ಭಾನುವಾರ, ನವೆಂಬರ್ 17, 2019
29 °C

ಶಾಲೆ ಮೇಲ್ದರ್ಜೆಗೆ; ಸಂಖ್ಯೆ ಕೆಳದರ್ಜೆಗೆ

Published:
Updated:

ತುಮಕೂರು: ರಾಜ್ಯದ ಹಿರಿಯ ಪ್ರಾಥಮಿಕ ಶಾಲೆಗಳನ್ನು ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಮೇಲ್ದರ್ಜೆಗೇರಿಸಿ, ಅಲ್ಲಿ 8ನೇ ತರಗತಿ ಆರಂಭಿಸಲಾಗುತ್ತಿದೆ. ಆದರೆ ಇಂತಹ ಶಾಲೆಗಳಲ್ಲಿ ಕಲಿಯಲು ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ.ಹೋದ ವರ್ಷವೇ ಯೋಜನೆ ಜಾರಿಗೊಳಿಸಿದ್ದರೂ ಶಾಲೆಗಳಿಗೆ ಸರ್ಕಾರ ಇದುವರೆಗೂ ಮೂಲಸೌಲಭ್ಯ ಕಲ್ಪಿಸಲು ಮುಂದಾಗಿಲ್ಲ. ಹೀಗಾಗಿ ಪೋಷಕರು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಶಾಲೆಗಳಲ್ಲಿ ಪ್ರವೇಶ ಪಡೆಯಲು ಮುಂದಾಗುತ್ತಿಲ್ಲ. ಇದರಿಂದ ಕಳೆದ ವರ್ಷ ಆರಂಭವಾದ ಶೇ 70ರಷ್ಟು ಶಾಲೆಗಳ 8ನೇ ತರಗತಿ ಪ್ರವೇಶದಲ್ಲಿ `ಶೂನ್ಯ~ ಸಂಪಾದನೆಯಾಗಿದೆ.ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 57 ಶಾಲೆಗಳಲ್ಲಿ 8ನೇ ತರಗತಿ ಆರಂಭಿಸಲಾಗಿತ್ತು. ಇದರಲ್ಲಿ 37 ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ. ಅಲ್ಲಿ 7ನೇ ತರಗತಿ ಕಲಿತ ಮಕ್ಕಳು ವರ್ಗಾವಣೆ ಪತ್ರ ಪಡೆದು ಬೇರೆಡೆ ಪ್ರವೇಶ ಪಡೆದಿದ್ದಾರೆ.ತಾಲ್ಲೂಕಿನಲ್ಲಿ ಆರಂಭವಾದ 13 ಶಾಲೆಗಳಲ್ಲಿ 11 ಶಾಲೆಗಳಿಗೆ ಪ್ರವೇಶ ಪ್ರಕ್ರಿಯೆ ನಡೆದಿಲ್ಲ. ಅಲ್ಲದೆ ಈ ಯಾವ ಶಾಲೆಯಲ್ಲಿಯೂ ಇನ್ನೂ ಮೂಲ ಸೌಲಭ್ಯ ಕಲ್ಪಿಸಿಲ್ಲ. ಆದರೂ ಮತ್ತೆ ಈ ವರ್ಷವೂ ಜಿಲ್ಲೆಯ 40 ಶಾಲೆಗಳಲ್ಲಿ 8ನೇ ತರಗತಿ ಆರಂಭಿಸಲಾಗುತ್ತಿದೆ.ಈಗಾಗಲೇ 7ನೇ ತರಗತಿಯಲ್ಲಿ ಕನಿಷ್ಠ 50 ಮಕ್ಕಳಿರುವ ಶಾಲೆಗಳಿಗೆ 8ನೇ ತರಗತಿ ಆರಂಭಿಸಲು ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿದೆ.ಇಂತಹ ಶಾಲೆಗಳಿಗೆ ಕಟ್ಟಡ, ಶಿಕ್ಷಕರು ಸೇರಿದಂತೆ ಯಾವುದೇ ಮೂಲಸೌಲಭ್ಯ ನೀಡಲಾಗಿಲ್ಲ. ಮೊದಲು ತರಗತಿ ಆರಂಭಿಸಿ ನಂತರ ಸರ್ವ ಶಿಕ್ಷಣ ಯೋಜನೆ ಹಣ ಬಳಸಿ ಸೌಲಭ್ಯ ಕಲ್ಪಿಸಲಾಗುವುದು ಎಂಬುದು ಸರ್ಕಾರದ ನಿಲುವು. ಆದರೆ, ಯಾವುದೇ ಸೌಲಭ್ಯವಿಲ್ಲದ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ತಯಾರಿಲ್ಲ.

ನೂತನವಾಗಿ 8ನೇ ತರಗತಿ ಆರಂಭವಾದ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸಬೇಕು. ಈಗಾಗಲೇ ಬಿಇಡಿ ಪದವಿ ಪಡೆದು ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು 8ನೇ ತರಗತಿಗೆ ನಿಯೋಜಿಸಲಾಗುತ್ತಿದೆ. ಅವರಿಗೆ ವೇತನದಲ್ಲಿ ಹೆಚ್ಚಳವಾಗುವುದಿಲ್ಲ.ಅಲ್ಲದೆ ಬಿಎಸ್‌ಸಿ ಬಿಇಡಿ ತರಬೇತಿ ಪಡೆದವರು ಪ್ರಾಥಮಿಕ ಶಾಲೆಯಲ್ಲಿ ಲಭ್ಯರಿಲ್ಲ. ಹೀಗಾಗಿ ಪ್ರೌಢ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನು ಇಲ್ಲಿಗೆ ನಿಯೋಜಿಸಬೇಕು. ಪ್ರೌಢಶಾಲಾ ಶಿಕ್ಷಕರು ತಮಗಿಂತ ಕಡಿಮೆ ವಿದ್ಯಾರ್ಹತೆಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕರ ಕೈಕೆಳಗೆ ಕೆಲಸ ಮಾಡಲು ಮುಂದಾಗುತ್ತಿಲ್ಲ. ಇದರಿಂದ ಇಂತಹ ಶಾಲೆಗಳಲ್ಲಿ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ಶಿಕ್ಷಕರ ಕೊರತೆ ಇದೆ.ಇಂತಹ ಶಾಲೆಗಳಲ್ಲಿ 8ನೇ ತರಗತಿ ಓದಿದರೆ 9ನೇ ತರಗತಿಗೆ ಉತ್ತಮ ಶಾಲೆಯಲ್ಲಿ ಪ್ರವೇಶ ದೊರೆಯುವುದಿಲ್ಲ ಎಂಬ ಆತಂಕ ಪೋಷಕರಲ್ಲಿದೆ.ಇದರಿಂದ ವರ್ಗಾವಣೆ ಪತ್ರ ಪಡೆಯುವ ಬಗ್ಗೆ ಹೊಸದಾಗಿ 8ನೇ ತರಗತಿ ಆರಂಭವಾಗುವ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಪೋಷಕರ ನಡುವೆ ಕೆಲವೆಡೆ ವಾದ- ವಿವಾದ ಉಂಟಾಗಿದೆ. ವರ್ಗಾವಣೆ ಪತ್ರ ನೀಡದ ಶಾಲಾ ಮುಖ್ಯಸ್ಥರ ವಿರುದ್ಧ ಪೋಷಕರು ಕೆಲವೆಡೆ ಗಲಾಟೆ ಸಹ ನಡೆಸಿದ್ದಾರೆ.

 

ಪ್ರತಿಕ್ರಿಯಿಸಿ (+)