ಶಾಸಕರಿಗೆ ಕಾದು ಕುಳಿತ ಶೆಟ್ಟರ್

ಮಂಗಳವಾರ, ಜೂಲೈ 16, 2019
25 °C

ಶಾಸಕರಿಗೆ ಕಾದು ಕುಳಿತ ಶೆಟ್ಟರ್

Published:
Updated:

ಬೆಂಗಳೂರು: ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ಬೊಬ್ಬೆ ಹಾಕುತ್ತಿದ್ದ ಆಡಳಿತಾರೂಢ ಶಾಸಕರೇ ನಾಪತ್ತೆ. ಶಾಸಕರಿಗಾಗಿ ಕಾದು ಕುಳಿತ ಮುಖ್ಯಮಂತ್ರಿ ಜಗದೀಶ ಶೆಟ್ಟರ್! ರಾಷ್ಟ್ರಪತಿ ಚುನಾವಣೆ ಮತ್ತು ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ 9ಕ್ಕೆ ವಿಧಾನಸೌಧದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ನಿಗದಿತ ಸಮಯಕ್ಕೆ ಸರಿಯಾಗಿ ಶೆಟ್ಟರ್ ಬಂದರೂ ಶಾಸಕರು ಮಾತ್ರ ಅತ್ತ ತಿರುಗಿಯೂ ನೋಡಿರಲಿಲ್ಲ.ಅರ್ಧ ಗಂಟೆಗೂ ಹೆಚ್ಚು ಕಾಲ ಕಾದು ಕುಳಿತ ಶೆಟ್ಟರ್ ಅವರು ಬಂದಿದ್ದ ನಾಲ್ಕೈದು ಮಂದಿ ಶಾಸಕರ ಜತೆಯೇ ಮಾತುಕತೆ ನಡೆಸಿದರು. ಸ್ವಲ್ಪ ಸಮಯದ ನಂತರ ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ ಸೇರಿದಂತೆ ಇತರ ಸಚಿವರು ಒಬ್ಬೊಬ್ಬರಾಗಿ ಬಂದರು.ಎಷ್ಟೇ ಕಾದು ಕುಳಿತರೂ ಶಾಸಕರ ಸಂಖ್ಯೆ 60 ದಾಟಲಿಲ್ಲ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಪಕ್ಷದ ಒಟ್ಟು ಶಾಸಕರ ಸಂಖ್ಯೆ 161. ಇವರ ಜತೆಗೆ ಬೆಂಗಳೂರಿನಲ್ಲಿದ್ದ ಸಂಸದರನ್ನೂ ಸಭೆಗೆ ಆಹ್ವಾನಿಸಲಾಗಿತ್ತು. ಹಾಜರಾದ ಸಂಸದರ ಸಂಖ್ಯೆಯೂ ಕಡಿಮೆ ಇತ್ತು ಎಂದು ಮೂಲಗಳು ತಿಳಿಸಿವೆ.ಸಚಿವ ಸ್ಥಾನ ವಂಚಿತ ಜಿ.ಕರುಣಾಕರ ರೆಡ್ಡಿ ಸಭೆ ಕಡೆಗೆ ತಲೆ ಹಾಕಲಿಲ್ಲ. ಭಿನ್ನಮತೀಯ ಶಾಸಕ ಬೇಳೂರು ಗೋಪಾಲಕೃಷ್ಣ ಹಾಜರಿದ್ದರು. ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ದೆಹಲಿಯಿಂದ ಬರುವುದು ವಿಳಂಬವಾದ ಕಾರಣ ಶಾಸಕಾಂಗ ಪಕ್ಷದ ಸಭೆಗೆ ಹೋಗಲಿಲ್ಲ ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ ಅವರೂ ಸಭೆಗೆ ಗೈರುಹಾಜರಾಗಿದ್ದರು.ಕಸಿವಿಸಿ: ಸಭೆಯಲ್ಲಿ ಪಕ್ಷದ ಅಧ್ಯಕ್ಷರೂ ಆದ ಈಶ್ವರಪ್ಪ ಮಾತು ಆರಂಭಿಸಿದರು. `ರಾಷ್ಟ್ರಪತಿ ಚುನಾವಣೆಯಲ್ಲಿ ಪಿ.ಎ.ಸಂಗ್ಮಾ ಅವರನ್ನು ಬೆಂಬಲಿಸಬೇಕು. ಪ್ರತಿಯೊಬ್ಬರೂ ಅವರಿಗೇ ಮತದಾನ ಮಾಡಬೇಕು~ ಎಂದು ಹೇಳಿದರು.ಇದರ ಮಧ್ಯೆ ಬೇಳೂರು ಗೋಪಾಲಕೃಷ್ಣ ಮಾತನಾಡಿ, `ಗೋಹತ್ಯೆ ನಿಷೇಧದ ಪರ ಇರುವ ಬಿಜೆಪಿ, ರಾಷ್ಟ್ರಪತಿ ಚುನಾವಣೆಯಲ್ಲಿ ಗೋಮಾಂಸ ಪ್ರಿಯ ಸಂಗ್ಮಾ ಅವರನ್ನು ಬೆಂಬಲಿಸಿರುವುದು ಎಷ್ಟು ಸರಿ ಎಂದು ಕೇಳಿದರು. ಈ ಪ್ರಶ್ನೆ ನಾಯಕರಲ್ಲಿ ಒಂದು ರೀತಿ ಕಸಿವಿಸಿ ಉಂಟು ಮಾಡಿತು. ಇದಕ್ಕೆ ಯಾವ ಉತ್ತರವೂ ಪಕ್ಷದ ಮುಖಂಡರಿಂದ ಬರಲಿಲ್ಲ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry