ಶುಕ್ರವಾರ, ಜೂನ್ 5, 2020
27 °C

ಶಾಲೆಯಲ್ಲೆಗ ರಜಾ-ಮಜಾದ್ದೇ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಾರಂಭವಾಗಿದ್ದು ಕಳೆದೆರಡು ದಿನಗಳಿಂದ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ದಾಖಲಾತಿ ಜೋರಾಗಿ ನಡೆಯುತ್ತಿದೆ. ದಾಖಲಾತಿಗೆಂದು ಪಾಲಕರು ಮಕ್ಕಳನ್ನು ಕರೆದುಕೊಂಡು ಶಾಲೆಯತ್ತ ಬರುತ್ತಿರುವ ದೃಶ್ಯ ಸಾಮಾನ್ಯವಾಗಿದೆ.ಶಾಲಾ ಪ್ರಾರಂಭೋತ್ಸವ ದಿನದಂದು ಶಾಲೆಗಳಿಗೆ ತಳಿರು ತೋರಣಗಳನ್ನು ಕಟ್ಟಿ ಮಕ್ಕಳನ್ನು ಸ್ವಾಗತಿಸಲಾಯಿತು. ಹೊಚ್ಚ ಹೊಸ ಬಟ್ಟೆಗಳನ್ನು ಉಟ್ಟು ಮಕ್ಕಳು ಶಾಲೆಗೆ ಬಂದು ತರಗತಿಗೆ ಹಾಜರಾದರು. ಎರಡು ತಿಂಗಳಿಂದ ಬೀಕೋ ಎನ್ನುತ್ತಿದ್ದ ಶಾಲೆಗಳಲ್ಲಿ ಈಗ  ಹಬ್ಬದ ವಾತಾವರಣ ತುಂಬಿದೆ.ದೀರ್ಘ ಬಿಡುವಿನ ನಂತರ ಮಕ್ಕಳು ಮತ್ತೆ ಶಾಲೆಗೆ ಬಂದು ರಜೆ ಕಳೆದ ದಿನಗಳನ್ನು ಮೇಲುಕು ಹಾಕಿದರು. ರಜೆ ಹೇಗೆ ಕಳೆದೇವು ಎನ್ನುವುದೇ ಶಾಲೆ ತುಂಬ ಸೋಮವಾರ ವಿದ್ಯಾರ್ಥಿಗಳ ಚರ್ಚೆಯ ವಿಷಯವಾಗಿತ್ತು.

ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ, ಪ್ರವಾಸಿ ಸ್ಥಳಗಳಿಗೆ, ಬೇಸಿಗೆ ಶಿಬಿರಕ್ಕೆ ಹೋಗಿ ಅಲ್ಲಿ ಕಲಿತ ಪಾಠ, ಅನುಭವಗಳನ್ನು ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳೊಂದಿಗೆ ಹಂಚಿಕೊಂಡರು.ತಾಲ್ಲೂಕಿನಲ್ಲಿ ಒಟ್ಟು 43 ಪ್ರೌಢ ಹಾಗೂ 182 ಪ್ರಾಥಮಿಕ ಶಾಲೆಗಳಿವೆ. ಶಾಲಾ ಪ್ರಾರಂಭೋತ್ಸವ ದಂದು ಹಬ್ಬದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಶಿಕ್ಷಕರ ಒಂದೆರಡು ದಿನ ಮುಂಚಿತವಾಗಿಯೇ ಶಾಲೆಗಳ ಬೀಗ ತೆರೆದು ಸ್ವಚ್ಛತೆಯನ್ನು ಮಾಡಿ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದರು.ಮೊದಲ ದಿನವೇ ವಿದ್ಯಾರ್ಥಿಗಳಿಗೆ ಬಿಸಿಯೂಟ ಕೊಡಬೇಕು ಎಂದು ಶಿಕ್ಷಣ ಇಲಾಖೆ ಸೂಚನೆ  ನೀಡಿದ ಹಿನ್ನೆಲೆಯಲ್ಲಿ ದಿನನಿತ್ಯದ ಊಟದ ಜೊತೆಗೆ ಸಿಹಿಯನ್ನೂ ಮಕ್ಕಳಿಗೆ ಹಂಚಲಾಯಿತು.