`ಶಾಶ್ವತ ನೀರಾವರಿಯೇ ಪರಿಹಾರ'

7

`ಶಾಶ್ವತ ನೀರಾವರಿಯೇ ಪರಿಹಾರ'

Published:
Updated:

ಗುಡಿಬಂಡೆ:  ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ನೀರಿನ ಬವಣೆ ನೀಗಿಸಲು ಶಾಶ್ವತ ನೀರಾವರಿ ಯೋಜನೆಗಳನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.ಪಟ್ಟಣದಲ್ಲಿ ಸೋಮವಾರ ನಡೆದ ತಾಲ್ಲೂಕು ರೈತ ಸಮಾವೇಶದಲ್ಲಿ ಮಾತನಾಡಿ, ಈ ಭಾಗದ ರೈತರು ಹನಿ ನೀರಿಗೂ ಪರದಾಡುತ್ತಿದ್ದಾರೆ. ಬಯಲು ಸೀಮೆಯ ಜಿಲ್ಲೆಗಳ ರೈತರ ಹಿತದೃಷ್ಟಿಯಿಂದ ಪರಮಶಿವಯ್ಯ ಅವರು ರೂಪಿಸಿರುವ ಯೋಜನೆ ಜಾರಿಗೊಳಿಸಬೇಕು. ಇದರಿಂದ ಬಯಲು ಸೀಮೆಯ 8299 ಕೆರೆಗಳಿಗೆ ನೀರು ದೊರೆಯಲಿದೆ ಎಂದರು.ಎತ್ತಿನಹೊಳೆ ಯೋಜನೆಯಿಂದ ಸ್ಥಳೀಯ ರೈತರಿಗೆ ಯಾವುದೇ ಅನುಕೂಲವಿಲ್ಲ. ಅದು ಕೇವಲ ಮಾಹಿತಿ ತಂತ್ರಜ್ಞಾನ ಬಂಡವಾಳ ಹೂಡಿಕೆ ವಲಯಕ್ಕೆ (ಐಟಿಐಆರ್) ನೀರು ಪೂರೈಸಲು ಸೀಮಿತವಾಗಿದೆ ಎಂದು ಟೀಕಿಸಿದರು.

