ಶಾಶ್ವತ ನೀರಾವರಿ ಯೋಜನೆ ಜಾರಿ: ದೇವೇಗೌಡ
ಹೊಳೆನರಸೀಪುರ: ತಾಲ್ಲೂಕಿನ ಜನರು 50 ವರ್ಷಗಳಿಂದ ಶಕ್ತಿ ನೀಡಿದ್ದಿರಿ. ನಿಮ್ಮ ಸಹಕಾರದಿಂದ ಕನಸಿನಲ್ಲಿಯೂ ನೆನೆಸದ ಹ್ದ್ದುದೆ ಅಲಂಕರಿಸುವಂತಾಯಿತು. ಅದ ಕ್ಕಾಗಿ ನನ್ನಕಡೆ ಉಸಿರು ಇರುವ ವರೆಗೆ ನಿಮ್ಮ ಪರವಾಗಿ ಹೋರಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಶುಕ್ರವಾರ ಪಟ್ಟಣದಲ್ಲಿ ಆಯೋಜಿ ಸಿದ್ದ ಕಾರ್ಯಕರ್ತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ನವರಿಗೆ ರಾಹುಲ್ಗಾಂಧಿ ಪ್ರಧಾನಿ ಮಾಡುವ ಚಿಂತೆ, ಬಿಜೆಪಿಗೆ ನರೇಂದ್ರ ಮೋದಿ ಪ್ರಧಾನಿ ಮಾಡುವ ಚಿಂತೆ. ನನಗೆ ಅಂತಹ ಯಾವುದೇ ಚಿಂತೆ ಇಲ್ಲ. ನನಗೆ ಕರ್ನಾಟಕ ರಾಜ್ಯದ ರೈತರಿಗೆ ಶಾಶ್ವತ ನೀರಾವರಿ ಯೋಜ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವುದೇ ದೊಡ್ಡ ಚಿಂತೆ.
ನಾನು ಸಿದ್ದರಾಮಯ್ಯ ಅವರನ್ನು ದೋಷಿಸುವುದಿಲ್ಲ. ತಮಿಳು ನಾಡು ಸಂಸತ್ನಲ್ಲಿ ಹೊಂದಿರುವ ಶಕ್ತಿಯಿಂದಾಗಿ ನೀರಾವರಿ ಯೋಜನೆಯಲ್ಲಿ ಅವರ ರಾಜ್ಯಕ್ಕೆ ಬೇಕಾದಷ್ಟು ನೀರನ್ನು ಪಡೆದುಕೊಳ್ಳು ವಂತಾಗಿದೆ. ನಮ್ಮ ಅಣೆಕಟ್ಟೆಗಳಲ್ಲಿ ನೀರಿದೆ ಆದರೆ ನಮ್ಮ ನಾಲೆಗಳಲ್ಲಿ ನೀರಿಲ್ಲ. ಮುಂದಿನ ದಿನದಲ್ಲಿ ನಮಗೆ ಕುಡಿಯುವ ನೀರು ಸಿಕ್ಕುತ್ತೋ ಇಲ್ಲವೋ ಗೊತ್ತಿಲ್ಲ. ನಮ್ಮ ರಾಜ್ಯದ ರೈತರ ಹಣ, ನಮ್ಮ ನಾಲೆಗಳು. ಆದರೆ, ನೀರು ಮಾತ್ರ ತಮಿಳು ನಾಡಿಗೆ ಎಂತಹ ವಿಪರ್ಯಾಸ ! ಇದಕ್ಕಾಗಿ ನಾನು ಹೋರಾಡಲೇ ಬೇಕು. ಬಿಡಲ್ಲ. ಕಡೆ ಉಸಿರಿರುವವರೆಗೂ ಹೋರಾಡುತ್ತೇನೆ ಎಂದರು.
ನನ್ನಿಂದ ಅಧಿಕಾರ ಅನುಭವಿಸಿದ ಅನೇಕರು ನನ್ನನ್ನು ಬಿಟ್ಟು ಹೋದರು. ನೀವು ನನ್ನ ಜೊತೆ ಇರುವವರೆಗೂ ಯಾರೇ ಹೋದರು ನಾನು ತಲೆ ಕಡೆಸಿಕೊಳ್ಳಲ್ಲ. ನನ್ನ ಹೋರಾಟ ಮುಂದುವರಿಸುತ್ತೇನೆ ಎಂದರು.
ಶಾಸಕ ರೇವಣ್ಣ ಮಾತನಾಡಿ, ರಾಜ್ಯ ದಲ್ಲಿ ಯಾರೇ ಆಡಳಿತ ನಡೆಸುತ್ತಿರಲಿ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಹಣ ತರ ವುದು ಹೇಗೆಂದು ನನಗೆ ಗೊತ್ತಿದೆ. ನಬಾರ್ಡ್ನಿಂದ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ 7.5 ಕೋಟಿ ಹಣ ತಂದಿದ್ದೇನೆ ಎಂದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಚಂದ್ರಮತಿ, ಉಪಾಧ್ಯಕ್ಷ ಕೋಡಿಹಳ್ಳಿ ಹುಚ್ಚೇಗೌಡ, ಮಾಜಿ ಅಧ್ಯಕ್ಷ ಮುಂಕುಂದೇಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜುಳಾ ಬೈರಾಜು, ವಿಶ್ವೇಶ್ವರಯ್ಯ, ಶಶಿಕಲಾ, ಸುದರ್ಶನ್, ಪುಟ್ಟಸೋಮಪ್ಪ, ಜಯಣ್ಣ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.