ಭಾನುವಾರ, ಡಿಸೆಂಬರ್ 8, 2019
23 °C

ಶಾಲೆ ಮೇಲೆ ವಿದ್ಯುತ್ ತಂತಿ: ಮಾತಿನ ಚಕಮಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಲೆ ಮೇಲೆ ವಿದ್ಯುತ್ ತಂತಿ: ಮಾತಿನ ಚಕಮಕಿ

ಪಾಂಡವಪುರ: ತಾಲ್ಲೂಕಿನ ಕೆಲವು ಗ್ರಾಮಗಳ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶವಿರುವುದರಿಂದ ತುರ್ತು ಕ್ರಮಕ್ಕೆ ಒತ್ತಾಯ, ಜಕ್ಕನಹಳ್ಳಿ ಗ್ರಾ.ಪಂ.ನ ಕಟ್ಟಡದ ಶಿಲಾನ್ಯಾಸ ಹಾಗೂ ಉದ್ಪಾಟನಾ ಸಮಾರಂಭದಲ್ಲಿ ಶಿಷ್ಟಾಚಾರ ಉಲ್ಲಂಘನೆ, ಶಾಲಾ-ಕಾಲೇಜು ಕಟ್ಟಡದ ಮೇಲೆ ವಿದ್ಯುತ್ ತಂತಿ ಹಾಯ್ದುಹೋಗಿರುವುದು, ನಿಗದಿತ ಅವಧಿ ಮುಗಿದಿದ್ದರೂ ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರೆ ನೀಡುವುದು..ಇವು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೊಂಡ ಪ್ರಮುಖ ವಿಷಯಗಳು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯು ತಾ.ಪಂ.ಅಧ್ಯಕ್ಷೆ ಮಹಾದೇವಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ತಾಲ್ಲೂಕಿನ ಮಾರ‌್ಮಳ್ಳಿ, ಸಿಂಗಾಪುರ, ನಳ್ಳೇನಹಳ್ಳಿ ಗ್ರಾಮಗಳ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶವಿರುವುದರಿಂದ ಆ ನೀರನ್ನು ಕುಡಿಯದಂತೆ ಪರೀಕ್ಷಾ ಪ್ರಯೋಗಾಲದಿಂದ ವರದಿ ಬಂದಿದೆ. ಈ ಬಗ್ಗೆ ಯಾವ ಕ್ರಮಕೈಗೊಂಡಿದ್ದೀರಿ ಮತ್ತು ಜಕ್ಕನಹಳ್ಳಿ ಗ್ರಾ.ಪಂ.ನ ಭಾರತ ನಿರ್ಮಾಣ ರಾಜೀವ್‌ಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಪಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಅಲ್ಲಿನ ಗ್ರಾ.ಪ.ಅಧ್ಯಕ್ಷರಿಗೆ ವಹಿಸಬೇಕಿತ್ತು ಹಾಗೂ ಶಿಲಾನ್ಯಾಸದಲ್ಲಿ ನಮೂದಿಸಿರುವ ಹೆಸರಿನಲ್ಲಿ ಸರ್ಕಾರದ ಶಿಷ್ಟಾಚಾರ ಗಾಳಿಗೆ ತೂರಲಾಗಿದೆ ಎಂದು ತಾ.ಪಂ.ಸದಸ್ಯ ಎಂ.ಕೆ.ಪುಟ್ಟೇಗೌಡ ವಿಷಯ ಪ್ರಸ್ತಾಪಿಸಿದರು.ಫ್ಲೋರೈಡ್ ಅಂಶ ಹೆಚ್ಚಾಗಿದ್ದು ಕುಡಿಯಲು ನೀರು ಯೋಗ್ಯವಲ್ಲದ ಗ್ರಾಮಗಳಾದ ಮಾರ‌್ಮಳ್ಳಿ, ಸಿಂಗಾಪುರ, ನಳ್ಳೇನಹಳ್ಳಿ ಗ್ರಾಮಗಳಿಗೆ ಶುದ್ಧ ನೀರು ಒದಗಿಸಲು ರೂ. 9.90 ಲಕ್ಷ ವೆಚ್ಚದ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾ ಪಂಚಾಯಿತಿ ಅನುಮೋದನೆ ಕಳುಹಿಸಲಾಗಿದೆ. ಜಕ್ಕನಹಳ್ಳಿ ಗ್ರಾ.