ಶಾಶ್ವತ ನೀರಾವರಿ: ಹೋರಾಟಕ್ಕೆ ಸಜ್ಜಾಗಲು ಮನವಿ

7

ಶಾಶ್ವತ ನೀರಾವರಿ: ಹೋರಾಟಕ್ಕೆ ಸಜ್ಜಾಗಲು ಮನವಿ

Published:
Updated:

ಶ್ರೀನಿವಾಸಪುರ: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲು ಸರ್ಕಾರ ಪರಮಶಿವಯ್ಯ ವರದಿ ಜಾರಿಗೆ ತರಬೇಕು ಎಂದು ಜಿಲ್ಲಾ ಶಾಶ್ವತ ನೀರಾ­ವರಿ ಹೋರಾಟ ಸಮಿತಿ ಕಾರ್ಯದರ್ಶಿ ಎಂ.ಜಿ. ಪ್ರಭಾಕರ್‌ ಆಗ್ರಹಪಡಿಸಿದರು.

ಪಟ್ಟಣದ ಸರ್ಕಾರಿ ನೌಕರರ ಭವ­ನದ ಸಭಾಂಗಣದಲ್ಲಿ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿ­ಯಿಂದ ಸೋಮವಾರ ನಡೆದ ತಾಲ್ಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಶಾಶ್ವತ ನೀರಾವರಿ ಯೋಜನೆ­ಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಎತ್ತಿನ ಹೊಳೆಯಿಂದ ನೀರು ಹರಿಸು­ವುದಾಗಿ ಹೇಳಿ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಇದರಿಂದ ಇಲ್ಲಿನ ಜನ ಫ್ಲೋರೈಡ್‌ ಮಿಶ್ರಿತ ನೀರು ಸೇವಿಸಿ ಪ್ಲೋರೋಸಿಸ್‌ ರೋಗಕ್ಕೆ ತುತ್ತಾಗುತ್ತಿ­ದ್ದಾರೆ ಎಂದು ಆಪಾದಿಸಿದರು.ನೀರು ಬಾಯಾರಿದ ಜನರ ಅಗತ್ಯ­ವಾಗಿದೆ. ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಪರಮಶಿವಯ್ಯ ವರದಿ ಜಾರಿ ಇಲ್ಲಿನ ಜನ ಪ್ರತಿನಿಧಿಗಳ ಜಪವಾಗಿತ್ತು. ಆದರೆ ಈಗ ಆ ಬಗ್ಗೆ ಚಕಾರ ಎತ್ತುತ್ತಿಲ್ಲ. ಹೋರಾಟದ ಮೂಲಕ ಶಾಶ್ವತ ನೀರಾವರಿ ಪಡೆಯ­ಬೇಕಾದ ಅನಿವಾರ್ಯತೆ ಉಂಟಾಗಿದೆ. ಅದಕ್ಕೆ ಜನ ಸಾಮಾನ್ಯರು ಸಜ್ಜಾಗ­ಬೇಕು. ಪರಮಶಿವಯ್ಯ ವರದಿ ಜಾರಿ­ಗಾಗಿ ಆಗ್ರಹಿಸಿ ಜನವರಿ ಕೊನೆ ವಾರ­ದಲ್ಲಿ ಏರ್ಪಡಿಸಿರುವ ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲ ಸಮುದಾಯದ ಜನ ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು ಎಂದು ಮನವಿ ಮಾಡಿದರು.ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್‌.ಸೂರ್ಯ­ನಾರಾ­ಯಣ, ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ವೆಂಕಟಾಚಲ, ಮುಖಂಡರಾದ ಕೋಟೇಶ್‌, ವಿಶ್ವನಾಥ್‌ ಶಾಶ್ವತ ನೀರಾ­ವರಿ ಅಗತ್ಯದ ಬಗ್ಗೆ ಮಾತನಾಡಿ­ದರು.

ವಿವಿಧ ಸಂಘಟನೆಗಳ ಮುಖಂಡ­ರಾದ ವಿ.ನಾಗಪ್ಪ, ಅಕ್ಬರ್‌ ಷರೀಫ್‌, ವಿಶ್ವನಾಥರೆಡ್ಡಿ, ಜಯಮ್ಮ, ಜಿ.ಈಶ್ವ­ರಮ್ಮ, ಆನಂದ್‌, ಜಿ.ವಿ.ಲಕ್ಷ್ಮೀದೇವಮ್ಮ, ನಾಗಭೂಷಣ, ಪಾತಕೋಟ ನವೀನ್‌ ಕುಮಾರ್‌ ಉಪಸ್ಥಿತ­ರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry