ಬುಧವಾರ, ಮಾರ್ಚ್ 3, 2021
23 °C

ಶಾಲೆಯಲ್ಲಿ ಜಲಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಲೆಯಲ್ಲಿ ಜಲಪಾಠ

ಇಲ್ಲಿ ಜಲವೂ ಪಾಠವಾಗುತ್ತದೆ. ಕಟ್ಟಡದಿಂದ ಹರಿದು ಬರುವ ಹನಿ ಹನಿ ನೀರಿಗೂ ಇಲ್ಲಿ ಮಹತ್ವ. ಇಂಗುಗುಂಡಿಗಳ ಮುಂದೆ ಮಕ್ಕಳನ್ನು ಕರೆದೊಯ್ದು ನೀರಿನ ಕಥೆ ಹೇಳುತ್ತಾರೆ.

ಆಟದ ಮೈದಾನಗಳೂ ಇರದ ಶಾಲೆಗಳ ನಡುವೆ ಭಿನ್ನವಾಗಿ ನಿಲ್ಲುವ ಬೆಂಗಳೂರಿನ ಮನ್ನೇಕೊಳಾಲು ಬಳಿಯ ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳು ಜಲಪಾಠ ಕಲಿಯುವುದು ಕಡ್ಡಾಯ.

 

ಹಾಗಂತ ಇದು ಪುಸ್ತಕದ ಓದಿಗಷ್ಟೇ ಸೀಮಿತವಲ್ಲ; ಕಳೆದ 6 ವರ್ಷದಿಂದ ಪ್ರಾತ್ಯಕ್ಷಿಕೆಗಳ ಮೂಲಕ ಕಲಿಸಲಾಗುತ್ತದೆ. ನೀರು ನೆಲದಲ್ಲಿ ಇಂಗುವ ಪರಿ, ಅದು ಅಂತರ್ಜಲದಲ್ಲಿ ಶೇಖರಗೊಳ್ಳುವ ಬಗೆ ಹಾಗೂ ಅಂತರ್ಜಲ ಮಟ್ಟ ರಕ್ಷಣೆ ಇತ್ಯಾದಿಗಳ ಬಗ್ಗೆ ಪ್ರಾಯೋಗಿಕವಾಗಿ ಹೇಳಿಕೊಡುತ್ತಾರೆ. ಜತೆಗೆ ನೀರಿನ ಮಿತಬಳಕೆಯನ್ನೂ ಕಲಿಸಿಕೊಡುತ್ತಾರೆ.ಹೌದು! ಅಂತರ್ಜಲವೆಂಬ ಒಡಲನ್ನು ತುಂಬುವ ಮತ್ತು ಭವಿಷ್ಯದ ಹಸಿರಿಗೆ, ಸೊಗಸಾದ ಪರಿಸರಕ್ಕೆ ಕಾರಣವಾಗುವ ನೀರಿನ ಕಥನವನ್ನು ಈ ಶಾಲೆಯ ಮಕ್ಕಳಿಗೆ ಹೇಳಲಾಗುತ್ತದೆ.  ಪೋಷಕರು, ಸಾರ್ವಜನಿಕರೂ ಬಂದು ಮಳೆ ನೀರು ಸಂಗ್ರಹ ವಿಧಾನ, ಇಂಗು ಗುಂಡಿಗಳನ್ನು ಇಲ್ಲಿ ನೋಡಬಹುದು.ಶಾಲೆ ಆವರಣದಲ್ಲಿ ಸುತ್ತಾಡಿದರೆ ಗಮನ ಸೆಳೆಯುವುದು ಮಳೆ ನೀರು ಸಂಗ್ರಹಿಸಲು ಮಾಡಿದ ಇಂಗು ಗುಂಡಿಗಳು ಮತ್ತು ಇಂಗು ಬಾವಿಗಳು. ಮಾರತಹಳ್ಳಿ ಮತ್ತು ವರ್ತೂರಿನಲ್ಲಿ ಇರುವ ವಾಗ್ದೇವಿ ಶಾಲೆಗಳಲ್ಲಿ 8 ಇಂಗುಗುಂಡಿಗಳು ಮತ್ತು 10 ಇಂಗುಬಾವಿಗಳನ್ನು ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ.

 

ಪ್ರತಿಯೊಂದು ಇಂಗು ಗುಂಡಿ ಸಾಮರ್ಥ್ಯ 600 ಘನ ಅಡಿ ಮತ್ತು ಇಂಗು ಬಾವಿಯದು 300 ಘನ ಅಡಿ. ಇವುಗಳ ಮೂಲಕ ವರ್ಷಕ್ಕೆ ಸುಮಾರು 50 ಸಾವಿರ ಘನ ಅಡಿಗಳಷ್ಟು (ಸುಮಾರು 14.15 ಲಕ್ಷ ಲೀಟರ್) ಮಳೆ ನೀರನ್ನು ಇಂಗಿಸಲಾಗುತ್ತಿದೆ ಮತ್ತು 20 ಸಾವಿರ ಘನ ಅಡಿ (5.66 ಲಕ್ಷ ಲೀಟರ್) ನೀರನ್ನು ಬಳಸಲಾಗುತ್ತಿದೆ.`ಮಳೆ ನೀರನ್ನು ಸಂಗ್ರಹಿಸುವುದು ಅನಿವಾರ್ಯ. ನಗರದಲ್ಲಂತೂ ಹನಿ ನೀರಿಗೂ ಬೇಸಿಗೆಯಲ್ಲಿ ಪರದಾಡುವ ಪರಿಸ್ಥಿತಿ ಇದೆ. ಆದರೆ ನಮ್ಮ ಶಾಲೆಯಲ್ಲಿ ನೀರಿನ ಸಂಗ್ರಹಣೆ, ಮಳೆ ನೀರಿನ ಲಾಭದ ಬಗ್ಗೆ ಅರಿತಿದ್ದೇವೆ. ಇಲ್ಲಿ ಕಲಿತಿದ್ದನ್ನು ಮನೆಯಲ್ಲೂ ಪಾಲಿಸುತ್ತಿದ್ದೇವೆ. ಕೈತೊಳೆಯಲು, ಇತರೆ ಬಳಕೆಗೆ ನೀರನ್ನು ಹಿತಮಿತವಾಗಿ ಬಳಸುವ ಬಗೆಯನ್ನು ಜಲಪಾಠ  ಕಲಿಸಿಕೊಟ್ಟಿದೆ~ ಎಂದು ಹೇಳುವಾಗ ಮಕ್ಕಳಿಗೂ ಹೆಮ್ಮೆ. ಮಳೆ ನೀರು ಸಂಗ್ರಹ, ಪರಿಸರ ಕಾಳಜಿ ಬಗ್ಗೆ ತಿಳಿವಳಿಕೆ ನೀಡಲು ಆಯಾ ಕ್ಷೇತ್ರದ ತಜ್ಞರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ.ಇಲ್ಲಿನ ಎಲ್ಲ ಕಟ್ಟಡಗಳಲ್ಲೂ ಮಳೆ ನೀರು ಸಂಗ್ರಹಿಸಿ ಭೂಮಿಗೆ ಸೇರಿಸಲಾಗುತ್ತಿದೆ. ಇದರಿಂದ ಸುತ್ತಮುತ್ತ ಅಂತರ್ಜಲ ವೃದ್ಧಿಸಿದೆ. ನೀರು ಪೋಲಾಗುವುದಿಲ್ಲ. ಮನೆಯ ನೀರನ್ನು ಸಂಗ್ರಹಿಸುವ ಬಗೆಯೂ ಮಕ್ಕಳಿಗೆ ಪಾಠ ಹೇಳಲಾಗುತ್ತದೆ.

 

ಇದರಿಂದ ನೀರು, ಅಂತರ್ಜಲ, ಹಸಿರು, ಗಿಡಮರ, ಪರಿಸರದ ಬಗ್ಗೆ ಅವರ ಜ್ಞಾನ ಹೆಚ್ಚಲು ಕಾರಣವಾಗಿದೆ. ಅಲ್ಲದೇ ಶಾಲೆಯ ಆವರಣದಲ್ಲಿ 300 ಕ್ಕೂ ಹೆಚ್ಚು ವೈವಿಧ್ಯಮಯ ಗಿಡಮರಗಳು, ಔಷಧಿ ಸಸ್ಯಗಳಿವೆ~ ಎಂದು ಸಂಸ್ಥೆಯ ಅಧ್ಯಕ್ಷ ಕೆ. ಹರೀಶ್ ಹೇಳುತ್ತಾರೆ.ಜಲ ವಿಷಯದ ಮೇಲೆ ಮಕ್ಕಳಿಂದ ಕವನ ರಚನೆ, ಚಿತ್ರ ಬಿಡಿಸುವುದು, ನಾಟಕ ಪ್ರದರ್ಶನ ನಡೆಯುತ್ತದೆ. ಶಾಲೆಯ ಎಲ್ಲಾ ಮುದ್ರಿತ ನಿಯತಕಾಲಿಕ ಮತ್ತು ಕೈಪಿಡಿಯ್ಲ್ಲಲಿ ಜಲಕ್ಕೆ ಮೊದಲ ಆದ್ಯತೆ. ನಿಮಗೂ ಮಳೆ ನೀರು ಸಂರಕ್ಷಣೆ ಪಾಠದ ಬಗ್ಗೆ ತಿಳಿಯುವ ಆಸಕ್ತಿ ಇದ್ದರೆ ಮಾಹಿತಿಗೆ 96865 77171 ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.