ಪಂ.ಕಟ್ಟಡದ ವಿಚಾರದಲ್ಲಿ ಶಿಷ್ಟಾಚಾರ ಎಸಗಿರುವುದು ತಮಗೇನು ತಿಳಿದಿಲ್ಲ ಎಂದು ತಾ.ಪಂ.ಇಒ ವೆಂಕಟೇಶಪ್ಪ ಉತ್ತರಿಸಿದರು.ಶಾಲಾ ಕಾಲೇಜುಗಳ ಕಟ್ಟಡಗಳ ಮೇಲೆ ವಿದ್ಯುತ್ ತಂತಿಗಳು ಹಾದುಹೋಗಿರುವುದರಿಂದ ತುಂಬ ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸಿಕೊಡುವಂತೆ ಬಿಇಒ ಸ್ವಾಮಿ ಸಭೆಗೆ ಕೇಳಿಕೊಂಡರು. ತಕ್ಷಣ ಉತ್ತರಿಸಿದ ಸೆಸ್ಕ್ ಎಇಇ ಪರಮೇಶ್ವರಪ್ಪ, ವಿದ್ಯುತ್ ತಂತಿ ಶಿಫ್ಟಿಂಗ್ ಮಾಡಲು ತಗಲು ವೆಚ್ಚ ಭರಿಸಿದರೆ ಬಗೆಹರಿಸುವುದಾಗಿ ಹೇಳಿದರು.ವಿದ್ಯುತ್ ತಂತಿ ಕಟ್ಟಡಗಳ ಮೇಲೆ ಹಾದು ಹೋಗಬಾರದು ಎಂಬ ಸುಪ್ರೀಂಕೋರ್ಟ್ ನಿರ್ದೇಶನವಿರುವುದರಿಂದ ವೆಚ್ಚ ಭರಿಸಿ ಎಂದು ಕೇಳುವುದು ಸರಿಯಲ್ಲ ಎಂದು ಬಿಇಒಸ್ವಾಮಿ ಉತ್ತರಿಸಿದರೆ, ಎಇಇ ಪರಮೇಶ್ವರಪ್ಪ ವಿದ್ಯುತ್ ತಂತಿ ಬದಲಾವಣೆಗೆ ವೆಚ್ಚ ಭರಿಸಬಾರದು ಎಂದು ಸುಪ್ರೀಂ     ಕೋರ್ಟ್ ತಿಳಿಸಿಲ್ಲ ಎಂದಾಗ ಬಿಇಒ ಸ್ವಾಮಿ ವೆಚ್ಚ ಭರಿಸಬೇಕೆಂದು ಕೂಡ ಹೇಳಿಲ್ಲವಲ್ಲ ಎಂದು ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಿದಂತೆ ತಾ.ಪಂ.ಸದಸ್ಯ ಯಶವಂತ್‌ಕುಮಾರ್ ಮಧ್ಯೆ ಪ್ರವೇಶಿಸಿ ನಿರಂತರ ಜ್ಯೋತಿ ಯೋಜನೆಯಲ್ಲಿ ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಆ ಯೋಜನೆಯ ಹಣದಲ್ಲಿ ವಿದ್ಯುತ್ ತಂತಿ ಶಿಫ್ಟಿಂಗ್ ಕೂಡ ಆಗಲಿ ಎಂದು ಸಲಹೆ ನೀಡಿದ್ದನ್ನು ಸಭೆ ಒಪ್ಪಿಕೊಂಡಿತು.ತಾಲ್ಲೂಕಿನ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಅವಧಿ ಮುಗಿದಿರುವ ಮಾತ್ರೆಗಳನ್ನೆ ರೋಗಿಗಳಿಗೆ ನೀಡುತ್ತಿದ್ದಾರೆ ಎಂದು ಸದಸ್ಯೆ ಲಲಿತಾಆನಂದ ಆರೋಪಿಸಿದರು. ಕೂಡಲೇ ಬಗ್ಗೆ ಕ್ರಮವಹಿಸುವುದಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಸ್.ಡಿ.ಚಂದ್ರಶೇಖರ್ ಭರವಸೆ ನೀಡಿದರು.ತಾ.ಪಂ.ಉಪಾಧ್ಯಕ್ಷ ಪಿ.ಎಸ್.ಶಾಮಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಕೃಷ್ಣ,ಇಒ ಡಾ.ಎಂ.ವೆಂಕಟೇಶಪ್ಪ ಸಭೆಯನ್ನು ನಿರ್ವಹಿಸಿದರು. ತಾ.ಪಂ.ಸದಸ್ಯರು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)