ಶಾಲೆಯಲ್ಲೇ ಮಕ್ಕಳಿಗೆ ವಸತಿ ವ್ಯವಸ್ಥೆ

7

ಶಾಲೆಯಲ್ಲೇ ಮಕ್ಕಳಿಗೆ ವಸತಿ ವ್ಯವಸ್ಥೆ

Published:
Updated:
ಶಾಲೆಯಲ್ಲೇ ಮಕ್ಕಳಿಗೆ ವಸತಿ ವ್ಯವಸ್ಥೆ

ಬೆಂಗಳೂರು:  ರಾಜ್ಯದಲ್ಲಿ ಶಾಲೆಯಿಂದ ಹೊರಗೆ ಇರುವ ಸುಮಾರು 70 ಸಾವಿರ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಂಡು ವಸತಿಸಹಿತ ಶಿಕ್ಷಣ ನೀಡಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷ 408 ವಸತಿಸಹಿತ ಶಾಲೆಗಳು ಪ್ರಾರಂಭವಾಗಲಿವೆ.ಶಾಲೆಯಿಂದ ಹೊರಗೆ ಇರುವ ಮಕ್ಕಳನ್ನು ಶಾಲೆಗೆ ಸೇರಿಸಲು 2000ನೇ ಇಸವಿಯಿಂದ ನಿರಂತರವಾಗಿ ಪ್ರಯತ್ನ ನಡೆದಿದೆ. ಆದರೂ ಸಮೀಕ್ಷೆ ಪ್ರಕಾರ 6ರಿಂದ 14 ವರ್ಷದೊಳಗಿನ 70 ಸಾವಿರ ಮಕ್ಕಳು ಈಗಲೂ ಶಾಲೆಯಿಂದ ಹೊರಗೆ ಇದ್ದಾರೆ. ಈ ವರ್ಷ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಮಗುವಿಗೂ ಕಡ್ಡಾಯ ಮತ್ತು ಉಚಿತ ಶಿಕ್ಷಣವನ್ನು ನೀಡಬೇಕು. ಶಾಲೆಯಿಂದ ಹೊರಗೆ ಇರುವ, ಶಾಲೆ ಬಿಟ್ಟಿರುವ 6ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳನ್ನು ಪ್ರಸಕ್ತ ಸಾಲಿನಲ್ಲಿ ಶಾಲೆಗೆ ದಾಖಲು ಮಾಡಿಕೊಂಡು ಅವರಿಗೆಲ್ಲ ಶಾಲೆಯಲ್ಲೇ ವಸತಿ ವ್ಯವಸ್ಥೆಗೆ  ಸರ್ಕಾರ ತೀರ್ಮಾನಿಸಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 49 ಶಾಲೆಗಳು ಸೇರಿದಂತೆ ರಾಜ್ಯದ ವಿವಿಧೆಡೆ ಒಟ್ಟು 408 ವಸತಿಸಹಿತ ಶಾಲೆಗಳಿಗೆ ಚಾಲನೆ ನೀಡುತ್ತಿದ್ದು, ಸಾಂಪ್ರದಾಯಿಕ ಕಲಿಕೆಯ ಜತೆಗೆ ವಿಶೇಷ ತರಬೇತಿ ಕಾರ್ಯಕ್ರಮಗಳ ಮೂಲಕ ಆ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶವಿದೆ.ಮಕ್ಕಳ ಸಂಖ್ಯೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ ಕೆಲವೆಡೆ ಶಾಲೆಗಳನ್ನು ಮುಚ್ಚಲಾಗಿತ್ತು. ಅಂತಹ ಶಾಲೆಗಳ ಕಟ್ಟಡಗಳು ಖಾಲಿ ಇದ್ದು, ಅಲ್ಲಿ ಈಗ ವಸತಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಪ್ರತಿಯೊಂದು ಕಡೆ 5ರಿಂದ 10 ಲಕ್ಷ ರೂಪಾಯಿ ವೆಚ್ಚ ಮಾಡಿ ಶೌಚಾಲಯ, ಸ್ನಾನದ ಮನೆ, ಅಡುಗೆ ಮನೆ ಇತ್ಯಾದಿಗಳನ್ನು ನಿರ್ಮಿಸಿ ಹಗಲು ವೇಳೆಯಲ್ಲಿ ಅಷ್ಟೇ ಅಲ್ಲದೆ ಸಂಜೆ ಹೊತ್ತು ಶಿಕ್ಷಣ ನೀಡಲಾಗುತ್ತದೆ. ಪ್ರತಿ ಮಗುವಿಗೆ ವಾರ್ಷಿಕ 20 ಸಾವಿರ ರೂಪಾಯಿ ವೆಚ್ಚ ಮಾಡಲಾಗುತ್ತದೆ ಎಂದು ತಿಳಿಸಿದರು.