ಶಾಶ್ವತ ಕುಡಿಯುವ ನೀರಿನ ಯೋಜನೆ: ಜಗದೀಶ್ ಶೆಟ್ಟರ್ ಭರವಸೆ

7

ಶಾಶ್ವತ ಕುಡಿಯುವ ನೀರಿನ ಯೋಜನೆ: ಜಗದೀಶ್ ಶೆಟ್ಟರ್ ಭರವಸೆ

Published:
Updated:

ನೆಲಮಂಗಲ: ಪಟ್ಟಣಕ್ಕೆ ಶೀಘ್ರ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ್ ಶೆಟ್ಟರ್ ಬುಧವಾರ ಇಲ್ಲಿ ಭರವಸೆ ನೀಡಿದರು.

ಸ್ಥಳೀಯ ಚಿಕ್ಕೆಲ್ಲಪ್ಪ ಸಮುದಾಯ ಭವನದಲ್ಲಿ ನಡೆದ ಉದ್ಯೋಗ ಖಾತರಿ ಯೋಜನೆಯ ಇಎಫ್‌ಎಂಎಸ್ ತಂತ್ರಾಂಶ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತಂತ್ರಾಂಶದ ಪ್ರಥಮ ಪ್ರಯೋಗಕ್ಕೆ ನೆಲಮಂಗಲವನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಪ್ರತಿ ತಾಲ್ಲೂಕು ಪಂಚಾಯಿತಿಗೆ 2 ಕೋಟಿ ರೂಪಾಯಿ ಅನುದಾನ ನೀಡಿ ಗ್ರಾಮಗಳ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. 3,300 ಗ್ರಾಮಗಳಲ್ಲಿ ಸುವರ್ಣ ಗ್ರಾಮ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದರು.

ತಂತ್ರಾಂಶದ ಕಿರು ಹೊತ್ತಿಗೆ ಬಿಡುಗಡೆ ಮಾಡಿದ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಇನ್ನು ಮುಂದೆ ಕೂಲಿ ಕಾರ್ಮಿಕರಿಗೆ ವಿಳಂಬ ಮಾಡದೆ ಅವರ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ಹಣ ಜಮೆ ಮಾಡುವುದರಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬಹುದಾಗಿದೆ ಎಂದರು.

ಶಾಸಕ ಎಂ.ವಿ.ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಈ.ಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯೆ ಸುನಂದಾ ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿನಾರಾಯಣ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆನಂದ್, ತಹಶೀಲ್ದಾರ್ ಅನಿಲ್ ಕುಮಾರ್, ಬಿಜೆಪಿ ಮುಖಂಡ ಭವಾನಿ ಶಂಕರ್ ಬೈರೇಗೌಡ ವೇದಿಕೆಯಲ್ಲಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಟ್ಟಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯೋಗ ಖಾತರಿ ಯೋಜನೆಯ ನಿರ್ದೇಶಕ ಶಿವಶಂಕರ್ ಯೋಜನೆಯ ವಿವರ ನೀಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry