ಶನಿವಾರ, ಮೇ 21, 2022
23 °C

ಶಾಲೆಯಲ್ಲಿ ನ್ಯಾಪ್‌ಕಿನ್ಸ್ ವಿತರಣೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಪ್ರೌಢಶಾಲೆಯಲ್ಲಿ ಹೆಣ್ಣು ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಹಾಗೂ ಋತುಸ್ರಾವ್ಯ ದಿನಗಳಲ್ಲಿ ಶಾಲೆಗೆ ಹೆಣ್ಣುಮಕ್ಕಳ ಗೈರು ಹಾಜರಿಯನ್ನು ತಡೆಗಟ್ಟುವ ಉದ್ದೆೀಶದಿಂದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (ಎನ್.ಆರ್.ಎಚ್.ಎಂ) ಯೋಜನೆಯಡಿಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ಸ್ ವಿತರಿಸುವ ಯೋಜನೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಲ್ಲವಿ ಆಕುರಾತಿ ಅವರು ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಮಾಡಬೂಳ ಪ್ರೌಢಶಾಲೆಯಲ್ಲಿ ಶುಕ್ರವಾರ ಚಾಲನೆ ನೀಡಿದರು.ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ಸ್‌ಗಳನ್ನು ಇಡಲಾಗಿದೆ ಎಂದು ವಿವರಿಸಿದರು.

ಎನ್.ಆರ್.ಎಚ್.ಎಂ. ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಸರಬರಾಜು ಮಾಡುವ ಸ್ಯಾನಿಟರಿ ನ್ಯಾಪ್‌ಕಿನ್ಸ್‌ಗಳನ್ನು ವಿದ್ಯಾರ್ಥಿನಿಯರು ದಾಖಲಾಗುವ ಎಲ್ಲಾ ಪ್ರೌಢಶಾಲೆಗಳಲ್ಲಿಯೂ ಲಭ್ಯವಾಗುವಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.ಋತುಸ್ರಾವ್ಯ ಸಮಯದಲ್ಲಿ ಶಾಲೆಯಲ್ಲಿ ಸರಿಯಾದ ಸೌಲಭ್ಯ ದೊರೆಯದೆ ಇರುವುದು ಹಾಗೂ  ಹೆಣ್ಣು ಮಕ್ಕಳಲ್ಲಿ ಆತ್ಮ ವಿಶ್ವಾಸದ ಕೊರತೆಯಿಂದಾಗಿ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ದಾಖಲಾಗುವ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ಕಡಿಮೆ ಆಗುತ್ತಿದೆ, ಕಿಶೋರಿ ಬಾಲಕಿಯರು ಋತುಸ್ರಾವ್ಯ ದಿನಗಳಲ್ಲಿ ಶಾಲಾ ತರಗತಿಗಳಿಗೆ ಗೈರು ಹಾಜರಾಗುತ್ತಿದ್ದಾರೆ. ಇದರಿಂದಾಗಿ ಅವರ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ ಈ ಪರಿಸ್ಥಿತಿಯನ್ನು ತಡೆಗಟ್ಟಲು ನ್ಯಾಪ್‌ಕಿನ್‌ಗಳನ್ನು ಶಾಲೆಗಳಲ್ಲಿ ದಾಸ್ತಾನಿಕರಿಸಲಾಗಿದೆ ಎಂದು ಹೇಳಿದರು.ಹೆಣ್ಣು ಮಕ್ಕಳಿಗೆ ಉತ್ತಮ ಆರೋಗ್ಯ ಒದಗಿಸಲು ಮತ್ತು ಸರ್ವಿಕಲ್ ಕ್ಯಾನ್ಸರ್ ನಂತಹ ಖಾಯಿಲೆಗಳಿಂದ ಅವರನ್ನು ರಕ್ಷಿಸಲು ಇದು ಒಂದು ಪ್ರಾಥಮಿಕ ಹೆಜ್ಜೆಯಾಗಿದೆ. ಸ್ಯಾನಿಟರಿ ನ್ಯಾಪ್‌ಕಿನ್ಸ್‌ಗಳ ಬಳಕೆಯಿಂದ ಹೆಣ್ಣು ಮಕ್ಕಳಿಗೆ ವೈಯಕ್ತಿಕ ಆರೋಗ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದರು.ಕೇಂದ್ರ ಸರ್ಕಾರ ಸರಬರಾಜು ಮಾಡುತ್ತಿರುವ ಅತೀ ಕಡಿಮೆ ದರದ ಅಂದರೆ ಆರು ರೂಪಾಯಿಗಳಿಗೆ 6 ಸ್ಯಾನಿಟರಿ ನ್ಯಾಪ್‌ಕಿನ್ಸ್ ಒಂದು ಪ್ಯಾಕೇಟ್‌ನಲ್ಲಿ ಶಾಲೆಗಳಲ್ಲಿ ಲಭ್ಯವಾಗುವಂತೆ ದಾಸ್ತಾನಿರಿಸಲಾಗಿದೆ. ಇದು ಪ್ರತಿಯೊಂದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಲಭ್ಯವಿದೆ. ಇದರ ಮಾರಾಟಕ್ಕಾಗಿ ಶಾಲೆಯಲ್ಲಿ ಒಬ್ಬ ಮಹಿಳಾ ಶಿಕ್ಷಕರನ್ನು ನೋಡಲ್ ಅಧಿಕಾರಿಯೆಂದು ನೇಮಿಸಲಾಗಿದೆ ಎಂದು ತಿಳಿಸಿದರು.ನೋಡಲ್ ಅಧಿಕಾರಿಗಳು ಎನ್.ಆರ್.ಎಚ್.ಎಂ ಸ್ಯಾನಿಟರಿ ನ್ಯಾಪ್‌ಕಿನ್ಸ್‌ಗಳನ್ನು ಪ್ಯಾಕೇಟ್‌ಗಳಲ್ಲಿ ದಾಸ್ತಾನಿರಿಸಿ ವಿದ್ಯಾರ್ಥಿನಿಯರಿಗೆ ಮಾರಾಟ ಮಾಡುತ್ತಾರೆ. ಹಾಗೂ ಮಾರಾಟದಿಂದ ಬಂದ ಹಣವನ್ನು ಆರೋಗ್ಯ ಇಲಾಖೆಗೆ ಪಾವತಿಸುವರು ಎಂದು  ಹೇಳಿದರು.ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಯರು, ಶಿಕ್ಷಕವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.