ಶುಕ್ರವಾರ, ಮೇ 7, 2021
20 °C

ಶಾಶ್ವತ ನೀರಾವರಿಯ ದಾರಿ ಕಾಯುತ್ತಾ...

ಕೆ.ನರಸಿಂಹಮೂರ್ತಿ,ಕೋಲಾರ Updated:

ಅಕ್ಷರ ಗಾತ್ರ : | |

ಶಾಶ್ವತ ನೀರಾವರಿಗಾಗಿ ಆಗ್ರಹಿಸಿ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎದ್ದಿರುವ ಕೂಗು ಬಹಳ ಹಳೆಯದು. ಈ ಕೂಗಿಗೆ ದಶಕಕ್ಕಿಂತಲೂ ಹೆಚ್ಚು ವಯಸ್ಸಾಗುತ್ತಿರುವ ಹೊತ್ತಿನಲ್ಲೇ ಜಿಲ್ಲೆಯ ಸಾವಿರಾರು ಕೆರೆ, ಕುಂಟೆ, ಬಾವಿ, ಕಲ್ಯಾಣಿಗಳ ಪೈಕಿ ಬಹಳಷ್ಟು ಕಣ್ಮುಚ್ಚಿವೆ. ಹಲವು ಒತ್ತುವರಿಗೆ ಒಳಗಾಗಿವೆ. ಅಭಿವೃದ್ಧಿಯ ನೆಪದಲ್ಲಿ ಕೆಲವನ್ನು ಉಳಿಸಿಕೊಳ್ಳಲಾಗಿದೆ.ಸ್ಥಳೀಯ ಪಾರಂಪರಿಕ ಜಲಸಂಪನ್ಮೂಲಗಳ ಮೇಲಿನ ಸಮುದಾಯದ ಸಹಜ ಅವಲಂಬನೆ ಎಂಬುದು ಈಗ ಮಕಾಡೆ ಮಲಗಿದೆ. ಶಾಶ್ವತ ನೀರಾವರಿ ವ್ಯವಸ್ಥೆ ಮತ್ತು ಕೊಳವೆಬಾವಿಯೊಂದೇ ಅಂತಿಮ ಎಂಬ ವ್ಯಾಖ್ಯಾನವನ್ನೇ ಬಹುತೇಕರು ಪ್ರತಿಪಾದಿಸುತ್ತಿದ್ದಾರೆ. ಆದರೆ ಅದೂ ಅವಾಸ್ತವಿಕವಾದದ್ದೇ ಎಂಬಂತೆ ಅಂತರ್ಜಲವು ಸಾವಿರಾರು ಅಡಿ ಆಳದಲ್ಲಿ ಕಣ್ಮರೆಯಾಗುತ್ತಿದೆ. ಕೊರೆದ ಕಡೆಯೆಲ್ಲಾ ನೀರಿಗಿಂತಲೂ ಹೆಚ್ಚು ದೂಳು ಬರುತ್ತಿದೆ. ಬರುವ ನೀರೂ ಕೂಡ ಅಕಾಲದಲ್ಲೇ ಕಣ್ಮರೆಯಾಗುತ್ತಿದೆ. ಮಿತಿ ಮೀರಿ ಶೇ 200ರಷ್ಟು ಅಂತರ್ಜಲವನ್ನು ಕೋಲಾರ ಜಿಲ್ಲೆಯಲ್ಲಿ ಬಳಸಲು ಶುರು ಮಾಡಿ ಹಲವು ವರ್ಷಗಳೇ ಆಗಿಹೋಗಿವೆ.ಇಂಥ ಸಂದರ್ಭದಲ್ಲಿ ಮಳೆ ನೀರು ಮತ್ತು ಅಂತರ್ಜಲ ಎರಡನ್ನೂ ಸದ್ಬಳಕೆ ಮಾಡಿಕೊಳ್ಳುವ ರೈತರು ಜಿಲ್ಲೆಯಲ್ಲಿ ಸಿಗುವುದು ಅಪರೂಪ. ಅಂಥ ಪ್ರಯೋಗಗಳನ್ನು ಮಾಡುವ ರೈತರನ್ನು ಪ್ರೋತ್ಸಾಹಿಸುವ, ಮಾದರಿಯಾಗಿ ಅನುಸರಿಸುವ ನಿದರ್ಶನಗಳೂ ಅಪರೂಪವಾಗಿವೆ.ಶಾಶ್ವತ ನೀರಾವರಿ ಎಂದರೆ ದೂರದ ಪ್ರದೇಶದಲ್ಲಿ ವ್ಯರ್ಥವಾಗುತ್ತಿರುವ ನೀರನ್ನು ಪೈಪಿನ ಮೂಲಕ ತರುವುದು ಎಂದೇ ಬಯಲು ಸೀಮೆಯ ಜಿಲ್ಲೆಗಳಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಆದರೆ ನಮ್ಮ ಊರು, ಹಳ್ಳಿಗಳಲ್ಲೇ ಬೀಳುವ ಮಳೆ ನೀರನ್ನು ಮತ್ತು ಜಿನುಗುವ ಅಂತರ್ಜಲವನ್ನು ಸಮರ್ಥವಾಗಿ ಹಿಡಿದಿಟ್ಟುಕೊಂಡು ಬಳಸುವುದು ಶಾಶ್ವತ ನೀರಾವರಿ ವ್ಯವಸ್ಥೆಯ ಪ್ರಮುಖ ಭಾಗ ಎಂಬುದನ್ನು ರಾಜಕಾರಣಿ, ಅಧಿಕಾರಿ ಮತ್ತು ಜನಸಮುದಾಯ- ಎಲ್ಲರೂ ಬೇಕೆಂದೇ ಮರೆತಿರುವ ಕಾಲವೂ ನಿರ್ಮಾಣವಾಗಿಬಿಟ್ಟಿದೆ.ಪರಿಣಾಮವಾಗಿ, ಕೆರೆ ಕುಂಟೆ ಕಲ್ಯಾಣಿಗಳ ಒತ್ತುವರಿ, ನಿಯಮಗಳನ್ನು ಮೀರಿ ಕೊಳವೆಬಾವಿ ಕೊರೆಯುವುದು, ತೆರೆದ ಬಾವಿಗಳಿಗೆ ಕಸ ತುಂಬಿ ಮುಚ್ಚುವುದು- ಇವನ್ನು ವಿರೋಧಿಸುವುದಕ್ಕಿಂತಲೂ ಶಾಶ್ವತ ನೀರಾವರಿ ವ್ಯವಸ್ಥೆಗಾಗಿ ಆಗ್ರಹಿಸುವುದು, ಧರಣಿ ನಡೆಸುವುದು ಅಸ್ತಿತ್ವದ ಘನತೆಯ ಸ್ಥಾಪನೆ ಮತ್ತು ಮುಂದುವರಿಕೆಗೆ ಉತ್ತಮ ಎಂಬ ನಿಲುವು ರಾಜಕಾರಣಿಗಳಾದಿಯಾಗಿ ಬಹಳಷ್ಟು ಸಂಘ-ಸಂಸ್ಥೆಗಳು, ಹೋರಾಟಗಾರರಲ್ಲಿ ಮೂಡಿದೆ. ಹೀಗಾಗಿಯೇ ಕಣ್ಮುಂದೆಯೇ ಕೆರೆಗಳ ಒತ್ತುವರಿ ನಡೆಯುತ್ತಿದ್ದರೂ ಅದನ್ನು ಪ್ರಶ್ನಿಸುವ, ತೆರವುಗೊಳಿಸುವ, ಪ್ರತಿಭಟಿಸುವ ಪ್ರಯತ್ನಗಳು ನಡೆದಿರುವುದು ಬಹಳ ಕಡಿಮೆ. ಅಂಥ ಕೆಲಸಕ್ಕೆ ಮುಂದಾಗುವ ಅಧಿಕಾರಿಗಳ ಎತ್ತಂಗಡಿಯೂ ಬಹಳ ಸಲೀಸಾಗಿ ಆಗಿಹೋಗುತ್ತದೆ.ಕೋಲಾರ ಜಿಲ್ಲಾ ಕೇಂದ್ರದಲ್ಲಿ ಅಂತರಗಂಗೆ ಬೆಟ್ಟ ಸಾಲುಗಳಿಂದ ಇಳಿದು ಬಂದು ಕೆರೆ ತುಂಬಲು ಅನುಕೂಲಕರವಾಗಿದ್ದ ರಾಜಕಾಲುವೆಗಳ ಮೇಲೆ ಮನೆಗಳೆದ್ದಿವೆ. ರಾಜಕಾಲುವೆ ಒತ್ತುವರಿ ತೆರವುಗೊಳಿಸದ ಪರಿಣಾಮ ಮಳೆ ನೀರು ಬಿದ್ದಲ್ಲೇ ಇಂಗುತ್ತಿದೆ.ಜಿಲ್ಲೆಯಲ್ಲಿ ಒಂದು ವರ್ಷದ ಹಿಂದೆ ಶುರುವಾದ 600ಕ್ಕೂ ಹೆಚ್ಚು ಕಲ್ಯಾಣಿಗಳ ಪುನಶ್ಚೇತನ ಕಾರ್ಯವೂ ನನೆಗುದಿಗೆ ಬಿದ್ದಿದೆ. ಕೋಲಾರದ ಹೃದಯ ಭಾಗದಲ್ಲಿರುವ ವೇಣುಗೋಪಾಲಸ್ವಾಮಿ ಪುಷ್ಕರಣಿಯ ಪುನಶ್ಚೇತನದ ಸಲುವಾಗಿ, ಅಲ್ಲಿರುವ ಕೊಳಚೆ ನೀರನ್ನು ತೆಗೆಯಬೇಕು. ಅಲ್ಲಿಗೆ ಹರಿದು ಬರುವ ಕೊಳಚೆ ನೀರಿನ ಮೂಲವನ್ನು ಪತ್ತೆ ಹಚ್ಚಿ ಬಂದ್ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿ ಒಂದು ವರ್ಷವಾದರೂ ಆ ಕೆಲಸ ಆಗಿಲ್ಲ. ಇದು ಅಧಿಕಾರಿ-ಸಿಬ್ಬಂದಿಯ ಕಾರ್ಯವೈಖರಿಗೊಂದು ಪುಟ್ಟ ಕನ್ನಡಿ ಅಷ್ಟೆ.ಅಧಿಕಾರಿಗಳಿಗೂ ಕಲ್ಯಾಣಿ ಪುನಶ್ಚೇತನ ಕ್ಕಿಂತಲೂ ಶಾಶ್ವತ ನೀರಾವರಿಯೇ ಬೇಕು. ನಗರಸಭೆ, ಪುರಸಭೆಗಳಷ್ಟೇ ಅಲ್ಲದೆ, ಗ್ರಾಮ ಪಂಚಾಯಿತಿಗಳಲ್ಲೂ ಇದೇ ನಿಲುವು ಬೇರೂರಿದೆ. ಹೀಗಾಗಿಯೇ ಉದ್ಯೋಗ ಖಾತ್ರಿ ಯೋಜನೆ ಅಡಿ ಕಲ್ಯಾಣಿಗಳ ಪುನಶ್ಚೇತನ ಕಾರ್ಯವೂ ನಿರೀಕ್ಷೆಯಂತೆ ನಡೆಯುತ್ತಿಲ್ಲ.ಜಿಲ್ಲೆಯ ಬಹುತೇಕ ದೊಡ್ಡ, ಸಣ್ಣ ಕೆರೆಗಳಲ್ಲಿ ಮರಳು ಫಿಲ್ಟರಿಂಗ್, ಸಾಗಣೆ ನಿರಂತರವಾಗಿ ನಡೆಯುತ್ತಿದೆ. ಇದೇ ವೇಳೆ ಸಾವಿರಾರು ಕೋಟಿ ವೆಚ್ಚದಲ್ಲಿ ಕೋಲಾರ- ಚಿಕ್ಕಬಳ್ಳಾಪುರ ಕೆರೆಗಳ ಅಭಿವೃದ್ಧಿ ಯೋಜನೆಯ ಮಾತೂ ಕೇಳಿ ಬರುತ್ತಿದೆ. ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆ ಆಗಬೇಕಷ್ಟೆ ಎನ್ನುತ್ತಾರೆ ಅಧಿಕಾರಿಗಳು.ಹಿಂದೆ ಜನ ಕೆರೆ, ಕುಂಟೆ, ಕಲ್ಯಾಣಿಗಳ ನೀರನ್ನೇ ಕುಡಿಯಲಿಕ್ಕೆ, ದಿನದ ಅಗತ್ಯಗಳಿಗೆ ಬಳಸುತ್ತಿದ್ದರು. ಈ ಜಲದ ಕಣ್ಣುಗಳನ್ನು ಈಗ ಮುಚ್ಚಲಾಗಿದೆ. ಟ್ಯಾಂಕರ್ ಮಾಫಿಯಾ ಹಳ್ಳಿಯಿಂದ ನಗರದವರೆಗೆ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದೆ. ಸ್ಥಳೀಯ ಸಂಸ್ಥೆಗಳ ಬಹಳಷ್ಟು ಜನಪ್ರತಿನಿಧಿಗಳೇ ಈ ಮಾಫಿಯಾದ ಕಾಣದ ದೊರೆಗಳು. ಆದರೆ ಇದು ಎಲ್ಲರಿಗೂ ಗೊತ್ತಿರುವ ಸತ್ಯ.ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಯಬಾರದು, ಆದರೆ ಬಗೆಹರಿಸುವವರಂತೆ ಜನರ ಮುಂದೆ ತಾವು ಸದಾ ಕಾಣಿಸಿಕೊಳ್ಳುತ್ತಿರಬೇಕು ಎಂಬುದು ಬಹುತೇಕ ಉದ್ಯಮಿ -ಜನಪ್ರತಿನಿಧಿಗಳ ಒಳಗಿನ ಆಸೆ. ಜನ ಸಮುದಾಯದ ಅಸಮಾಧಾನ, ಅಸಹನೆ, ಧರಣಿ, ಪ್ರತಿಭಟನೆಗಳನ್ನು ನಿಯಂತ್ರಿಸುವಷ್ಟರ ಮಟ್ಟಿಗೆ ಶಕ್ತರೂ ಮತ್ತು ಪ್ರಭಾವಶಾಲಿಗಳೂ ಆಗಿ ಅವರ ಬೆಂಬಲಿಗರು ಬೆಳೆದಿರುವುದು ಮತ್ತು ತಕ್ಷಣದ ಲಾಭಗಳಿಗಾಗಿ ಬಹುತೇಕ ಹೋರಾಟಗಳೂ ದಿಕ್ಕು ತಪ್ಪಿರುವುದು ನೀರಿನ ಸಮಸ್ಯೆಯನ್ನು ಇನ್ನೂ ಜೀವಂತವಾಗಿಟ್ಟಿದೆ ಎನ್ನಲೇಬೇಕಾಗಿದೆ.ಹೀಗಾಗಿಯೇ, ಅನಿವಾರ್ಯವಾಗಬೇಕಾಗಿದ್ದ ಕೆರೆ, ರಾಜಕಾಲುವೆಗಳ ಒತ್ತುವರಿ ತೆರವಿನ ಕಾರ್ಯಗಳು ಮೂಲೆಗುಂಪಾಗಿವೆ.

1968ರಲ್ಲಿ ಪ್ರಕಟವಾದ ಮೈಸೂರು ರಾಜ್ಯದ ಗೆಜೆಟಿಯರ್‌ನಲ್ಲಿರುವ ಮಾಹಿತಿ ಪ್ರಕಾರ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಯ ಒಟ್ಟು 11 ತಾಲ್ಲೂಕುಗಳಲ್ಲಿ 64,111 ಕೆರೆಗಳಿದ್ದವು. 34,104 ಬಾವಿಗಳಿದ್ದವು. ಈಗ ಅವುಗಳಲ್ಲಿ ಬಹಳಷ್ಟನ್ನು ಹುಡುಕಿದರೂ ಸಿಗಲಾರದ ಸನ್ನಿವೇಶವಿದೆ. ಆದರೂ ಹೋರಾಟ ಮಾಡಿ ಶಾಶ್ವತ ನೀರಾವರಿಯನ್ನೇನೋ ತರುತ್ತೀರಿ.ಆದರೆ ಅಷ್ಟು ದೊಡ್ಡಪ್ರಮಾಣದ ನೀರನ್ನು ತುಂಬಲು ಜಿಲ್ಲೆಯ ಕೆರೆಗಳನ್ನು ಉತ್ತಮ ಸ್ಥಿತಿಯಲ್ಲಿಡುವುದರ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ? ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದ ಲೈಟು ಕಂಬದೆತ್ತರದಷ್ಟು ಮರಳ ಹಾಸಿಗೆಗಳನ್ನು ಜಿಲ್ಲೆಯ ಕೆರೆಗಳಲ್ಲಿ ಬರಿದು ಮಾಡಲಾಗಿದೆಯಲ್ಲವೇ. ಅದನ್ನು ತಡೆಯುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಬಹಳ ಮಂದಿಯಲ್ಲಿ ಇಲ್ಲ. ಆದರೆ ಅವರೆಲ್ಲರೂ ದೂರದಿಂದ ಬರುವ ಶಾಶ್ವತ ನೀರಿನ ದಾರಿಯನ್ನೇ ಕಾಯುತ್ತಿದ್ದಾರೆ!

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.