ಶಾಲೆಗಳ ವಾರ್ಷಿಕ ಯೋಜನೆ, ಶೈಕ್ಷಣಿಕ ಯೋಜನೆ ಸಿದ್ದಪಡಿಸುವುದು, ಸೇತುಬಂಧ ಕಾರ್ಯಕ್ರಮ, ತಿಂಗಳವಾರು ಶೈಕ್ಷಣಿಕ ಚಟುವಟಿಕೆಗಳು, ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿ, ಅಕ್ಷರ ದಾಸೋಹ ಕಾರ್ಯಕ್ರಮದ ಅನುಷ್ಠಾನ, ಸಮುದಾಯದತ್ತ ಶಾಲಾ ಕಾರ್ಯಕ್ರಮ, ಶಾಲೆಯಲ್ಲಿ ನಿರ್ವಹಿಸಬೇಕಾದ ಸಂಘಗಳ ಕುರಿತು ಶಿಕ್ಷಕರಿಗೆ ಇದೇ ಸಂದರ್ಭದಲ್ಲಿ ಉಪ ನಿರ್ದೇಶಕ ಎಸ್.ಜಯಕುಮಾರ ಮಾಹಿತಿ ನೀಡಿದರು.ಪರಿಣಾಮಕಾರಿ ಬೋಧನೆ ಹಾಗೂ ಮಾರ್ಗದರ್ಶನ, ಮಕ್ಕಳ ಹಕ್ಕುಗಳ ರಕ್ಷಣೆ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸುರಕ್ಷತಾ ಕ್ರಮಗಳ ಕುರಿತ ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮ, ಗ್ರಂಥಾಲಯ ಪುಸ್ತಕಗಳ ಬಳಕೆ ಹಾಗೂ ಓದುವ ಕೌಶಲದ ಆಸಕ್ತಿ, ದೈಹಿಕ ಶಿಕ್ಷಣದ ಚಟುವಟಿಕೆಗಳು, ಕ್ರೀಡಾಸ್ಪರ್ಧೆಗಳು, ಸಾಂಸ್ಕೃತಿ ಕಾರ್ಯಕ್ರಮ, ಸ್ಪರ್ಧೆಗಳು, ಪ್ರೌಢಶಾಲೆಗಳಲ್ಲಿ ತರಗತಿ ಶಿಕ್ಷಕರ ಜವಾಬ್ದಾರಿಗಳು, ಶಿಕ್ಷಕರ ಕ್ಲಬ್ ರಚನೆ ಹಾಗೂ ನಿರ್ವಹಣೆ ಕುರಿತು ವಿವರವಾದ ಮಾರ್ಗದರ್ಶನ ಅವರು ನೀಡಿದರು.ಶಾಸಕರ ಭೇಟಿ: ನಗರದ ಶಾಲೆಗಳಲ್ಲಿ ನೂರಕ್ಕೆ ನೂರರಷ್ಟು ದಾಖಲಾತಿ ಹಾಗೂ ಹಾಜರಾತಿ ಇರುವಂತೆ ಶಿಕ್ಷಕರು ನೋಡಿಕೊಳ್ಳಬೇಕು ಎಂದು ಶಾಸಕ ಆನಂದ ಅಸ್ನೋಟಿಕರ್ ತಿಳಿಸಿದರು.ನಗರದ ಸರ್ವೋದಯ ನಗರ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಭೇಟಿ ನೀಡಿ ಪುಸ್ತಕ ವಿತರಿಸಿ ಮಾತನಾಡಿದ ಅವರು, ಹಿಂದುಳಿದ ಜನರಿರುವ ಪ್ರದೇಶದಲ್ಲಿರುವ ಶಾಲೆಯ ಶಿಕ್ಷಕರು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದರುನಗರಸಭೆ ಅಧ್ಯಕ್ಷ ಗಣಪತಿ ಉಳ್ವೇಕರ, ಸದಸ್ಯರಾದ ದೇವಿದಾಸ ನಾಯ್ಕ, ದಿವ್ಯಾ ನಾಯ್ಕ, ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ಜಿ.ಪಂ. ಸಿಇಓ ವಿಜಯಮೋಹನರಾಜ್, ಡಿಡಿಪಿಐ ಜಯಕುಮಾರ, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.