ಶಾಲೆ ಮುಚ್ಚುವ ನಿರ್ಧಾರಕ್ಕೆ ಖಂಡನೆ

7

ಶಾಲೆ ಮುಚ್ಚುವ ನಿರ್ಧಾರಕ್ಕೆ ಖಂಡನೆ

Published:
Updated:

ಬೆಂಗಳೂರು: ರಾಜ್ಯ ಸರ್ಕಾರವು 3,174 ಸರ್ಕಾರಿ ಶಾಲೆಗಳನ್ನು ಮುಚ್ಚಿ, ಸಮೀಪದ ಶಾಲೆಗಳಲ್ಲಿ ವಿಲೀನಗೊಳಿಸಲು ಮುಂದಾಗಿರುವ ನಿರ್ಧಾರವನ್ನು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಓ) ತೀವ್ರವಾಗಿ ಖಂಡಿಸಿದೆ.ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ರಾಜ್ಯ ಅಧ್ಯಕ್ಷ ವಿ.ಎನ್. ರಾಜಶೇಖರ್, ಕಾರ್ಯದರ್ಶಿ ಡಾ.ಎನ್.ಪ್ರಮೋದ್, `ಮಕ್ಕಳ ಸಂಖ್ಯೆ ಕಡಿಮೆಯಾಗಿದೆಯೆಂಬ ಸಚಿವರ ಸಮರ್ಥನೆ ಸಮ್ಮತವಲ್ಲ. ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣಗಳನ್ನು ಅರಿತು, ಸರಿಯಾದ ಕ್ರಮ ಕೈಗೊಳ್ಳಬೇಕು. ಜಗತ್ತಿನಾದ್ಯಂತ ಸಾಬೀತಾಗಿರುವ ವಿಷಯವೆಂದರೆ ಶಿಕ್ಷಕ-ವಿದ್ಯಾರ್ಥಿಗಳ ಅನುಪಾತ ಕಡಿಮೆಯಿದ್ದಷ್ಟು ಶಿಕ್ಷಣದ ಗುಣಮಟ್ಟ ಹೆಚ್ಚುವುದು.ಹಾಗಾಗಿ ಶಾಲೆಗಳ ಸಂಖ್ಯೆ ಇನ್ನಷ್ಟು ಹೆಚ್ಚಿಸಬೇಕೇ ಹೊರತು ಮುಚ್ಚುವುದು ಸರಿಯಲ್ಲ~ ಎಂದು ತಿಳಿಸಿದ್ದಾರೆ.

`ಸರ್ವ ಶಿಕ್ಷಣ ಅಭಿಯಾನದ ಹೆಸರಿನಲ್ಲಿ ವಿಶ್ವಬ್ಯಾಂಕ್ ಸಾಲದ ಕೋಟ್ಯಂತರ ರೂಪಾಯಿ ಹಣ ಪೋಲಾಗಿದೆಯೇ ಹೊರತು ಶಾಲೆಗಳ ಅಭಿವೃದ್ಧಿ ಮಾತ್ರ ನಗಣ್ಯ. ಅನಿವಾರ್ಯವಾಗಿ ದುಬಾರಿ ಡೊನೇಶನ್ ತೆತ್ತು ಖಾಸಗಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸುವಂತಾಗಿದೆ. ಇನ್ನೊಂದೆಡೆ ನಾಯಿಕೊಡೆಗಳಂತೆ ಖಾಸಗಿ ಶಾಲೆಗಳು ತಲೆ ಎತ್ತಲು ಸರ್ಕಾರವೇ ಅವಕಾಶ ನೀಡಿದೆ. ಸಮಸ್ಯೆಗಳನ್ನು ಬಗೆಹರಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಬದಲು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ನೆಪ ಒಡ್ಡಿ ಶಾಲೆಗಳನ್ನು ಮುಚ್ಚುವುದು ಜನಪರ ನಿಲುವೇ? ಶಿಕ್ಷಣದ ಕಡ್ಡಾಯ ಹಕ್ಕು ಕಾಯ್ದೆಯ ಬಗ್ಗೆ ಮಾತಾಡುತ್ತಿರುವ ಸರ್ಕಾರಗಳ ಢೋಂಗಿತನ ಇದರಿಂದ ಮತ್ತೊಮ್ಮೆ ಬಯಲಾಗಿದೆ~ ಎಂದು ಅವರು ಟೀಕಿಸಿದ್ದಾರೆ.`ಸರ್ಕಾರ ಈ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು   ಮತ್ತು ಈ ನೀತಿ ವಿರೋಧಿಸಲು ವಿದ್ಯಾರ್ಥಿಗಳ, ಪೋಷಕರ, ಶಿಕ್ಷಕರ, ಶಿಕ್ಷಣಪರ ಜನರ ಹೋರಾಟ ಸಮಿತಿಗಳನ್ನು ರಚಿಸಿಕೊಂಡು ಚಳವಳಿಗೆ ಸಜ್ಜಾಗಬೇಕು~ ಎಂದು ಅವರು ಮನವಿ ಮಾಡಿದ್ದಾರೆ.ಶಿಕ್ಷಕರ ಸಂಘ ಸ್ವಾಗತ


ಬೆಂಗಳೂರು: ಹತ್ತಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚಿ, ಅವುಗಳನ್ನು ಹೆಚ್ಚು ಮಕ್ಕಳಿರುವ ಸಮೀಪದ ಶಾಲೆಗಳ ಜೊತೆ ವಿಲೀನ ಮಾಡುವ ಸರ್ಕಾರದ ನಿರ್ಧಾರವನ್ನು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ - ಶಿಕ್ಷಕಿಯರ ಸಂಘ ಸ್ವಾಗತಿಸಿದೆ.`ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯುತ್ತದೆ, ವ್ಯಕ್ತಿತ್ವವೂ ವಿಕಾಸ ಹೊಂದುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತೆಗೆದುಕೊಂಡಿರುವ ನಿರ್ಧಾರ ಸಮಂಜಸವಾಗಿದೆ~ ಎಂದು ಸಂಘದ ಅಧ್ಯಕ್ಷೆ ರಮಾದೇವಿ ಅವರು ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.ವೇತನ ಪರಿಷ್ಕರಣೆ: ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಪಂಜಾಬ್ ಸರ್ಕಾರದ ಮಾದರಿಯಲ್ಲಿ ವೇತನ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಸಂಘದ ಪದಾಧಿಕಾರಿಗಳು ಆರನೇ ವೇತನ ಸಮಿತಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಶಿಕ್ಷಕಿಯರಿಗೆ ಸಾಮಾಜಿಕ ಭದ್ರತೆ ಕಲ್ಪಿಸಬೇಕು, ವಿಧವೆಯರು, ವಿಚ್ಛೇದಿತ ಮಹಿಳೆಯರು ಸೇವೆಗೆ ಸೇರುವ ಗರಿಷ್ಠ ವಯೋಮಿತಿಯನ್ನು 40 ವರ್ಷಕ್ಕೆ ವಿಸ್ತರಿಸಬೇಕು, ಹೆರಿಗೆ ರಜೆಯನ್ನು ಈಗ ಇರುವ 135 ರಿಂದ 180 ದಿನಗಳಿಗೆ ಹೆಚ್ಚಿಸಬೇಕು ಎಂದು ಕೋರಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry