ಶಾಲೆ ಸ್ವಚ್ಛತೆಗಾಗಿ ಸಿಬ್ಬಂದಿ ನಿಯೋಜನೆಗೆ ಆಗ್ರಹ

7

ಶಾಲೆ ಸ್ವಚ್ಛತೆಗಾಗಿ ಸಿಬ್ಬಂದಿ ನಿಯೋಜನೆಗೆ ಆಗ್ರಹ

Published:
Updated:

ಬಾಗಲಕೋಟೆ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳೇ ಸ್ವಚ್ಛತಾ ಕಾರ್ಯ ನಿರ್ವಹಿಸುವುದನ್ನು ತಪ್ಪಿಸಲು, ಪ್ರತೀ ಶಾಲೆಗೊಬ್ಬ ಸ್ವಚ್ಛತಾ ಸಿಬ್ಬಂದಿಯನ್ನು ಸರ್ಕಾರ ನೇಮಕ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಶಾಲಾ ಅಭಿವೃದ್ಧಿ ಮತ್ತು ಮೇಲು ಉಸ್ತುವಾರಿ ಸಮಿತಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ರಾಘವಾಂಕ ಸಂಗಳಕರ ಆಗ್ರಹಿಸಿದರು.ಕರ್ನಾಟಕ ರಾಜ್ಯ ಸರ್ಕಾರಿ ಶಾಲಾ ಅಭಿವೃದ್ಧಿ ಮತ್ತು ಮೇಲು ಉಸ್ತುವಾರಿ ಸಮಿತಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದ ಕಲಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಎಸ್‌ಡಿಎಂಸಿ ಸದಸ್ಯರ ಸಮಾವೇಶದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಬಡ ಮಕ್ಕಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನ ಹೆಚ್ಚಿಸಬೇಕು, ಮಕ್ಕಳು ಕಡಿಮೆ ಇರುವ ಶಾಲೆಯ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರು ಎಂದು ಬೇರೆ ಶಾಲೆಗೆ ನಿಯೋಜಿಸುವುದನ್ನು ಕೈಬಿಡಬೇಕು ಎಂದರು.ಶಾಲೆಯಲ್ಲಿ ಆದಾಯ ಪ್ರಮಾಣ ಪತ್ರ ಕೋರುತ್ತಿರುವುದನ್ನು ರದ್ದುಪಡಿಸಬೇಕು ಎಂದ ಅವರು, ರಾಜ್ಯದ ಅತ್ಯುತ್ತಮ ಎಸ್‌ಡಿಎಂಸಿ ಅಧ್ಯಕ್ಷರನ್ನು ಶಿಕ್ಷಣ ಇಲಾಖೆ ಗುರುತಿಸಿ ಗೌರವಿಸಬೇಕು ಎಂದು ಹೇಳಿದರು.ಸಂಘವು ಶಿಕ್ಷಣಕ್ಕೆ ಸಂಬಂಧಪಟ್ಟಂತೆ ತರಲು ಯೋಜಿಸಿರುವ `ಶೈಕ್ಷಣಿಕ ಸಾಕ್ಷ್ಯಚಿತ್ರ~ಕ್ಕೆ ಸರ್ಕಾರ ನೆರವು ನೀಡಬೇಕು ಎಂದು ಮನವಿ ಮಾಡಿದರು.ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಎಂ.ಮಡಿವಾಳರ, ಹಿಂದಿಗಿಂತ ಇಂದು ಶಾಲೆಗಳಿಗೆ ಸರ್ಕಾರ ಸಾಕಷ್ಟು ಮೂಲಸೌಲಭ್ಯ ಕಲ್ಪಿಸಿದೆ. ಇನ್ನೂ ಹಲವು ಸೌಲಭ್ಯಗಳ ಅಗತ್ಯವಿದೆ ಎಂದರು.ಶಾಲೆಯ ಅಭಿವೃದ್ಧಿಯಲ್ಲಿ ಸಮುದಾಯ ಮತ್ತು ಪಾಲಕರ ಪಾತ್ರ ಮಹತ್ವದ್ದಾಗಿದೆ. ಸಮಾಜ ಶಿಕ್ಷಕನಿಗೆ ಎಂದಿಗೂ ಋಣಿಯಾಗಿ ಇರಬೇಕು ಎಂದರು.ಪ್ರಶಸ್ತಿ ಪ್ರದಾನ: ಸಮಾವೇಶದಲ್ಲಿ 11 ಮಂದಿಗೆ ರಾಜ್ಯಮಟ್ಟದ ಅತ್ಯುತ್ತಮ ಎಸ್‌ಡಿಎಂಸಿ ಅಧ್ಯಕ್ಷ ಪ್ರಶಸ್ತಿ, 40 ಮಂದಿಗೆ ಅತ್ಯುತ್ತಮ ಶಿಕ್ಷಕ  ಮತ್ತು18 ಮಂದಿಗೆ ಅತ್ಯುತ್ತಮ ಮುಖ್ಯೋಪಾಧ್ಯಾಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಸಮಾವೇಶದ ಸಾನ್ನಿಧ್ಯ ವಹಿಸಿದ್ದ ಸೀಮಿಕೇರಿ ರಾಮಾರೂಢಮಠದ ಪರಮರಾಮಾರೂಢ ಸ್ವಾಮೀಜಿ, ಕೇರಳದ ಗುರುವಾಯೂರು ಸೈಯದ್ ಮೊಹಮ್ಮದ್ ಹಾಸೀಂ ಸಾಹೇಬ್ ಅವರು `ಸಾಕ್ಷರತಾ ಜ್ಯೋತಿ~ ಕವನ ಸಂಕಲನ ಬಿಡುಗಡೆ ಮಾಡಿದರು.ಸಂಘದ ಬಾಗಲಕೋಟೆ ಘಟಕದ ಅಧ್ಯಕ್ಷ ಪ್ರಹ್ಲಾದ ಬೊಯಿ, ವೈ.ಬಿ.ಮಠದ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ವಿ.ಜಿ. ಮಠಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಸೋಮಶೇಖರ ಎಂ.ವಾಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ.ಕುಂದರಗಿ, ಬಾಗಲಕೋಟೆ ತಾ.ಪಂ. ಇಒ ಡಿ.ಎಸ್. ಹವಾಲ್ದಾರ, ಚಲನಚಿತ್ರ ನಟ ರೋಹಿತ ನಾಗೇಶ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry