ಬುಧವಾರ, ಮೇ 18, 2022
23 °C

ಶಾಲೆ ಮುಚ್ಚುವ ನಿರ್ಧಾರ: ಎಐಡಿಎಸ್‌ಓ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರವು 3,174 ಸರ್ಕಾರಿ ಶಾಲೆಗಳನ್ನು ಮುಚ್ಚಿ, ಸಮೀಪದ ಶಾಲೆಗಳಲ್ಲಿ ವಿಲೀನಗೊಳಿಸಲು ಮುಂದಾಗಿರುವ ನಿರ್ಧಾರವನ್ನು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಓ) ತೀವ್ರವಾಗಿ ಖಂಡಿಸಿದೆ.ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ರಾಜ್ಯ ಅಧ್ಯಕ್ಷ ವಿ.ಎನ್. ರಾಜಶೇಖರ್, ಕಾರ್ಯದರ್ಶಿ ಡಾ.ಎನ್.ಪ್ರಮೋದ್, `ಮಕ್ಕಳ ಸಂಖ್ಯೆ ಕಡಿಮೆಯಾಗಿದೆಯೆಂಬ ಸಚಿವರ ಸಮರ್ಥನೆ ಸಮ್ಮತವಲ್ಲ. ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣಗಳನ್ನು ಅರಿತು, ಸರಿಯಾದ ಕ್ರಮ ಕೈಗೊಳ್ಳಬೇಕು.ಜಗತ್ತಿನಾದ್ಯಂತ ಸಾಬೀತಾಗಿರುವ ವಿಷಯವೆಂದರೆ ಶಿಕ್ಷಕ- ವಿದ್ಯಾರ್ಥಿಗಳ ಅನುಪಾತ ಕಡಿಮೆಯಿದ್ದಷ್ಟು ಶಿಕ್ಷಣದ ಗುಣಮಟ್ಟ ಹೆಚ್ಚುವುದು. ಹಾಗಾಗಿ ಶಾಲೆಗಳ ಸಂಖ್ಯೆ ಇನ್ನಷ್ಟು ಹೆಚ್ಚಿಸಬೇಕೇ ಹೊರತು ಮುಚ್ಚುವುದು ಸರಿಯಲ್ಲ~ ಎಂದು ತಿಳಿಸಿದ್ದಾರೆ.`ಸರ್ವ ಶಿಕ್ಷಣ ಅಭಿಯಾನದ ಹೆಸರಿನಲ್ಲಿ ವಿಶ್ವಬ್ಯಾಂಕ್ ಸಾಲದ ಕೋಟ್ಯಂತರ ರೂಪಾಯಿ ಹಣ ಪೋಲಾಗಿದೆಯೇ ಹೊರತು ಶಾಲೆಗಳ ಅಭಿವೃದ್ಧಿ ಮಾತ್ರ ನಗಣ್ಯ. ಅನಿವಾರ್ಯವಾಗಿ ದುಬಾರಿ ಡೊನೇಶನ್ ತೆತ್ತು ಖಾಸಗಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸುವಂತಾಗಿದೆ. ಇನ್ನೊಂದೆಡೆ ನಾಯಿಕೊಡೆಗಳಂತೆ ಖಾಸಗಿ ಶಾಲೆಗಳು ತಲೆ ಎತ್ತಲು ಸರ್ಕಾರವೇ ಅವಕಾಶ ನೀಡಿದೆ.ಸಮಸ್ಯೆಗಳನ್ನು ಬಗೆಹರಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಬದಲು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ನೆಪ ಒಡ್ಡಿ ಶಾಲೆಗಳನ್ನು ಮುಚ್ಚುವುದು ಜನಪರ ನಿಲುವೇ? ಶಿಕ್ಷಣದ ಕಡ್ಡಾಯ ಹಕ್ಕು ಕಾಯ್ದೆಯ ಬಗ್ಗೆ ಮಾತಾಡುತ್ತಿರುವ ಸರ್ಕಾರಗಳ ಢೋಂಗಿತನ ಇದರಿಂದ ಮತ್ತೊಮ್ಮೆ ಬಯಲಾಗಿದೆ~ ಎಂದು ಅವರು ಟೀಕಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.