ಶಾಶ್ವತ ಕುಡಿಯುವ ನೀರು ಜಾರಿ

7

ಶಾಶ್ವತ ಕುಡಿಯುವ ನೀರು ಜಾರಿ

Published:
Updated:

ಬೆಂಗಳೂರು: ತೀವ್ರ ನೀರಿನ ಅಭಾವ ಎದುರಿಸುತ್ತಿರುವ ಬೆಂ. ಗ್ರಾಮಾಂತರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರು ಯೋಜನೆಯನ್ನು ಜಾರಿಗೊಳಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿದರು.ನಗರದಲ್ಲಿ ಶನಿವಾರ ನಡೆದ ಚುನಾವಣೆ ನಂತರದ ಪ್ರಥಮ ಸರ್ವಸದಸ್ಯರ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಕೃಷ್ಣಪ್ಪ ಅವರು ಮಾತನಾಡಿ,‘ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಯುವುದನ್ನು ನಿರ್ಬಂಧಿಸಿರುವುದರಿಂದ ನೀರಿನ ಅಭಾವ ಹೆಚ್ಚಿದೆ. ಆದರೆ ಅಂತರ್ಜಲದ ಬಳಕೆ ಕಡಿಮೆಯಾಗಿಲ್ಲ. ಇದರಿಂದಾಗಿ ಅಸ್ತಿತ್ವದಲ್ಲಿರುವ ಬೋರ್‌ವೆಲ್‌ಗಳಲ್ಲಿ ನೀರು ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೊಳವೆ ಬಾವಿ ಕೊರೆಯುವುದರ ಮೇಲಿನ ನಿರ್ಬಂಧವನ್ನು ಕೂಡಲೇ ತೆರವುಗೊಳಿಸಬೇಕು’ ಎಂದು ಆಗ್ರಹಿಸಿದರು.ಇದಕ್ಕೆ ಬೆಂಬಲ ಸೂಚಿಸಿದ ಬಿಜೆಪಿಯ ರಾಜಣ್ಣ ಹಾಗೂ ನಾರಾಯಣ ಸ್ವಾಮಿ ‘ಕುಡಿಯುವ ನೀರಿನ ಸಮಸ್ಯೆ ಬಹು ಹಿಂದಿನಿಂದಲೂ ಜಿಲ್ಲೆಯನ್ನು ಕಾಡುತ್ತಿದೆ. ಅಂತರ್ಜಲ ವೃದ್ಧಿಗಾಗಿ ಕೇಂದ್ರದಿಂದ ಸಾಕಷ್ಟು ಪ್ರಮಾಣದಲ್ಲಿ ಅನುದಾನ ದೊರೆಯುತ್ತಿದೆ.ಆದರೂ ಬೋರ್‌ವೆಲ್‌ಗಳ ಮೇಲಿನ ವಿಪರೀತ ಅವಲಂಬನೆಯಿಂದಾಗಿ ನೀರಿನ ಕೊರತೆ ನೀಗುವುದು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.‘ಜಿಲ್ಲೆಯಲ್ಲಿ 128 ಬೋರ್‌ವೆಲ್‌ಗಳನ್ನು ಕೊರೆಯಲಾಗಿದ್ದರೂ ಅಧಿಕಾರಿಗಳು ಅವುಗಳಿಗೆ ಪಂಪ್‌ಸೆಟ್ ಅಳವಡಿಸದೇ ಇರುವುದರಿಂದ ನೀರಿನ ಸಮರ್ಪಕ ಬಳಕೆಯಾಗಿಲ್ಲ. ಒಂದು ವರ್ಷ ಕೊಳವೆ ಬಾವಿಗಳಿಗೆ ಪಂಪ್‌ಸೆಟ್ ಅಳವಡಿಸದೇ ಇರುವುದರಿಂದ ಅವುಗಳಲ್ಲಿ ನೀರು ಉಳಿದಿದೆಯೇ ಎಂಬುದೂ ಖಾತ್ರಿಯಾಗಿಲ್ಲ. ಇನ್ನು ರೂ 624.89 ಲಕ್ಷಗಳನ್ನು ಅನುದಾನವಾಗಿ ನೀಡಿದರೆ ಅದರ ಸದ್ಭಳಕೆಯಾಗುತ್ತದೆಯೇ’ ಎಂದು ಅವರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

  ಸದಸ್ಯ  ಹನುಮಂತೇಗೌಡ ಮಾತನಾಡಿ ‘ಎಲ್ಲಿ ತುರ್ತು ಅವಶ್ಯಕತೆ ಇದೆಯೋ ಅಲ್ಲಿ ಬೋರ್‌ವೆಲ್ ಕೊರೆಯಬೇಕಿದೆ. ಅಲ್ಲದೇ ಈ ಬಗ್ಗೆ ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ನಡೆಸಬೇಕಿರುವ ಉದ್ದೇಶದಿಂದ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕಿದೆ’ ಎಂದು ಸೂಚಿಸಿದರು. ಗುಣಮಟ್ಟ: ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಅಂಗನವಾಡಿ ಕೇಂದ್ರಗಳ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿರುವ ಬಗ್ಗೆ ಜೆಡಿಎಸ್ ಸದಸ್ಯ ಎಂ.ಎನ್.ರಾಂ ಆಕ್ಷೇಪಿಸಿದರು.  ‘ನಿರ್ಮಿತಿ ಕೇಂದ್ರಗಳು ಸರಿಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕೆ ತುಮಕೂರು ಜಿಲ್ಲೆಯಲ್ಲಿ ಅವುಗಳನ್ನು ನಿರ್ಬಂಧಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ ಇಲ್ಲಿ ನಿರ್ಮಿತಿ ಕೇಂದ್ರಗಳಿಗೆ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕೊಡುವುದರಲ್ಲಿ ಅರ್ಥವಿಲ್ಲ’ ಎಂದು ಹೇಳಿದರು.ಜಿಲ್ಲಾ ಪಂಚಯ್ತಿ ವ್ಯಾಪ್ತಿಯಲ್ಲಿಯೇ ಎಂಜಿನಿಯರಿಂಗ್ ವಿಭಾಗ ಇರುವುದರಿಂದ ನಿರ್ಮಿತಿ ಕೇಂದ್ರಕ್ಕೆ ಹಣ ವಿನಿಯೋಗಿಸುವ ಅವಶ್ಯಕತೆ ಇದೆಯೇ ಎಂದು ಸದಸ್ಯರು ಪ್ರಶ್ನಿಸಿದರು. ಆದರೆ ಕಟ್ಟಡ ನಿರ್ಮಾಣವಾಗದಿದ್ದರೆ ಹಣ ಸರ್ಕಾರಕ್ಕೆ ಮರಳುವ ಸಾಧ್ಯತೆ ಇರುವುದರಿಂದ ನಿರ್ಮಿತಿ ಕೇಂದ್ರಗಳ ಕಾಮಗಾರಿ ಗುಣಮಟ್ಟ ಕಾಪಾಡಿಕೊಳ್ಳಲು ನಿರ್ಧರಿಸಲಾಯಿತು. ನೂತನ ಶಾಲಾ ಕಟ್ಟಡಗಳನ್ನು ನಿರ್ಮಿಸುವಾಗ ವರ್ಟಿಫೈಡ್ ಕಲ್ಲುಗಳನ್ನು ನೆಲಗಳಿಗೆ ಹಾಸಬಾರದು. ಅವು ಸೂಕ್ಷ್ಮವಾಗಿರುವುದರಿಂದ ಬೇಗನೆ ಹಾಳಾಗುತ್ತವೆ. ಅಲ್ಲದೇ ಮಕ್ಕಳು ಜಾರಿ ಬೀಳುವ ಸಾಧ್ಯತೆ ಇರುತ್ತದೆ. ಬದಲಿಗೆ ಕಡಪ ಕಲ್ಲು ಅಥವಾ ರೆಡ್ ಆಕ್ಸೈಡ್ ಲೇಪಿತ ನೆಲಹಾಸನ್ನು ಬಳಸುವಂತೆ ಸದಸ್ಯರು ಸೂಚಿಸಿದರು.ತಾಲೂಕು ಮಟ್ಟದ ಆಸ್ಪತ್ರೆಗಳಿಗೆ ಕ್ಷಕಿರಣ ಫಿಲಂಗಳ ಖರೀದಿಸುವಾಗ ಟೆಂಡರ್ ಪ್ರಕ್ರಿಯೆ ಅನುಸರಿಸಿ ಪಾರದರ್ಶಕತೆ ಕಾಯ್ದಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು. ಚಿತ್ರೀಕರಣ ಬೇಡ:  ‘ಜೋಗಯ್ಯ’ ಚಿತ್ರದ ಚಿತ್ರೀಕರಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸಭಾಂಗಣವನ್ನು ಬಾಡಿಗೆಗೆ ನೀಡುವ ಕುರಿತು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿಂದೆ ಸಭಾಂಗಣವನ್ನು ಬಾಡಿಗೆಗೆ ಪಡೆದವರು ಅನೇಕ ಬಾರಿ ಇಲ್ಲಿನ ಕೆಲವು ಮೂಲಸೌಕರ್ಯ  ವ್ಯವಸ್ಥೆಯನ್ನು ಹಾಳುಗೆಡವಿದ್ದಾರೆ. ಅಲ್ಲದೇ ಬಾಡಿಗೆ ಹಣದಿಂದ ಜಿಲ್ಲಾ ಪಂಚಾಯ್ತಿ ನಡೆಯಬೇಕಾದ ಅವಶ್ಯಕತೆಯಿಲ್ಲದಿರುವುದರಿಂದ ಇನ್ನು ಮುಂದೆ ಬಾಡಿಗೆ ನೀಡುವ ಪ್ರಸ್ತಾವವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಶಾಂತಮ್ಮ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬಿ.ಸಿ. ಚಂದ್ರಶೇಖರ್ ಉಪಸ್ಥಿತರಿದ್ದರು.ಮೈಕ್ ಸಮಸ್ಯೆಗೆ ಕಿಡಿ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೂಕ್ತ ಮೈಕ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪದೇ ಪದೇ ಮೈಕ್ ದುರಸ್ತಿಗೆ ಒತ್ತಾಯಿಸಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹವಾ ನಿಯಂತ್ರಣ ವ್ಯವಸ್ಥೆ ಹಾಗೂ ಮೈಕ್ ದುರಸ್ತಿಗಾಗಿ ರೂ 20 ಲಕ್ಷ ಬಿಡುಗಡೆ ಮಾಡಿಕೊಂಡ ಅಧಿಕಾರಿಗಳು ಮೈಕ್ ದುರಸ್ತಿ ಕಾರ್ಯಸಮರ್ಪಕವಾಗಿ ನಿರ್ವಹಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಅನೇಕ ಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರೂ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದರು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry