ಶನಿವಾರ, ಮೇ 21, 2022
20 °C

ಶಾಸಕರನ್ನು ಕಾಡುವ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಶೇಕಡ 90ರಷ್ಟು ಶಾಸಕರು ಜೀವ ಬೆದರಿಕೆಯಿಂದ ಪೊಲೀಸ್ ಭದ್ರತೆ ಪಡೆದಿರುವ ಸುದ್ದಿ ಆತಂಕಕಾರಿಯ ಬೆಳವಣಿಗೆ. ಚುನಾವಣೆಗಳಲ್ಲಿ ಲಕ್ಷ ಮತ್ತು ಕೋಟಿಗಟ್ಟಲೆ ಹಣ ಖರ್ಚು ಮಾಡಿ ‘ಜನಸೇವೆ’ಗೆ ಬಂದಿರುವ ಈ ಜನಪ್ರತಿನಿಧಿಗಳಿಗೆ ಜೀವ ಬೆದರಿಕೆ ಏಕೆ ಬಂದಿದೆ ಎಂಬುದು ಯಕ್ಷ ಪ್ರಶ್ನೆ. ಜನರಿಂದ ಆಯ್ಕೆಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರೊಡನೆ ಒಡನಾಟ ಇಟ್ಟುಕೊಳ್ಳಬೇಕಾದ ಶಾಸಕರು ಪೊಲೀಸ್ ರಕ್ಷಣೆಯಲ್ಲಿ ಓಡಾಡುವ ಪರಿಸ್ಥಿತಿ ಕರ್ನಾಟಕದ ಮಟ್ಟಿಗಂತೂ ಹೊಸದು.ಉತ್ತರ ಭಾರತದ ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಬಹುತೇಕ ಶಾಸಕರು ಪೊಲೀಸ್ ರಕ್ಷಣೆಯಲ್ಲಿಯೇ ಇರುತ್ತಾರೆ. ಇವರಲ್ಲಿ ಅನೇಕ ಮಂದಿ ವಿವಿಧ ಅಪರಾಧ ಕೃತ್ಯಗಳಲ್ಲಿ ಆರೋಪಿಗಳು ಮತ್ತು ಜೈಲುಗಳಲ್ಲಿರುವವರು ಎನ್ನುವುದು ಜಗಜ್ಜಾಹೀರು. ಕೆಲವು ಶಾಸಕರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ತಮ್ಮ ವಿರೋಧಿಗಳಿಂದ ಜೀವ ಬೆದರಿಕೆ ಎದುರಿಸುವವರಿದ್ದಾರೆ. ಮತ್ತೆ ಕೆಲವರು ಪ್ರತಿಷ್ಠೆಗಾಗಿ ತಮ್ಮ ಸುತ್ತಮುತ್ತ ಪೊಲೀಸ್ ರಕ್ಷಣೆ ಬಯಸಿ ಆ ಸೌಲಭ್ಯ ಪಡೆದವರಿದ್ದಾರೆ. ಇದೇನೇ ಇದ್ದರೂ, ಜನಪ್ರತಿನಿಧಿಗಳು ಅಪರಾಧೀಕರಣದ ಪರಿಸರದಲ್ಲಿ ಸಿಲುಕಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಇದು ನಿಜಕ್ಕೂ ದುರದೃಷ್ಟಕರ.ಇತ್ತೀಚಿನ ದಿನಗಳಲ್ಲಿ ರಾಜಕಾರಣ ಎಂದರೆ ಹಣ ಆಸ್ತಿ ಮಾಡುವ ಕ್ಷೇತ್ರ ಎಂದೇ ಕುಖ್ಯಾತಿ ಗಳಿಸಿದೆ. ಹಾಗಾಗಿ ರಾಜಕಾರಣಕ್ಕೆ ಬರುವ ಬಹುತೇಕ ಮಂದಿ ಹಲವಾರು ದಂಧೆಗಳಲ್ಲಿ, ಹಗರಣಗಳಲ್ಲಿ ಮತ್ತು ಅಪರಾಧ ಪ್ರಕರಣಗಳಲ್ಲಿ ಸಿಕ್ಕಿಕೊಳ್ಳುತ್ತಿರುವುದು ವಾಸ್ತವ. ಹದಿನಾಲ್ಕನೇ ಲೋಕಸಭೆಗೆ ಆರಿಸಿ ಬಂದ 545 ಸದಸ್ಯರ ಪೈಕಿ 136 ಮಂದಿ ಮತ್ತು ಅವರಲ್ಲಿ 51 ಮಹಿಳೆಯರು ಅಪರಾಧಗಳ ಹಿನ್ನೆಲೆಯನ್ನು ಹೊಂದಿದ್ದಾರೆ ಎನ್ನುವುದು ಗಾಬರಿ ಮೂಡಿಸುವ ಸಂಗತಿ.

 

ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಶೇ 50ರಷ್ಟು ಮಂದಿ, ಬಿಹಾರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆರಿಸಿ ಬಂದವರಲ್ಲಿ ಶೇ 59 ಮಂದಿ ಮತ್ತು ಮಧ್ಯಪ್ರದೇಶದಲ್ಲಿ ಐವರು ಶಾಸಕರಲ್ಲಿ ಒಬ್ಬರಂತೆ ಅಪರಾಧಗಳ ಹಿನ್ನೆಲೆಯನ್ನು ಹೊಂದಿದವರಾಗಿದ್ದಾರೆ. ಈಗ ಕರ್ನಾಟಕದ ಶಾಸಕರಲ್ಲಿ ಶೇ 90 ಮಂದಿ ಪೊಲೀಸ್ ರಕ್ಷಣೆಯಲ್ಲಿದ್ದಾರೆ ಎಂದರೆ ಬಹುತೇಕ ಮಂದಿ ಅಪರಾಧದ ನಂಟನ್ನು ಹೊಂದಿರಲೇಬೇಕು. ನಮ್ಮ ಜನಪ್ರತಿನಿಧಿಗಳೆನ್ನುವವರ ಇಂತಹ ಹಿನ್ನೆಲೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ.ಸಾಮಾನ್ಯ ಜನರ ರಕ್ಷಣೆಗೇ ಇಲ್ಲದ ಪೊಲೀಸ್ ವ್ಯವಸ್ಥೆಯನ್ನು ಇಂತಹ ಅಪರಾಧ ಹಿನ್ನೆಲೆ ಉಳ್ಳವರಿಗೆ ಮತ್ತು ಕೆಲವರ ಪ್ರತಿಷ್ಠೆಗಾಗಿ ಪೊಲೀಸರ ಸೇವೆ ಒದಗಿಸಿರುವುದು ಸರಿ ಎನಿಸದು. ಈ ಬಗೆಗೆ ನಿಜವಾಗಿಯೂ ಯಾರಿಗೆ ಜೀವ ಬೆದರಿಕೆ ಇದೆ ಎನ್ನುವುದನ್ನು ಪರಿಶೀಲಿಸಿ ಅಂತಹವರಿಗೆ ಮಾತ್ರ ಪೊಲೀಸ್ ರಕ್ಷಣೆ ಒದಗಿಸಬೇಕು.

 

ಕೇವಲ ಪ್ರತಿಷ್ಠೆಗಾಗಿ ಪೊಲೀಸ್ ರಕ್ಷಣೆ ಪಡೆದಿದ್ದರೆ ಅಂತಹವರಿಂದ ಆ ರಕ್ಷಣಾ ವ್ಯವಸ್ಥೆಯನ್ನು ಹಿಂದಕ್ಕೆ ಪಡೆಯಬೇಕು. ಈ ಬಗೆಗೆ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಅವಶ್ಯ. ಜನಪ್ರತಿನಿಧಿಗಳು ಪೊಲೀಸ್ ರಕ್ಷಣೆಯಲ್ಲಿದ್ದಾರೆ ಎನ್ನುವುದು ಪ್ರತಿಷ್ಠೆಗಿಂತ ಅದು ಅವಮಾನದ ಸಂಗತಿ ಎನ್ನುವುದನ್ನು ಶಾಸಕರು ಮತ್ತು ಸರ್ಕಾರ ತಿಳಿಯಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.