ಎತ್ತಿನಹೊಳೆ ಯೋಜನೆಯಲ್ಲಿ ಅವಳಿ ಜಿಲ್ಲೆಗಳಿಗೆ ಸಿಗುವ ನೀರಿನ ಪಾಲು ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.ಬಯಲುಸೀಮೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲು ಆಗ್ರಹಿಸಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿವೆ. ಈ ಭಾಗಕ್ಕೆ ಡಾ.ಪರಮಶಿವಯ್ಯ ಮೊದಲ ಹಂತದ ಯೋಜನೆಯೇ ಸೂಕ್ತವೆಂದು ಹೋರಾಟಗಾರರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಆದರೆ ಈಗ ಎತ್ತಿನಹೊಳೆ ಯೋಜನೆ ಮುಂದಿಟ್ಟುಕೊಂಡು ಮೂಲ ಯೋಜನೆ ಜಾರಿಗೆ ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ಟೀಕಿಸಿದರು.ಎತ್ತಿನಹೊಳೆ ಯೋಜನೆಗೆ ಅಕ್ಟೋಬರ್ 15ರಂದು ಸರ್ಕಾರ ಶಂಕುಸ್ಥಾಪನೆ ಮಾಡಲಿದೆ ಎಂದು ತಿಳಿದುಬಂದಿದೆ.  ಕಾರ್ಯಕ್ರಮಕ್ಕೆ ರೈತಸಂಘವು ವಿರೋಧ ವ್ಯಕ್ತಪಡಿಸಲಿದೆ ಎಂದರು.ಕೇವಲ ಅನ್ನಭಾಗ್ಯ ಯೋಜನೆ ಜಾರಿಗೊಳಿಸುವುದರಿಂದ ಬಡತನ ನಿರ್ಮೂಲನೆಗೊಳ್ಳುವುದಿಲ್ಲ. ಬಡತನ ನಿರ್ಮೂಲನೆಯಾಗಲು ಗ್ರಾಮೀಣಾಭಿವೃದ್ಧಿಗೆ ಶೇ 75ರಷ್ಟು ಅನುದಾನ ಒದಗಿಸಬೇಕು. ಸರ್ಕಾರ ಕೇವಲ ಶೇ 8ರಷ್ಟು ಅನುದಾನವನ್ನು ಮಾತ್ರ ನೀಡುತ್ತಿದೆ. ತನ್ನ ಲೋಪ ಮುಚ್ಚಿಟ್ಟುಕೊಳ್ಳಲು ಅನ್ನಭಾಗ್ಯ, ಕ್ಷೀರಭಾಗ್ಯದಂಥ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ರಾಜ್ಯ ಸರ್ಕಾರವು ಪ್ರತಿವರ್ಷ ನೀರಾವರಿಗಾಗಿ ರೂ 25 ಸಾವಿರ ಕೋಟಿ ಮೀಸಲಿಟ್ಟರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನೀರಿನ ಸಮಸ್ಯೆಯೇ ಇರುವುದಿಲ್ಲ ಎಂದರು.1964ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಹೆಚ್ಚು ಜನರಿಗೆ ಭೂಮಿ ಸಿಗಬೇಕು ಎಂಬ ಉದ್ದೇಶದಿಂದ ಪ್ರತಿ ಕುಟುಂಬಕ್ಕೆ 54 ಎಕರೆ ಭೂ ಮಿತಿ ನಿಗದಿಪಡಿಸಲಾಗಿತ್ತು. ಆದರೆ ಈಗಿನ ತಿದ್ದುಪಡಿ ಅದಕ್ಕೆ ತದ್ವಿರುದ್ಧವಾಗಿದೆ. ಬಹುರಾಷ್ಟ್ರೀಯ ಕಂಪೆನಿಗಳನ್ನು ಕೃಷಿ ಆಧಾರಿತ ಕೈಗಾರಿಕೆಗಳೆಂದು ಪರಿಗಣಿಸಲು ಮುಂದಾಗಿದೆ. ಇದು ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರ ಎಂದು ಟೀಕಿಸಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯದರ್ಶಿ ಎಚ್.ಆರ್.ಬಸವರಾಜು, ಉಪಾಧ್ಯಕ್ಷ ವೆಂಕಟನಾರಾಯಣಪ್ಪ, ರೈತ ಸಂಘದ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಬಿ.ನಾರಾಯಣಪ್ಪ, ಮಲ್ಲಸಂದ್ರ ಗಂಗಿರೆಡ್ಡಿ, ಬಂಗಾರಪೇಟೆ ರಾಮೇಗೌಡ, ದೇವನಹಳ್ಳಿ ಸಿದ್ದಾರ್ಥ, ಕೋಲಾರದ ಚಂದ್ರಪ್ಪ, ತಾಲ್ಲೂಕು ಮುಖಂಡರಾದ ಎನ್.ಗಂಗಾಧರ, ಟಿ.ವೆಂಕಟರಮಣಪ್ಪ, ವೆಂಕಟರೆಡ್ಡಿ, ವೈ.ಎಂ ನಾರಾಯಣಸ್ವಾಮಿ, ಎನ್.ಕೃಷ್ಣಪ್ಪ, ಇ.ನಾರಾಯಣಸ್ವಾಮಿ, ಗಂಗನಾರಾಯಣಪ್ಪ, ನಡಿಪನ್ನ ಪಿ.ನಾರಾಯಣಸ್ವಾಮಿ, ಎನ್.ನಾಗರತ್ನ ಮತ್ತಿತರರು ಸಮಾವೇಶದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry