ಶಾಲೆ ಮುಚ್ಚುವುದು ಕಡ್ಡಾಯವಲ್ಲ

7

ಶಾಲೆ ಮುಚ್ಚುವುದು ಕಡ್ಡಾಯವಲ್ಲ

Published:
Updated:
ಶಾಲೆ ಮುಚ್ಚುವುದು ಕಡ್ಡಾಯವಲ್ಲ

ಬೆಂಗಳೂರು: `ಐದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಪ್ರಾಥಮಿಕ ಶಾಲೆಗಳನ್ನು ಮುಚ್ಚುವುದು ಕಡ್ಡಾಯವೇನಲ್ಲ. ಸ್ಥಳೀಯರು ಬಯಸಿದಲ್ಲಿ ಇಂತಹ ಶಾಲೆಗಳನ್ನು ಮುಚ್ಚದೆ ಯಥಾಸ್ಥಿತಿ ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ~ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಗುರುವಾರ ಇಲ್ಲಿ ಸ್ಪಷ್ಟಪಡಿಸಿದರು.

`ರಾಷ್ಟ್ರೀಯ ಶಿಕ್ಷಣ ದಿನಾಚರಣೆ~ ಕುರಿತು ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಒಂದು ಜವಾಬ್ದಾರಿಯುತ ಸರ್ಕಾರ ಎಂದಿಗೂ ಶಾಲೆಗಳನ್ನು ಮುಚ್ಚಲು ಬಯಸುವುದಿಲ್ಲ. ಇಂತಹ ಆರೋಪ ಊಹೆಗೂ ನಿಲುಕದ್ದು~ ಎಂದರು.

`ಐದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ವಿಲೀನಗೊಳಿಸಲು ಸಾಧ್ಯವಾದರೆ ಮಾಡಿ, ಇಲ್ಲದಿದ್ದರೆ ಕೈಬಿಡಿ ಎಂದು ಸೆಪ್ಟೆಂಬರ್ 29ರಂದು ಹೊರಡಿಸಿರುವ ಸುತ್ತೋಲೆಯಲ್ಲಿಯೇ ಸ್ಪಷ್ಟಪಡಿಸಲಾಗಿದೆ. ಈ ಬಗ್ಗೆ ಶಾಲೆಯ ಎಸ್‌ಡಿಎಂಸಿ, ತಾಲ್ಲೂಕು, ಜಿಲ್ಲಾ ಪಂಚಾಯ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪರಸ್ಪರ ಚರ್ಚಿಸಿ ಸ್ಥಳೀಯ ಮಟ್ಟದಲ್ಲಿಯೇ ಸೂಕ್ತ ತೀರ್ಮಾನ ಕೈಗೊಳ್ಳುವ ಅಧಿಕಾರ ನೀಡಲಾಗಿದೆ~ ಎಂದು ಸಚಿವರು ತಿಳಿಸಿದರು.

`ಒಂದೊಂದು ಊರಿನಲ್ಲಿ ಎರಡೆರಡು ಪ್ರಾಥಮಿಕ ಶಾಲೆಗಳಿದ್ದು, ಒಂದು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಐದಕ್ಕಿಂತ ಕಡಿಮೆಯಿದೆ. ಕೆಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 1-2-3 ಹೀಗಿದೆ. ಸುಮಾರು 157 ಶಾಲೆಗಳಲ್ಲಿ ಈ ವರ್ಷ ಮಕ್ಕಳ ದಾಖಲಾತಿಯೇ ನಡೆದಿಲ್ಲ. ಇಂತಹ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವೇ?~ ಐದಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಶೈಕ್ಷಣಿಕ ವಾತಾವರಣ ನಿರ್ಮಿಸಲು ಸಾಧ್ಯವೇ? ಶಿಕ್ಷಕರು ಉತ್ಸಾಹದಿಂದ ಮಕ್ಕಳಿಗೆ ಪಾಠ ಕಲಿಸಲು ಸಾಧ್ಯವೇ? ಈ ಬಗ್ಗೆ ಉತ್ತರ ಸಿಗಲು ಚರ್ಚೆ ನಡೆಯುವ ಅಗತ್ಯವಿದೆ~ ಎಂದು ಅವರು ವಾದಿಸಿದರು.

`ಮಲೆನಾಡು, ಕರಾವಳಿ ಹಾಗೂ ಸಾರಿಗೆ ಸೌಲಭ್ಯಕ್ಕೆ ಅನಾನುಕೂಲವಿರುವ ಬಯಲು ಸೀಮೆಯ ಕೆಲ ಶಾಲೆಗಳನ್ನು ಹೊರತುಪಡಿಸಿದರೆ ವ್ಯವಹಾರಿಕ ದೃಷ್ಟಿಯಿಂದ ಯಾವ ಶಾಲೆಗಳನ್ನೂ ವಿಲೀನಗೊಳಿಸಲು ಸಾಧ್ಯವಿಲ್ಲವೋ ಅಂತಹ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ~ ಎಂದು ಸಚಿವರು ಸ್ಪಷ್ಟವಾಗಿ ಹೇಳಿದರು.

ಹೊಸ ಶಾಲೆ ಪ್ರಾರಂಭಿಸಲು ಸಿದ್ಧ:

`ಮಕ್ಕಳ ಸಂಖ್ಯೆ ಅಧಿಕವಾಗಿದ್ದರೆ ನಾಳೆಯೇ ಹೊಸ ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರ ಸಿದ್ಧವಿದೆ. ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಶೇ 85ರಷ್ಟು ಮಕ್ಕಳು ಸರ್ಕಾರಿ ಶಾಲೆಗಳಿಗೆ ಬರುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಹಾಗೂ ಮೂಲ ಸೌಕರ್ಯ ಕೊರತೆಯಿಂದ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚಲು ಸರ್ಕಾರ ಹುನ್ನಾರ ನಡೆಸುತ್ತಿದೆ ಎಂಬ ಆರೋಪ ವಾಸ್ತವಕ್ಕೆ ದೂರುವಾದುದು. ಶಿಕ್ಷಣ ಎಂದರೆ ಕೇವಲ ದಾಖಲಾತಿಯಷ್ಟೇ ಅಲ್ಲ. ಗುಣಮಟ್ಟದ ಶಿಕ್ಷಣ ಕೂಡ ಮುಖ್ಯ. ಇಬ್ಬರು-ಮೂವರು ಮಕ್ಕಳಿರುವ ಶಾಲೆಗಳನ್ನು ಹಾಗೆಯೇ ನಡೆಸಿ ಎಂಬ ಒತ್ತಾಯ ಕೇಳಿ ಬಂದಲ್ಲಿ ಸರ್ಕಾರ ಸ್ಥಳೀಯರ ಒತ್ತಾಯಕ್ಕೆ ಮನ್ನಣೆ ನೀಡಲಿದೆ~ ಎಂದರು.

`ಶಾಲೆಯ ವಸ್ತು ಸ್ಥಿತಿ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕಿದೆ. ಇನ್ನೆಲ್ಲೋ ಕುಳಿತು ಮತ್ತೆಲ್ಲೋ ಇರುವ ಶಾಲೆಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳ ಭೌಗೋಳಿಕ ಹಾಗೂ ಸಾಮಾಜಿಕ ಹಿನ್ನೆಲೆ ಬಗ್ಗೆಯೂ ಚರ್ಚೆ ನಡೆಯಬೇಕಿದೆ. ಮುಚ್ಚುವಂತಹ ಶಾಲೆಗಳನ್ನು ರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆಗೆ ವಹಿಸಲು ಸರ್ಕಾರ ಷಡ್ಯಂತ್ರ ನಡೆಸಿದೆ ಎಂಬ ದುರುದ್ದೇಶಪೂರಿತ ಆರೋಪಗಳಿಗೆಲ್ಲಾ ಒಬ್ಬ ಶಿಕ್ಷಣ ಸಚಿವನಾಗಿ ನಾನು ಉತ್ತರಿಸುವ ಅಗತ್ಯವಿಲ್ಲ~ ಎಂದು ಸೂಚ್ಯವಾಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry