ಶಾಸಕರಿಂದ ಮದ್ಯದಂಗಡಿಗೆ ಬೀಗಮುದ್ರೆ

7

ಶಾಸಕರಿಂದ ಮದ್ಯದಂಗಡಿಗೆ ಬೀಗಮುದ್ರೆ

Published:
Updated:

ಬಳ್ಳಾರಿ: ನಗರದ ತಾಳೂರು ರಸ್ತೆಯ ರೇಣುಕಾ ನಗರದ ಬಳಿ ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ತೆರೆದಿರುವ ಮದ್ಯ ಮಾರಾಟ ಮಳಿಗೆ ಯನ್ನು ಮುಚ್ಚುವಂತೆ ಆಗ್ರಹಿಸಿ ನಾಗರಿಕರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಶಾಸಕ ಹಾಗೂ ಸಂಸದರು, ಶುಕ್ರವಾರ ಮಧ್ಯಾಹ್ನ ಮಳಿಗೆಗೆ ಬೀಗ ಜಡಿದರು.ಆದರೆ, ಎಂಎಸ್‌ಐಎಲ್‌ನ ವ್ಯವಸ್ಥಾಪಕ ನಿರ್ದೇಶಕರ ಕೋರಿಕೆಯ ಮೇರೆಗೆ ಪೊಲೀಸರ ಸರ್ಪಗಾವಲಿನಲ್ಲಿ ಸಂಜೆ ಮತ್ತೆ ಮಳಿಗೆಯನ್ನು ತೆರೆಯಲಾಯಿತು.`ಜನವಸತಿ ಪ್ರದೇಶದಲ್ಲಿ ಮದ್ಯ ಮಾರಾಟ ಮಳಿಗೆ ಬೇಡ ಎಂದು ಆಗ್ರಹಿಸಿ ಗುರುವಾರ ಪ್ರತಿಭಟನೆ ಆರಂಭಿಸಿರುವ ರೇಣುಕಾ ನಗರದ ನಿವಾಸಿಗಳ ಬೇಡಿಕೆ ನ್ಯಾಯಯುತವಾಗಿದ್ದು, ಮಕ್ಕಳು, ಮಹಿಳೆಯರು ಓಡಾಡುವ ಜಾಗೆಯಲ್ಲಿ ಮದ್ಯ ಮಾರಾಟ ಕೂಡದು~ ಎಂದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಜಿ.ಸೋಮಶೇಖರರೆಡ್ಡಿ ಹಾಗೂ ಸಂಸದೆ ಜೆ.ಶಾಂತಾ ತಿಳಿಸಿದರು.ಅಲ್ಲದೆ, ಮದ್ಯ ಮಾರಾಟ ಮಳಿಗೆಯ ಸಿಬ್ಬಂದಿ ಯನ್ನು ಪ್ರತಿಭಟನಾಕಾರರ ಸಹಾಯದೊಂದಿಗೆ ಹೊರಹಾಕಿ ಸ್ವತಃ ಬೀಗ ಜಡಿದರು.ಸರ್ಕಾರ ಹಾಗೂ ಎಂಎಸ್‌ಐಎಲ್ ನಗರದ ಬೇರೆಡೆ ಸೂಕ್ತ ಸ್ಥಳದಲ್ಲಿ ಮಳಿಗೆ ಆರಂಭಿಸಲಿ ಎಂದು ತಿಳಿಸಿದ ಸೋಮಶೇಖರರೆಡ್ಡಿ, ಒಂದೊಮ್ಮೆ ಮಳಿಗೆಯನ್ನು ಇದೇ ಸ್ಥಳದಲ್ಲಿ ಮತ್ತೆ ತೆರೆದಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ರಾಜ್ಯದ ಎಲ್ಲ ನಗರಗಳಲ್ಲೂ ತನ್ನ ಮಾರಾಟ ಮಳಿಗೆ ಹೊಂದಿರುವ ಸರ್ಕಾರೀ ಸ್ವಾಮ್ಯದ ಎಂಎಸ್‌ಐಎಲ್ ಸಂಸ್ಥೆ ನಗರದಲ್ಲಿ ಮಾರಾಟ ಮಳಿಗೆ ತೆರೆಯಲು  ಸಾಧ್ಯವಾಗಿರಲಿಲ್ಲ. ಆದರೆ, ರೇಣುಕಾ ನಗರದಲ್ಲಿ 4 ದಿನಗಳ ಹಿಂದೆ ಮಳಿಗೆ ಆರಂಭಿಸಿದ್ದರಿಂದ, ಸುತ್ತಮುತ್ತಲಿನ ಪ್ರದೇಶಗಳ ಜನರು ಈ ಮಳಿಗೆ ತೆರೆಯುವುದು ಬೇಡ ಎಂದು ಕೋರಿ ಮಹಿಳೆಯರೊಂದಿಗೆ ಪ್ರತಿಭಟಿಸಿದ್ದರು.ಆದರೂ, ಸಂಸ್ಥೆಯು ಪೊಲೀಸರ ಭದ್ರತೆ ನಡುವೆಯೇ ಮಳಿಗೆಯನ್ನು ತೆರೆದು ವ್ಯಾಪಾರ ಆರಂಭಿಸಿತ್ತು. ಪ್ರತಿಭಟನೆ ಆರಂಭಿಸಿದ್ದರಿಂದ ಶಾಸಕರು ಹಾಗೂ ಸಂಸದರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಅಬಕಾರಿ ಸಚಿವ ರೇಣುಕಾಚಾರ್ಯ ಜತೆ ದೂರವಾಣಿಯಲ್ಲಿ ಮಾತನಾಡಿದರು.ವಿರೋಧದ ನಡುವೆ ಈ ಸ್ಥಳದಲ್ಲಿ ಮದ್ಯ ಮಾರಾಟ ಮಳಿಗೆ ತೆರೆಯಬಾರದು ಎಂದು ತಿಳಿಸಿ, ಬೇರೆಡೆ ಈ ಮಳಿಗೆಯನ್ನು ಸ್ಥಳಾಂತರಿಸುವಂತೆ ಕೋರಿದ್ದರು. ಅವರು ಮಳಿಗೆಗೆ ಬೀಗ ಜಡಿದು ಹೋದ ನಂತರ ಸಂಜೆ 4.15ಕ್ಕೆ ಪೊಲೀಸರ ಸಮ್ಮುಖದಲ್ಲಿ ಮತ್ತೆ ಮಳಿಗೆ ತೆರೆದು ಮಳಿಗೆ ಸುತ್ತ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.ಅದೇ ಸ್ಥಳದಲ್ಲಿ ಮಳಿಗೆ ಆರಂಭಿಸಲಾಗಿದ್ದು, ಅದನ್ನು ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಳಿಗೆ ತೆರೆಯಲು ಅನುಮತಿ ನೀಡುವ ಮೊದಲೇ ಈ ಕುರಿತು ಕೂಲಂಕಷವಾಗಿ ವಿಚಾರಿಸಬೇಕಿತ್ತು ಎಂದು ತಿಳಿಸಿರುವ ಎಂಎಸ್‌ಐಎಲ್‌ನ ವ್ಯವಸ್ಥಾಪಕ ನಿರ್ದೇಶಕರ ಕೋರಿಕೆಯ ಮೇರೆಗೆ ಪೊಲೀಸ್ ಭದ್ರತೆಯಲ್ಲಿ ಮಳಿಗೆ ತೆರೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಮಳಿಗೆಗೆ ಬಳ್ಳಾರಿಯ ಶಾಸಕ, ಸಂಸದರು ವಿರೋಧ ವ್ಯಕ್ತಪಡಿಸಿರುದು ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry