ಸೋಮವಾರ, ಜನವರಿ 20, 2020
29 °C

ಶಾಲೆ ಅಂದ ಹೆಚ್ಚಿಸಿದ ಪರಿಸರ

ಪ್ರಜಾವಾಣಿ ವಾರ್ತೆ/ಡಿ.ಎಚ್‌.ಕಂಬಳಿ Updated:

ಅಕ್ಷರ ಗಾತ್ರ : | |

ಶಾಲೆ ಅಂದ ಹೆಚ್ಚಿಸಿದ ಪರಿಸರ

ಸಿಂಧನೂರು: ಶಾಲಾ ಅಂಗಳದೊಳಗೆ ಹತ್ತು ಹಲವು ಗಿಡಮರಗಳು. ಸ್ವಚ್ಛ ಮೈದಾನ, ಪಕ್ಷಿಗಳ ನಿನಾದ, ಮೈದಾನದಲ್ಲಿ ಜಿಂಕೆಯಂತೆ ಜಿಗಿಯುವ ಮಕ್ಕಳು, ಬೆಳಿಗ್ಗೆ ಶಾಲೆಗೆ ಬರುವ ಎಲ್ಲ ಮಕ್ಕಳ ಮುಖದಲ್ಲಿ ಕಾಣುವ ನಗು ತಾಲ್ಲೂಕಿನ ಗುಡದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿತ್ಯವೂ ಕಣ್ಣಿಗೆ ಕಟ್ಟುತ್ತವೆ.ವಿದ್ಯಾರ್ಥಿಗಳು ವಿಶ್ರಾಂತಿ ವೇಳೆಯಲ್ಲಿ ಶಾಲೆಯ ಅಂದವಾದ ಪರಿಸರದಲ್ಲಿ ತಮ್ಮನ್ನೇ ತಾವು ಮೈ ಮರೆತು ಗರಿಬಿಚ್ಚುವ ವಿದ್ಯಾರ್ಥಿಗಳ ಕಲಿಕೆಗೆ ಶಾಲೆಯ ಅಂಗಳದಲ್ಲಿರುವ ಸ್ವಚ್ಛ ಪರಿಸರ ಅಭ್ಯಾಸಕ್ಕೆ ಪೂರಕ ವಾತಾವರಣ ಕಲ್ಪಿಸಿದೆ. ಶಿಕ್ಷಕರು ಕಲಿಸುವ ಹಲವಾರು ಪರಿಸರ ಪಠ್ಯವಿಷಯಗಳನ್ನು ಶಾಲಾ ಅಂಗಳದಲ್ಲಿ ಕಾಣುವ ಮುಕ್ತವಾದ ಪರಿಸರ ಜತೆ ಮುಕ್ತವಾಗಿ ಕಲಿಯುವ ಖುಷಿಯಂತು ವಿಶಿಷ್ಟ ಅನುಭವವನ್ನು ನೀಡುತ್ತದೆ.ಸಿಂಧನೂರು–ಮಸ್ಕಿ ಮುಖ್ಯ ರಸ್ತೆಯ ಮಾರ್ಗದಲ್ಲಿ ಬರುವ ಈ ಶಾಲೆಯ ಅಂಗಳದತ್ತ ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಒರೆ ನೋಟದಿಂದ ನೋಡದೆ ಹೋಗುವುದೇ ಇಲ್ಲ. ಅಂಥ ಖುಷಿಯನ್ನು ಕೊಡುವ ಶಾಲೆಯ ಪರಿಸರ ನೀಡುತ್ತದೆ. ತಾಲ್ಲೂಕಿನಲ್ಲಿ ಎಲ್ಲರ ಗಮನ ಸೆಳೆಯುವ ಗುಡದೂರು ಶಾಲೆ, ಮಕ್ಕಳ ಕಲಿಕೆಗೆ ಉತ್ತಮವಾದ ವೇದಿಕೆ ಕಲ್ಪಿಸಿದೆ.  ಶಾಲೆಯ ಅಂಗಳದಲ್ಲಿ ಬೆಳಸಿರುವ ಹಸಿರು ಪರಿಸರ  ಹೊಸ ಕಳೆ ಕಟ್ಟಿದೆ.ತೆಂಗಿನ ಮರ, ಅಶೋಕ, ಬಾಳೆ, ಮಲ್ಲಿಗೆ, ಆಲದಮರ, ಬೆಂಡೆಕಾಯಿ, ಟೊಮೆಟೊ, ಹಾಗಲಕಾಯಿ, ಮೆಣಸಿನಕಾಯಿ, ಹಿರೇಕಾಯಿ, ಬದನೆಕಾಯಿ, ತುಳಸಿ, ಚೆಂಡು ಹೂವಿನ ಗಿಡಗಳು ಸೇರಿದಂತೆ ಅನೇಕ ಔಷಧ ಗಿಡಗಳನ್ನು ಇಲ್ಲಿ ನೆಡಲಾಗಿದೆ. ಮಕ್ಕಳಿಗೆ ಬೇಕಾಗುವ ಬಿಸಿಯೂಟ ತಯಾರಿಕೆಗೆ ಇಲ್ಲಿ ಬೆಳೆಯುವ ತರಕಾರಿಗಳನ್ನು ಬಳಸಲಾಗುತ್ತದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.ಎಲ್ಲ ವಿದ್ಯಾರ್ಥಿಗಳು ಶಾಲೆಯಲ್ಲಿ ನೆಡಲಾಗಿರುವ ಸಸಿಗಳಿಗೆ ನೀರು ಹಾಗೂ ಪೋಷಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಕರು ಎಲ್ಲ ಹಂತಗಳಲ್ಲಿ ಸಹಾಯ ಹಾಗೂ ಉತ್ತಮ ಮಾರ್ಗದರ್ಶನ ಮಾಡುವ ಮೂಲಕ ಶಾಲೆಯಲ್ಲಿ ಸಮೃದ್ಧವಾದ ಪರಿಸರ ಬೆಳೆಯಲು ಸಹಾಯಕವಾಗಿದೆ ಎಂದು ಮುಖ್ಯ ಶಿಕ್ಷಕ ಮುಖ್ಯಶಿಕ್ಷಕ ಚನ್ನಬಸಯ್ಯ ಹಿರೇಮಠ ಹೇಳಿದರು.ಸರ್ಕಾರಿ ಶಾಲೆಗಳ ಬಗ್ಗೆ ಪಾಲಕರಲ್ಲಿ ಕೀಳರಿಮೆ ಭಾವನೆ ಹೆಚ್ಚುತ್ತಿರುವ ಸಮಯದಲ್ಲಿ, ಯಾವುದೇ ಕಾನ್ವೆಂಟ್‌ ಶಾಲೆಗಿಂತಲೂ ಕಡಿಮೆ ಇಲ್ಲ ಎನ್ನುವಂತ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ನೀಡಲಾಗುತ್ತಿದೆ. ಕೊಕ್ಕೊ , ಕಬಡ್ಡಿ, ರಸಪ್ರಶ್ನೆ, ಪ್ರಬಂಧ ಸ್ಫರ್ಧೆ, ನೆನಪಿನ ಶಕ್ತಿ ಸ್ಫರ್ಧೆ ಇನ್ನಿತರ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಆಟಗಳನ್ನು ವಿದ್ಯಾರ್ಥಿಗಳಿಗೆ ಆಡಿಸುವ ಮೂಲಕ ಹೆಚ್ಚಿನ ಪೈಪೋಟಿ ನಡೆಸಲು  ತರಬೇತಿ ನೀಡಲಾಗುತ್ತದೆ ಎಂದು ಹೇಳುತ್ತಾರೆ.ಮಧ್ಯಾಹ್ನ ಸಮಯಕ್ಕೆ ಸರಿಯಾಗಿ ಬಿಸಿಯೂಟ, ಜೊತೆಗೊಂದಿಷ್ಟು ಆಟ ವಿದ್ಯಾರ್ಥಿಗಳಲ್ಲಿ ಚೈತನ್ಯವನ್ನು ಇಮ್ಮಡಿ­ಸಿದೆ. ಗುಡದೂರು, ಹಸಮ­ಕಲ್‌, ರಂಗಾಪುರ, ಗೋನಾಳ ಗ್ರಾಮದ ನೂರಾರು ವಿದ್ಯಾರ್ಥಿಗಳಿಗೆ ಈ ಶಾಲೆ ನೆಚ್ಚಿನದಾಗಿದೆ. ಕೆಲ ವಿದ್ಯಾರ್ಥಿಗಳು ತಮ್ಮ ಊರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಿದ್ದರೂ ಉತ್ತಮ ವಾತಾವರ­ಣಕ್ಕೆ ಮನಸೋತು ಇಲ್ಲಿಯೇ ಪ್ರವೇಶವ­ಕಾಶ ಪಡೆದಿರುವುದೇ ಸಾಕ್ಷಿ.ಮಕ್ಕಳಲ್ಲಿ ಇಂಗ್ಲಿಷ್‌ ಭಾಷೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸಲು ವ್ಯಾಕರಣ­­­ವನ್ನು ವಿಶೇಷವಾಗಿ ಹೇಳಿ­ಕೊಡ­ಲಾಗುತ್ತಿದೆ. ಕೆಲ ವಿದ್ಯಾರ್ಥಿಗಳ ನೆನಪಿನ ಶಕ್ತಿ ಮತ್ತು ಅವರಲ್ಲಿನ ಕೌಶಲ ಗಮನಿಸಿದರೆ ನಿಜಕ್ಕೂ ಸಂತಸವಾ­ಗುತ್ತದೆ ಎಂದು ಶಿಕ್ಷಕ ರಜಾಕ್‌ ಹೇಳುತ್ತಾರೆ.

ಶಾಲೆಯಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ, ಅವರಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಭವಿಷ್ಯ ಉಜ್ವಲಗೊಳಿಸುವುದೇ ನಮ್ಮ ಧ್ಯೇಯ ಎಂದು  ಶಿಕ್ಷಕ ಲಕ್ಷ್ಮಣ ರಂಗಾಪುರ ಹೇಳಿದರು.

 

ಪ್ರತಿಕ್ರಿಯಿಸಿ (+)