ಭಾನುವಾರ, ಮೇ 9, 2021
18 °C

ಶಾಶ್ವತ ದುರಸ್ತಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ಸಿಂಧನೂರು-ಬಪ್ಪೂರು ರಸ್ತೆ ತೀವ್ರ ಹದಗೆಟ್ಟು ರಸ್ತೆ ಸಂಚಾರಕ್ಕೆ ತೊಂದರೆಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯನ್ನು ಶಾಶ್ವತ ದುರಸ್ತಿಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸುವ ನಿರ್ಧಾರವನ್ನು ಬಪ್ಪೂರು ರಸ್ತೆ ದುರಸ್ತಿ ಹೋರಾಟ ಸಮಿತಿ ಕೈಗೊಂಡಿತು.ತಾಲ್ಲೂಕಿನ ತಿಡಿಗೋಳ ವಿಶ್ವನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ವಿಶೇಷ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.ಸಭೆಯನ್ನುದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಭೀಮರಾವ್, ಸೆಪ್ಟಂಬರ್ 22ರಂದು ಗುಡಿಹಾಳ ಗ್ರಾಮಕ್ಕೆ ಮುಖ್ಯಮಂತ್ರಿ ಸದಾನಂದಗೌಡ ಆಗಮಿಸುತ್ತಿದ್ದು, ಆ ವೇಳೆ ಸಿಂಧನೂರಿನಿಂದ ಬಪ್ಪೂರುವರೆಗಿನ 22ಕಿ.ಮೀ. ರಸ್ತೆಯನ್ನು ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.ಈ ಭಾಗದ ಒಟ್ಟು 50ಸಾವಿರ ಎಕರೆ ಪ್ರದೇಶದಲ್ಲಿ ಸುಮಾರು 200ಕೋಟಿ ರೂಪಾಯಿಗೂ ಅಧಿಕ ಆಹಾರಧಾನ್ಯ ಬೆಳೆಯಲಾಗುತ್ತಿದೆ. ಹೆಚ್ಚಿನ ತೆರೆಗೆ ನೀಡಲಾಗುತ್ತಿದೆ. ಆದರೆ ರಸ್ತೆ ಸುಧಾರಣೆಗೆ ಆಡಳಿತ ಮಂಡಳಿ ವಿಫಲವಾಗಿದ್ದು, ದಾಸ್ತಾನುಗಳನ್ನು ನಗರ ಪ್ರದೇಶಕ್ಕೆ ಸಾಗಿಸಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಈ ಹಿಂದೆ ಮಾಡಲಾದ ರಸ್ತೆ ದುರಸ್ತಿ ಗುಣಮಟ್ಟದಿಂದ ಆಗಿಲ್ಲ ಎನ್ನುವುದಕ್ಕೆ ಈಗಿನ ಹಾಳಾದ ರಸ್ತೆಯೇ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದರು.ಸಮಿತಿಯ ಪಿ.ಬಸವರಾಜ ಕುರುಕುಂದಿ ಮಾತನಾಡಿ, ಅಲ್ಪ ಮೊತ್ತದ ಹಣದಿಂದ ಬಪ್ಪೂರು ರಸ್ತೆ ಡಾಂಬರೀಕರಣ ಸಾಧ್ಯವಿಲ್ಲ. ತೀವ್ರ ಹದಗೆಟ್ಟಿರುವ ಈ ರಸ್ತೆಗೆ ತೇಪೆ ಹಾಕುತ್ತಾ ಬರಲಾಗುತ್ತಿದ್ದು, ಶಾಶ್ವತ ರಸ್ತೆ ದುರಸ್ತಿ ಹೋರಾಟಕ್ಕೆ ಈ ಭಾಗದ ಎಲ್ಲಾ ಗ್ರಾಮಗಳ ರೈತರು, ನಾಗರಿಕರು ಸಹಕಾರ ನೀಡಬೇಕು ಅಂದಾಗ ಬೇಡಿಕೆ ಈಡೇರುತ್ತದೆ ಎಂದರು.ದೊಡ್ಡನಗೌಡ ಹೊಸಮನಿ ಮತ್ತು ಮಲ್ಲನಗೌಡ ಗೀತಾಕ್ಯಾಂಪ್ ಮಾತನಾಡಿ, ಕೇವಲ ರಸ್ತೆ ಸುಧಾರಣೆಯ ಬಗ್ಗೆ ಚಿಂತಿಸುವುದು ಉಚಿತವಲ್ಲ. ಈ ಮಾರ್ಗದಲ್ಲಿ ಬರುವ ಸೇತುವೆಗಳ ದುರಸ್ತಿ ಕಾರ್ಯವೂ ನಡೆಯಬೇಕಿದೆ ಎಂದರು.ಎಪಿಎಂಸಿ ನಿರ್ದೇಶಕ ಗೌಡಪ್ಪಗೌಡ ಗುಂಜಳ್ಳಿ, ಮಲ್ಲೇಶಪ್ಪ ಕುರಿ, ಅಮರೇಗೌಡ ಸಂಜಿ, ಈಶಪ್ಪ ಸಾಹುಕಾರ, ಶರಣಪ್ಪ ಕಾಸರೆಡ್ಡಿ, ಶರಣಪ್ಪ ಜಿನ್ನಿಂಗ್, ತಿಮ್ಮಣ್ಣ ಸಾಹುಕಾರ, ಆದನಗೌಡ ಗುಡದೂರು, ಹನುಮಂತಪ್ಪ, ಅಮರೇಶ ನಿಡಿಗೋಳ, ಪಂಪನಗೌಡ ಬೊಮ್ಮನಾಳ, ಸಿದ್ಧನಗೌಡ ಮಾಟೂರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.