ಶಾಶ್ವತ ನೀರಾವರಿ ಕಲ್ಪಿಸಲು ಸರ್ಕಾರ ಸಿದ್ದ : ಈಶ್ವರಪ್ಪ

ಸೋಮವಾರ, ಮೇ 27, 2019
28 °C

ಶಾಶ್ವತ ನೀರಾವರಿ ಕಲ್ಪಿಸಲು ಸರ್ಕಾರ ಸಿದ್ದ : ಈಶ್ವರಪ್ಪ

Published:
Updated:

ಕೋಲಾರ: ಕೋಲಾರ, ಮಾಲೂರು, ಬಂಗಾರಪೇಟೆ ಹಾಗೂ 43 ಹಳ್ಳಿಗಳಿಗೆ ನೀರು ಪೂರೈಸುವ ಯರಗೋಳು ಕುಡಿಯುವ ನೀರು ಯೋಜನೆಗೆ ಇರುವ ತೊಡಕು ನಿವಾರಿಸುವ ಸಲುವಾಗಿ ಸೆ.1ರಂದು ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಯೋಜನೆಯ ಮಾಹಿತಿ ಪಡೆದ ಅವರು ದೆಹಲಿ ಭೇಟಿ ದಿನಾಂಕ ನಿಗದಿಪಡಿಸಿದರು. ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರೊಡನೆ ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು. ಅಧಿಕಾರಿಗಳು ಅದಕ್ಕೆ ಅಗತ್ಯ ಸಿದ್ಧತೆ ನಡೆಸಬೇಕು ಎಂದು ಸೂಚಿಸಿದರು.ಎರಡು ವರ್ಷದಿಂದ ಯೋಜನೆ ಅನುಷ್ಠಾನ ಸ್ಥಗಿತಗೊಂಡಿದೆ ಎಂಬ ಅಧಿಕಾರಿಗಳ ಮಾಹಿತಿಗೆ ಅಚ್ಚರಿ ವ್ಯಕ್ತಪಡಿಸಿದ ಅವರು, ಸಮಸ್ಯೆಯ ವಿವರಣೆ ಬಯಸಿದರು. ಅಣೆಕಟ್ಟು ನಿರ್ಮಾಣವಾಗಲಿರುವ ಯರಗೋಳು ಸ್ಥಳದಲ್ಲಿ 94 ಎಕರೆ ಅರಣ್ಯ ಇಲಾಖೆ ಜಮೀನಿದೆ. 124 ಎಕರೆ ಖಾಸಗಿ ಜಮೀನಿದೆ.

 

95 ಎಕರೆ ರಾಜ್ಯ ಸರ್ಕಾರದ ಜಮೀನಿದೆ. ಒಟ್ಟು 219 ಎಕರೆ ಜಮೀನಿನಲ್ಲಿ ಖಾಸಗಿ ಜಮೀನಿಗೆ ಪರಿಹಾರ ನೀಡುವ ಕೆಲಸ ನಡೆಯುತ್ತಿದೆ. ಉಳಿದದ್ದನ್ನು ಅರಣ್ಯ ಇಲಾಖೆ ಹೆಸರಿಗೆ ಖಾತೆ ಮಾಡಿಸಬೇಕಾಗಿದೆ ಎಂದರು.

ಅನುಮತಿ ರದ್ದು: ಇವೆಲ್ಲ ಕೆಲಸಗಳನ್ನು ಬರುವ ನ.14ರ ಒಳಗೆ ಪೂರ್ಣಗೊಳಿಸಿ ಕೇಂದ್ರಕ್ಕೆ ಅಗತ್ಯ ಮಾಹಿತಿ ಸಲ್ಲಿಸದಿದ್ದರೆ ಯೋಜನೆಗೆ ಕೇಂದ್ರ ನೀಡಿರುವ ಅನುಮತಿಯೇ ರದ್ದಾಗಲಿದೆ ಎಂಬ ಮಾಹಿತಿ ಸಭೆಯಲ್ಲಿದ್ದವರನ್ನು ಆತಂಕಕ್ಕೆ ದೂಡಿತು.ಅದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಆ.25ರ ಒಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ. 28ರಂದು ಬೆಂಗಳೂರಿನ ಸಭೆಗೆ ಮಾಹಿತಿ ತನ್ನಿ. ಸೆ.1ರಂದು ದೆಹಲಿಗೆ ತೆರಳಿ ಅರಣ್ಯ ಇಲಾಖೆ ಸಚಿವರನ್ನು ಭೇಟಿ ಮಾಡೋಣ ಎಂದು ತಿಳಿಸಿದರು.ಯರಗೋಳು, ಎತ್ತಿನಹೊಳೆ ಯೋಜನೆ ಜೊತೆಗೆ ಪರಮಶಿವಯ್ಯ ವರದಿ ಜಾರಿಗೊಳಿಸಲು ಸಕಾರ ಒಪ್ಪಿದೆ. ಹಣದ ಕೊರತೆ ಇಲ್ಲ. ಯೋಜನೆ ಜಾರಿಗೊಳಿಸುವಲ್ಲಿ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಲಾಗುವುದು. ಅದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.ಎತ್ತಿನಹೊಳೆ ಯೋಜನೆಗೆ ಇರುವ ಅರಣ್ಯ ಇಲಾಖೆಯ ಅಡೆತಡೆ ನಿವಾರಿಸುವಲ್ಲಿ ನೀರಾವರಿ ಸಚಿವರೊಡನೆ ಕೇಂದ್ರ ಸರ್ಕಾರವನ್ನು ಸಂಪರ್ಕಿಸಲಾಗುವುದು. ಆ ನಿಟ್ಟಿನಲ್ಲಿ ಯಾವುದೇ ಮಾಹಿತಿ ನೀಡಲು ಸಂಕೋಚವಿಲ್ಲದೆ ಸಂಪರ್ಕಿಸಬೇಕು ಎಂದು ಅವರು ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್ ಚಲುವರಾಜು ಅವರಿಗೆ ಸೂಚಿಸಿದರು.ಮುನಿಯಪ್ಪ ಭರವಸೆ: ಇದೇ ಸಂದರ್ಭ ಮಾತನಾಡಿದ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಯರಗೋಳು ಯೋಜನೆಗೆ ಕೇಂದ್ರ ಸರ್ಕಾರದ ಕಡೆಯಿಂದ ಇರುವ ತೊಡಕನ್ನು ಒಂದು ವಾರದೊಳಗೆ ಇತ್ಯರ್ಥಗೊಳಿಸಲು ಯತ್ನಿಸುವೆ ಎಂದು ಭರವಸೆ ನೀಡಿದರು.ಎಸ್.ಅಗ್ರಹಾರ ಕೆರೆಯಿಂದ 42 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ ವಿಳಂಬವಾಗಿದೆ ಎಂದು ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.ಸಚಿವರಾದ ಎ.ನಾರಾಯಣಸ್ವಾಮಿ, ಆರ್.ವರ್ತೂರು ಪ್ರಕಾಶ್, ಶಾಸಕರಾದ ನಸೀರ್ ಅಹ್ಮದ್, ವೈ.ಸಂಪಂಗಿ, ಎನ್.ಸಂಪಂಗಿ, ಅಮರೇಶ್, ಎಸ್.ಆರ್.ಲೀಲಾ, ಎ.ಎನ್.ಶಿವಯೋಗಿ ಸ್ವಾಮಿ, ಕೆ.ಪಿ.ಬಚ್ಚೇಗೌಡ, ಡಾ.ಸುಧಾಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ನಗರಸಭೆ ಅಧ್ಯಕ್ಷೆ ನಾಜಿಯಾ, ಎರಡೂ ಜಿಲ್ಲೆಗಳ ಉಸ್ತವಾರಿ ಕಾರ್ಯದರ್ಶಿಗಳಾದ ಪಿ.ಎನ್.ಶ್ರೀನಿವಾಸಾಚಾರಿ, ಎನ್.ಸಿ.ಮುನಿಯಪ್ಪ, ಜಿಲ್ಲಾಧಿಕಾರಿಗಳಾದ ಡಾ.ಡಿ.ಎಸ್.ವಿಶ್ವನಾಥ್, ಡಾ.ಎನ್.ಮಂಜುಳಾ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry