸುಮಾರು 40 ಮಕ್ಕಳು ಶಾಲೆಯಲ್ಲಿ ಬಿಸಿಯೂಟ ಸೇವಿಸುವುದನ್ನು ನಿಲ್ಲಿಸಿದರು. ಮಧ್ಯಾಹ್ನ ಊಟಕ್ಕೆ ಬೆಲ್ ಒಡೆದರೆ ಆ ಮಕ್ಕಳು ತಾವು ಬಾಕ್ಸ್‌ನಲ್ಲಿ ತಂದ ತಿಂಡಿ ತಿನ್ನತೊಡಗಿದರು.ಶಿಕ್ಷಕರು ಮನವೊಲಿಸಿದರೂ ಕೇಳದ ಮಕ್ಕಳು, ತಮ್ಮ ಪೋಷಕರು ಶಾಲೆಯಲ್ಲಿ ಊಟ ಮಾಡದಂತೆ ಹೇಳಿದ್ದಾರೆ. ಮನೆಯಿಂದಲೇ ತಿಂಡಿ ಕಟ್ಟಿ ಕಳುಹಿಸುತ್ತಾರೆ ಎಂದು ತಿಳಿಸಿ ಬಾಕ್ಸ್ ತರುವುದನ್ನು ಮುಂದುವರಿಸಿದರು.ಶಾಲೆಯಲ್ಲೆಗ ದಲಿತ ಮಕ್ಕಳೊಂದಿಗೆ ಸಾಮಾನ್ಯ ಜಾತಿಯ ಐದಾರು ಮಕ್ಕಳಷ್ಟೇ ಬಿಸಿಯೂಟ ಸೇವಿಸುತ್ತಾರೆ. ವ್ಯರ್ಥವಾಗಬಾರದೆಂಬ ಕಾರಣಕ್ಕೆ ಊಟ ಮಾಡುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಬಿಸಿಯೂಟ ತಯಾರಿಸಲಾಗುತ್ತಿದೆ. ಈ ಬಗ್ಗೆ ಶಾಲೆ ಮುಖ್ಯಶಿಕ್ಷಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ.ಒಂದು ಸಮಾಧಾನದ ಸಂಗತಿ ಎಂದರೆ, ಮನೆಯಿಂದ ಬಾಕ್ಸ್‌ನಲ್ಲಿ ತಿಂಡಿ ತರುವ ಮಕ್ಕಳು ಬಿಸಿಯೂಟ ಉಣ್ಣುವ ತಮ್ಮ ಗೆಳತಿ, ಗೆಳತಿಯರೊಂದಿಗೆ ಕುಳಿತೆ ಸೇವಿಸುತ್ತಾರೆ. ಮಕ್ಕಳ ಮನಸ್ಸು ನಿಶ್ಕಲ್ಮಷ ಎಂಬುದಕ್ಕೆ ಸಾಕ್ಷಿಯೆಂಬಂತೆ ಕೂಡಿ ಉಣ್ಣುತ್ತಾರೆ, ಬೆರೆತು ಆಡುತ್ತಾರೆ.ಆಶ್ಚರ್ಯ ಎಂಬಂತೆ ತಿಂಡಿ ತರುವ ಬಹಳಷ್ಟು ಮಕ್ಕಳನ್ನು ವಿಚಾರಿಸಲಾಗಿ, ತಮಗೆ ಎಲ್ಲರೊಂದಿಗೆ ಕುಳಿತು ಶಾಲೆ ಬಿಸಿಯೂಟ ಉಣ್ಣುವುದೇ ಇಷ್ಟ. ಆದರೆ ಮನೆಯಲ್ಲಿ ಬಾಕ್ಸ್‌ಗೆ ತಿಂಡಿ ಹಾಕಿ ಕಳುಹಿಸುವುದರಿಂದ, ಬಿಸಿಯೂಟ ಸೇವಿಸದಂತೆ ಹೇಳುವುದರಿಂದ ಅದನ್ನು ಪಾಲಿಸುತ್ತಿದ್ದೇವೆ ಎಂದು ಶುಭ್ರ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ. ಒಬ್ಬ ಸವರ್ಣೀಯ ಹುಡುಗಿಯಂತೂ ತನ್ನ ದಲಿತ ಗೆಳತಿಯ ಕೈಹಿಡಿದು ಅಯಾಚಿತವಾಗಿ ಜೀಕುತ್ತಾ ಆ ಮಾತು ಹೇಳಿದ್ದು ಅವರ ಮನಸ್ಥಿತಿ ತಿಳಿಸುತ್ತಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.