ಶಾಲೆಯಿಂದ ಹೊರಗೆ ಇದ್ದ ಮಕ್ಕಳ ಸಂಖ್ಯೆ 2001ರಲ್ಲಿ ಹತ್ತು ಲಕ್ಷಕ್ಕೂ ಅಧಿಕವಾಗಿತ್ತು. `ಕೂಲಿಯಿಂದ ಶಾಲೆ~~, `ಬಾ ಬಾಲೆ ಶಾಲೆ~ಗೆ, `ಬೀದಿಯಿಂದ ಶಾಲೆ~ಗೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳನ್ನು ಪ್ರತಿ ವರ್ಷಶಾಲೆಗೆ ಕರೆತರಲಾಗುತ್ತಿದೆ. ಹೀಗಾಗಿ ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳ ಸಂಖ್ಯೆ ಇಳಿಮುಖವಾಗಿದೆ.14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ನೀಡುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ, 12 ವರ್ಷ ವಯಸ್ಸಿನ ಮಗು ಶಾಲೆಯಿಂದ ಹೊರಗೆ ಇದ್ದರೆ ಆ ಮಗುವನ್ನು ನೇರವಾಗಿ 6ನೇ ತರಗತಿಗೆ ದಾಖಲು ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ವಿಶೇಷ ತರಬೇತಿ ಮೂಲಕ ಆ ಮಗುವನ್ನು 6ನೇ ತರಗತಿಯ ಹಂತಕ್ಕೆ ತಯಾರು ಮಾಡಲಾಗುತ್ತದೆ ಎಂದರು.ಅನುದಾನ: ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಕೇಂದ್ರ ಸರ್ಕಾರ ಕಳೆದ ವರ್ಷ ರಾಜ್ಯಕ್ಕೆ ರೂ 1,458 ಕೋಟಿ  ಅನುದಾನ ನೀಡಿತ್ತು. ಈ ವರ್ಷ ರೂ 2,300 ಕೋಟಿ  ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾಗಿದ್ದು, ಸುಮಾರು ರೂ 1,900 ಕೋಟಿ  ನೆರವು ಸಿಗುವ ವಿಶ್ವಾಸವಿದೆ. ವಸತಿಸಹಿತ ಶಾಲೆಗಳಿಗೆ ಅಗತ್ಯವಿರುವ ಹಣವನ್ನು ಅದರಲ್ಲೇ ಖರ್ಚು ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.ಒಟ್ಟು ಅನುದಾನದಲ್ಲಿ ಶೇಕಡ 33ರಷ್ಟು ಹಣವನ್ನು ಸಿವಿಲ್ ಕಾಮಗಾರಿಗಳಿಗೆ ಬಳಸಲು ಅವಕಾಶವಿದ್ದು, ಈ ವರ್ಷ ಹೆಚ್ಚುವರಿಯಾಗಿ ಎರಡು ಸಾವಿರ ಕೊಠಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.8ನೇ ತರಗತಿಯನ್ನು ಹಿರಿಯ ಪ್ರಾಥಮಿಕ ಶಾಲೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗುತ್ತದೆ.ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಈ ವರ್ಷ ರಾಜ್ಯದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಕಾರ್ಯಕ್ರಮಗಳ ಪ್ರಸ್ತಾವ ಸದ್ಯ ಕೇಂದ್ರ ಸರ್ಕಾರದ ಮುಂದೆ ಇದೆ. ಕಳೆದ ವಾರ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿದ್ದು, ವಾರದಲ್ಲಿ ಪ್ರಸ್ತಾವಕ್ಕೆ ಅನುಮೋದನೆ ದೊರೆಯುವ ನಿರೀಕ್ಷೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry