ಸೋಮವಾರ, ಮೇ 10, 2021
25 °C

ಶಾಲೆಯಲ್ಲಿ ಕಲಾಸಂಗಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದೆಡೆ ಜನಪದ ತಂಡದ ಡೋಲು ಕುಣಿತ, ಇನ್ನೊಂದೆಡೆ ಚಿತ್ರಕಲೆಗಳ ಸಂತೆ, ಮತ್ತೊಂದೆಡೆ ಮಡಿಕೆ ಮಾಡಲು ಕಲಿಯುತ್ತಿದ್ದ ಹುಡುಗಿ...ಇದನ್ನೆಲ್ಲಾ ನೋಡಿದರೆ ಹಳ್ಳಿಯ ವಾತಾವರಣ ಕಂಡಂತಹ ಅನುಭವ. ಅಂದು ಆಧುನಿಕ ಮತ್ತು ಪ್ರಾಚೀನ ಕಲಾಪ್ರಕಾರಗಳೆರಡೂ ತಳುಕು ಹಾಕಿಕೊಂಡು ಕಲಾಕುಠೀರವಾದಂತಿತ್ತು ಕೆನೆಡಿಯನ್ ಇಂಟರ್‌ನ್ಯಾಷನಲ್ ಶಾಲೆ.

ಕಲೆಯಲ್ಲೇ ಸಿಂಗರಿಸಿಕೊಂಡಿದ್ದ ಕೆನೆಡಿಯನ್ ಶಾಲೆಯಲ್ಲಿ ಅಂದು ವಾರ್ಷಿಕ ಕಲಾ ಉತ್ಸವದ ಸಂಭ್ರಮ. ಇದಕ್ಕೆಂದು ಶಾಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲವೂ ಇಲ್ಲಿ ಕಲಾಮಯವಾಗಿದ್ದು ವಿಶೇಷ.

ಮೊದಲಿಂದಲೂ ಕಲೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾ ಬಂದಿರುವ ಕೆನೆಡಿಯನ್ ಶಾಲೆ ವಿದ್ಯಾರ್ಥಿಗಳಲ್ಲಿರುವ ಕಲೆಗೆ ಪ್ರೋತ್ಸಾಹ ನೀಡಲು ಮತ್ತು ವಿಭಿನ್ನ ಕಲೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಹಲವು ಕಾರ್ಯಕ್ರಮವನ್ನು ಆಯೋಜಿಸಿತ್ತು.

ಹಬ್ಬದ ವಾತಾವರಣವನ್ನು ಉಂಟುಮಾಡಿದ್ದ ಈ ಕಾರ್ಯಕ್ರಮದಲ್ಲಿ  ಕಲಾಕೃತಿಗಳು, ಮಣ್ಣಿನ ಕಲಾಕೃತಿಗಳು, ಚಿತ್ರಕಲೆ, ಸೆರಾಮಿಕ್ ಮತ್ತು ಗ್ಲಾಸ್ ಫೋಟೊಗ್ರಫಿ, ಪೇಪರ್ ಗೊಂಬೆಗಳು, ಛಾಯಾಚಿತ್ರಗಳು, ಪ್ರತಿಮೆಗಳು, ಆಭರಣಗಳು, ಕರಕುಶಲ ವಸ್ತುಗಳು ಇವೆಲ್ಲವನ್ನೂ ಪ್ರದರ್ಶನಕ್ಕಿಡಲಾಗಿತ್ತು.

ಇವೆಲ್ಲದರ ಜೊತೆಗೆ ಅಲ್ಲಿ ಲಘು ಸಂಗೀತದ ಘಮಲೂ ತುಂಬಿತ್ತು. ಎಲ್ಲಕ್ಕಿಂತ ವಿಶೇಷವಾಗಿ ರಾಮನಗರ ತಾಲ್ಲೂಕಿನ ಜನಪದ ತಂಡದ ಡೋಲು ಕುಣಿತ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿಸಿತ್ತು. ವಿದ್ಯಾರ್ಥಿಗಳೂ ಡೋಲು ಕುಣಿತದೊಂದಿಗೆ ಹೆಜ್ಜೆ ಹಾಕಿದ್ದು ಗ್ರಾಮೀಣ ಸೊಗಡು ಶಾಲೆಗೂ ಆವರಿಸುವಂತೆ ಮಾಡಿತ್ತು.

ಕಾರ್ಯಕ್ರಮದಲ್ಲಿ ಕೇವಲ ಪ್ರದರ್ಶನವಷ್ಟೇ ಅಲ್ಲ, ಮಾರಾಟಕ್ಕೂ ಅವಕಾಶವಿತ್ತು.  ಹಲವು ಸ್ವಯಂ ಸೇವಾ ಸಂಸ್ಥೆಗಳು ತಾವು ತಯಾರಿಸಿದ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕಿಟ್ಟು ಅವುಗಳ ಮಹತ್ವದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.

ಕಿಂಡರ್‌ಗಾರ್ಟನ್ ಮತ್ತು ಪ್ರಾಥಮಿಕ ವಿದ್ಯಾರ್ಥಿಗಳಿಗೆಂದು ಇಲ್ಲಿ ಎಗ್ ಪೇಂಟಿಂಗ್, ಬನ್ನಿ ಅಂಡ್ ಬಾಸ್ಕೆಟ್ ಮೇಕಿಂಗ್ ಹಲವು ಸ್ಪರ್ಧೆಗಳನ್ನೂ ಹಮ್ಮಿಕೊಳ್ಳಲಾಗಿತ್ತು.

ನಮ್ಮ ಶಾಲೆಯಲ್ಲಿ ಕಲೆಗೆ ವಿಶೇಷ ಸ್ಥಾನವಿದೆ. ವಿದ್ಯಾರ್ಥಿಗಳಲ್ಲಿನ ಕಲೆಗೆ ಪ್ರೋತ್ಸಾಹ ನೀಡಲು, ಅವರ ಕಲಾಭಿವ್ಯಕ್ತಿಗೆ, ಕಲಾಭಿರುಚಿಗೆ ಇಲ್ಲಿ ಉತ್ತಮ ಅವಕಾಶವಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಹಮ್ಮಿಕೊಳ್ಳಲಾಗಿದ್ದ ಕಲೋತ್ಸವದಲ್ಲಿ ನಮ್ಮ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದ್ದು ಸಂತಸ ತಂದಿದೆ ಎಂದರು ಶಾಲೆಯ ಮುಖ್ಯ ನಿರ್ದೇಶಕಿ ಶ್ವೇತಾ ಶಾಸ್ತ್ರಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.