ಶುಕ್ರವಾರ, ಜೂನ್ 25, 2021
21 °C

ಶಾಲ್ಮಲಾ ಕಣಿವೆ ರಕ್ಷಣೆಗೆ ಬೃಹತ್‌ ಸಮಾವೇಶ 13ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಪಶ್ಚಿಮಘಟ್ಟದಲ್ಲಿ ಕಿರು ಜಲವಿದ್ಯುತ್‌ ಯೋಜನೆ ಪ್ರಸ್ತಾವ ವಿರೋಧಿಸಿ ಹಾಗೂ ಶಾಲ್ಮಲಾ ಕಣಿವೆ ರಕ್ಷಣೆಗೆ ಆಗ್ರಹಿಸಿ ಇದೇ 13ರ ಮಧ್ಯಾಹ್ನ 3 ಗಂಟೆಗೆ ತಾಲ್ಲೂಕಿನ ಗಣೇಶಪಾಲ್‌ನಲ್ಲಿ ಬೃಹತ್‌ ಜನಜಾಗೃತಿ ಸಮಾವೇಶ ಆಯೋಜಿಸಲಾಗಿದೆ.ಶಾಲ್ಮಲಾ ಕಣಿವೆ ಸಂರಕ್ಷಣಾ ಸಮಿತಿಯ ವಿ.ಆರ್‌.ಹೆಗಡೆ ಮಣ್ಮನೆ ಹಾಗೂ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಸೋದೆ ವಾದಿರಾಜ ಮಠದ ವಿಶ್ವವಲ್ಲಭತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಪಶ್ಚಿಮಘಟ್ಟ ಉಳಿಸಿ ಆಂದೋಲನದ ಪ್ರಮುಖ ಬಿ.ಎಂ.ಕುಮಾರಸ್ವಾಮಿ, ಪಶ್ಚಿಮಘಟ್ಟ ರಕ್ಷಣೆಯ ವಕೀಲರ ವೇದಿಕೆ ಸಂಚಾಲಕ ಶಂಕರ ಭಟ್ಟ ಬೆಂಗಳೂರು, ಸ್ಥಳೀಯ ಶಾಸಕರು, ಸಂಸದರು, ಎಲ್ಲ ಸ್ತರದ ಜನಪ್ರತಿನಿಧಿಗಳು, ಸಂಘ–ಸಂಸ್ಥೆಗಳು, ಸಮಾಜದ ಪ್ರಮುಖರನ್ನು ಆಹ್ವಾನಿಸಲಾಗಿದೆ’ ಎಂದರು.‘ತಾಲ್ಲೂಕಿನಲ್ಲಿ ಹರಿಯುವ ಶಾಲ್ಮಲಾ ನದಿಗೆ ಗಣೇಶಪಾಲ್‌ನಲ್ಲಿ , ಪಟ್ಟಣದ ಹೊಳೆಗೆ ನರ್ಸಗಲ್ಲು ಹಾಗೂ  ಬಿಳೆಹೊಳೆಗೆ ಮುಸ್ಕಿಯಲ್ಲಿ ಕಿರು ಜಲವಿದ್ಯುತ್ ಯೋಜನೆ ನಿರ್ಮಾಣ ಮಾಡಲು ರಾಜ್ಯ ಇಂಧನ ಇಲಾಖೆ ಖಾಸಗಿ ಕಂಪೆನಿಗಳಿಗೆ ಆರಂಭಿಕ ಮಂಜೂರು ನೀಡಿದೆ.ಅರಣ್ಯ ಪರಿಸರ ಇಲಾಖೆಯಿಂದ ಅನುಮತಿ ದೊರೆತಿಲ್ಲವಾದರೂ ಖಾಸಗಿ ಕಂಪೆನಿಗಳು ಒಂದು ವರ್ಷದಿಂದ ಸರ್ವೆ ಮಾಡುವ ಪ್ರಯತ್ನದಲ್ಲಿವೆ. ಈ ಹಿಂದೆ ಸರ್ವೆಗೆ ಬಂದಾಗ ಕೊಡ್ನಗದ್ದೆ ಗ್ರಾಮ ಪಂಚಾಯ್ತಿಯ ಜಡ್ಡಿಗದ್ದೆಯಲ್ಲಿ ಜೂನ್‌ ತಿಂಗಳಿನಲ್ಲಿ ಪ್ರತಿಭಟನೆ  ನಡೆಸಲಾಗಿತ್ತು. ನವೆಂಬರ್‌ನಲ್ಲಿ ಭೂಮಾಪನ ನಡೆಸಲು ಬಂದಾಗ ಸ್ಥಳೀಯರು ಸರ್ವೆಗೆ ತಡೆಯೊಡ್ಡಿದ್ದರು. ಆದರೂ ಖಾಸಗಿ ಕಂಪೆನಿಗಳು ಸರ್ವೆ ನಡೆಸುವ ಕಾರ್ಯದಿಂದ ಹಿಂದೆ ಸರಿದಿಲ್ಲ’ ಎಂದರು.‘ಈ ಹಿನ್ನೆಲೆಯಲ್ಲಿ ಶಾಲ್ಮಲಾ ತೀರದ ಹಳ್ಳಿಗಳ ಜನರು ಸಭೆ ಸೇರಿ ಶಾಲ್ಮಲಾ ಕಣಿವೆ ಸಂರಕ್ಷಣಾ ಸಮಿತಿ ರಚಿಸಿಕೊಂಡಿದ್ದಾರೆ. ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷ ಸ್ವರ್ಣವಲ್ಲಿ ಶ್ರೀಗಳು ಮಾರ್ಗದರ್ಶನದಲ್ಲಿ ಸಮಿತಿ ಪ್ರಸ್ತುತ ಸಮಾವೇಶ ಹಮ್ಮಿಕೊಂಡಿದೆ. ಜಲವಿದ್ಯುತ್‌ ಯೋಜನೆ ಅನುಷ್ಠಾನಗೊಂಡರೆ ರೈತರ ಜಮೀನು ಮುಳುಗಡೆ, ಜೀವ ವೈವಿಧ್ಯ, ಅರಣ್ಯ ನಾಶ ಉಂಟಾಗುತ್ತದೆ. ಇಂತಹ ಪರಿಸರ ಮಾರಕ ಯೋಜನೆ ವಿರೋಧಿಸಲು ಕೊಡ್ನಗದ್ದೆ, ವಾನಳ್ಳಿ, ಹುಲೇಕಲ್‌, ಸೋಂದಾ, ಸಾಲ್ಕಣಿ, ಹಿತ್ಲಳ್ಳಿ, ಉಮ್ಮಚಗಿ, ಭೈರುಂಬೆ ಪ್ರದೇಶದ ಶಾಲ್ಮಲಾ ಕಣಿವೆ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಬೇಕು’ ಎಂದು ಅವರು ವಿನಂತಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶಾಲ್ಮಲಾ ಕಣಿವೆ ಸಂರಕ್ಷಣಾ ಸಮಿತಿಯ ಎಂ.ಎನ್.ಭಟ್ಟ, ಜಿ.ಆರ್. ಭಟ್ಟ, ಎನ್.ಎಸ್. ಹೆಗಡೆ, ರಮಾನಂದ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.