ಗುರುವಾರ , ಮೇ 13, 2021
17 °C

ಶಾಲೆ ಆವರಣದಲ್ಲಿ ಬಚ್ಚಲು ನೀರು, ತಿಪ್ಪೆ ಗುಂಡಿ, ಶೌಚ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಲೆ ಆವರಣದಲ್ಲಿ ಬಚ್ಚಲು ನೀರು, ತಿಪ್ಪೆ ಗುಂಡಿ, ಶೌಚ

ಚಿತ್ತಾಪುರ: ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಿಂದ ಕೂಗಳತೆಯಲ್ಲಿರುವ ಸ್ಥಳೀಯ ಸರ್ಕಾರಿ ಪ್ರೌಢ ಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣಕ್ಕೆ ಬರುವ ಬಚ್ಚಲು ನೀರು, ಜನರು ಹಾಕಿರುವ ತಿಪ್ಪೆ ಗುಂಡಿ, ಹಂದಿಗಳ ಉಪಟಳ, ಜನರು ಆವರಣ ಗೋಡೆ ದಾಟಿಕೊಂಡು ಬಂದು ಶಾಲಾ ಆವರಣದಲ್ಲಿ ಶೌಚಕ್ಕೆ ಕೂಡುತ್ತಿರುವ ಪರಿಣಾಮ ಶಾಲಾ ಕಾಲೇಜಿನ ಪರಿಸರ ಸಂಪೂರ್ಣ ಹದಗೆಟ್ಟು ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಮಾನಸಿಕ ಹಿಂಸೆ, ತೊಂದರೆ, ಕಿರಿಕಿರಿ ಅನುಭವಿಸುತ್ತಿದ್ದಾರೆ.ಪ್ರೌಢ ಶಾಲೆಯಲ್ಲಿ ಕನ್ನಡ ಮತ್ತು ಉರ್ದು ಮಾಧ್ಯಮದ ಒಟ್ಟು 550 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯಲ್ಲಿ 15 ಜನ ಬೋಧಕ ಸಿಬ್ಬಂಧಿ, ಒಬ್ಬರು ಕಾವಲುಗಾರ, ಅಟೆಂಡರ್, ಸೇವಕ, ಗುಮಾಸ್ತ ಹೀಗೆ ಒಟ್ಟು 19 ಜನರು ಸೇವೆ ಸಲ್ಲಿಸುತ್ತಿದ್ದಾರೆ.15 ಗಣಕಯಂತ್ರ, ಒಬ್ಬರೇ ಆಪರೇಟರ್. ಎಲ್ಲಾ ವಿದ್ಯಾರ್ಥಿಗಳಿಗೆ ಗಣಕಯಂತ್ರ ಬಗ್ಗೆ ಬೋಧನೆ ಮಾಡುವುದು ಕಷ್ಟವಾಗುತ್ತಿದೆ. ಉರ್ದು ಮಾಧ್ಯಮ ವಿದ್ಯಾರ್ಥಿಗಳಿಗೆ ಬೋಧಿಸುವುದು ಮತ್ತಷ್ಟು ಸಮಸ್ಯೆಯಾಗಿದೆ. ಚಿತ್ರಕಲೆ, ವೃತ್ತಿ ಶಿಕ್ಷಕ ಹುದ್ದೆ ಖಾಲಿಯಿದೆ.ಅಂದಿನ ಮೈಸೂರು ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬಿ.ಡಿ. ಜತ್ತಿ ಅವರು 1960ರಲ್ಲಿ ಶಾಲೆಯ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿದ್ದಾರೆ. 1965ರಲ್ಲಿ ಅದೇ ಮೈಸೂರು ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಸ್.ನಿಜಲಿಂಗಪ್ಪನವರು ಶಾಲೆಯ ಕಟ್ಟಡದ ಉದ್ಘಾಟನೆ ನೆರವೇರಿಸಿದ್ದಾರೆ. ಒಟ್ಟು 1.72 ಲಕ್ಷ ರೂಪಾಯಿ ಅನುದಾನದಲ್ಲಿ 19 ಕೋಣೆಗಳ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇಂದು ಆ ಕಟ್ಟಡದ ಛತ್ ಹಳೆಯದಾಗಿದ್ದು ಬಹಳಷ್ಟು ಕೋಣೆಗಳು ಮಳೆಗೆ ಸೋರುತ್ತಿವೆ.ಶಾಲೆಯ ರಕ್ಷಣೆಗೆಂದು ಸುತ್ತಲೂ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲಾಗಿದೆ. ಅಕ್ಕಪಕ್ಕದ ಜನರು ಕಾಂಪೌಂಡ್ ಗೋಡೆ ಒಡೆದು ಶಾಲಾ ಆವರಣಕ್ಕೆ ತಮ್ಮ ಮನೆಯ ಬಚ್ಚಲು ನೀರು ಬಿಡುತ್ತಿದ್ದಾರೆ. ಕಾಂಪೌಂಡು ಗೋಡೆ ಜಿಗಿದು ಬಂದು ಆವರಣದಲ್ಲಿ ಶೌಚಕ್ಕೆ ಕೂಡುತ್ತಿದ್ದಾರೆ. ಕೆಲವರು ಆವರಣದಲ್ಲಿಯೇ ತಿಪ್ಪೆ ಗುಂಡಿ ನಿರ್ಮಾಣ ಮಾಡಿ ವರ್ಷಕ್ಕೊಮ್ಮೆ ಖಾಲಿ ಮಾಡುತ್ತಾರೆ. ಹೀಗಾಗಿ ಶಾಲೆಯ ಪರಿಸರ ಹಾಳಾಗಿದೆ ಎಂದು ಶಿಕ್ಷಕರು ತೀವ್ರ ಬೇಸರ ವ್ಯಕ್ತ ಮಾಡಿದ್ದಾರೆ.ಶಾಲೆಯಲ್ಲಿ ಕುಡಿವ ನೀರಿನ ಸೌಲಭ್ಯವಿದೆ. ಹೆಣ್ಣು ಮಕ್ಕಳಿಗೆ ಶೌಚಾಲಯದ ವ್ಯವಸ್ಥೆ ಇದೆ. ಗಂಡು ಮಕ್ಕಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಹೀಗಾಗಿ ಶಿಕ್ಷಕರು ಮತ್ತು ಗಂಡು ಮಕ್ಕಳು ಶೌಚಾಲಯ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ.ಶಾಲೆ ಕಟ್ಟಡದ ಒಳಾಂಗಣದಲ್ಲಿ ಮಳೆ ನೀರು ನಿಂತು ನಡೆಯಲು ಬಾರದಂತೆ ಇಡೀ ಒಳಾಂಗಣ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ಒಳಾಂಗಣದಲ್ಲಿ ಹಾಸುಗಲ್ಲು ಹಾಕುವುದು ಅಗತ್ಯವಿದೆ. ಮಧ್ಯಾಹ್ನದ ಬಿಸಿಯೂಟದ ನಂತರ ಎಲ್ಲಾ ಮಕ್ಕಳಿಗೆ ಒಂದೇ ಸಮಯದಲ್ಲಿ ಬೇಕಾದ ಕುಡಿವ ನೀರಿನ ಸರಿಯಾದ ವ್ಯವಸ್ಥೆ ಇಲ್ಲದ ಪರಿಣಾಮ ವಿದ್ಯಾರ್ಥಿಗಳು ಹೊರಗಡೆ ಬಂದು ನೀರು ಕುಡಿವಾಗ ಶಾಲಾ ಆವರಣಕ್ಕೆ ಎಗ್ಗಿಲ್ಲದೆ ನುಗ್ಗಿ ಬರುವ ಹಂದಿಗಳ ಕಾಟ ಹೆಚ್ಚಾಗಿದೆ.ಶಾಲೆಯ ಆಟದ ಮೈದಾನದಲ್ಲಿ ಖಾಸಗಿ ವಾಹನಗಳ ಓಡಾಟದಿಂದ ಮೈದಾನ ಹಾಳಾಗುತ್ತಿದೆ. ದ್ವಾರ ಬಾಗಿಲದ ನೆಲಮಟ್ಟದಲ್ಲಿ ಕಬ್ಬಿಣದ ಪೈಪು ಅಳವಡಿಸಿ ಗೇಟ್ ನಿರ್ಮಿಸಿದರೆ ಒಳಗೆ ಹಂದಿ ನಾಯಿ, ದನಕರು ಬರಲು ಅವಕಾಶವೇ ಇರುವುದಿಲ್ಲ. ಆವರಣದಲ್ಲಿ ಗಿಡ ಮರಗಳನ್ನು ಬೆಳೆಸಿ ಶಾಲೆಯ ಪರಿಸರ ಉತ್ತಮವಾಗಿ ನಿರ್ಮಿಸಬಹುದು.ಶಾಲೆಯ ಬಗ್ಗೆ ಸಾರ್ವಜನಿಕರ ಹಾಗೂ ನಗರದ ಪೌರಾಡಳಿತದ ಅಸಹಕಾರ ಎದ್ದು ಕಾಣುತ್ತಿದೆ. ಅದಕ್ಕೆ ಶಾಲೆಯ ಪರಿಸರವೇ ಮೂಕ ಸಾಕ್ಷಿಯಾಗಿ ನಿಂತಿದೆ. ಸಂಬಂಧಿತ ಪುರಸಭೆ ಆಡಳಿತ, ಅಧ್ಯಕ್ಷ, ಜನಪ್ರತಿನಿಧಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿ ಶಾಲಾ ಕಾಲೇಜಿನ ಹದಗೆಟ್ಟ ಪರಿಸರ, ಅಲ್ಲಿ ಆಗುತ್ತಿರುವ ತೊಂದರೆ, ವಿದ್ಯಾರ್ಥಿ, ಶಿಕ್ಷಕರು ಅನುಭವಿಸುವ ಹಿಂಸೆ, ಮಾನಸಿಕ ಕಿರಿಕಿರಿ ಬಗ್ಗೆ ಗಮನ ನೀಡಬೇಕಾಗಿದೆ. ಖಾಲಿಯಿರುವ ಹುದ್ದೆಗಳ ಭರ್ತಿಗೆ, ಅಗತ್ಯ ಸಿಬ್ಬಂದಿ ನಿಯೋಜನೆಗೆ ತುರ್ತು ಕ್ರಮ ತೆಗೆದುಕೊಳ್ಳಬೇಕು ಎನ್ನುವ ಮಾತು ಶಿಕ್ಷಕರ ವಲಯದಿಂದ ಕೇಳಿ ಬಂದಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.