ಶಾಸಕರಿಗೆ ನೋಟಿಸ್ ಸದ್ಯಕ್ಕಿಲ್ಲ

7

ಶಾಸಕರಿಗೆ ನೋಟಿಸ್ ಸದ್ಯಕ್ಕಿಲ್ಲ

Published:
Updated:

ಬೆಳಗಾವಿ: ಕೆಜೆಪಿ ಸಮಾವೇಶದಲ್ಲಿ ವೇದಿಕೆ ಹಂಚಿಕೊಂಡಿದ್ದ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯರಿಗೆ ನೋಟಿಸ್ ನೀಡುವ ನಿರ್ಧಾರವನ್ನು ಕೆಲವು ದಿನಗಳ ಮಟ್ಟಿಗೆ ಮುಂದೂಡಲು ಪಕ್ಷದ ಪ್ರಮುಖರ ಸಭೆ (ಕೋರ್ ಕಮಿಟಿ) ನಿರ್ಧರಿಸಿದೆ.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಒತ್ತಡಕ್ಕೆ ಮಣಿದು ಹಾವೇರಿಯಲ್ಲಿ ಭಾನುವಾರ ನಡೆದ ಕೆಜೆಪಿ ಸಮಾವೇಶದಲ್ಲಿ ಭಾಗವಹಿಸಿದ್ದಾಗಿ ಕೆಲವು ಶಾಸಕರು ವಿವರಣೆ ನೀಡಿರುವ ಕಾರಣ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಗೊತ್ತಾಗಿದೆ. ಇಲ್ಲಿನ ಸರ್ಕಿಟ್ ಹೌಸ್‌ನಲ್ಲಿ ಬುಧವಾರ ಬೆಳಿಗ್ಗೆ ಬಿಜೆಪಿ ಪ್ರಮುಖರ ಸಭೆ ನಡೆಯಿತು. ಕೆಜೆಪಿ ಜೊತೆ ಗುರುತಿಸಿಕೊಂಡಿರುವ ಶಾಸಕರು, ಸಂಸದರು ಮತ್ತು ನಿಗಮ-ಮಂಡಳಿಗಳ ಅಧ್ಯಕ್ಷರ ವಿರುದ್ಧ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಲಾಗಿದೆ.ಚನ್ನಗಿರಿ ಶಾಸಕ ವಿರೂಪಾಕ್ಷಪ್ಪ ಮಾಡಾಳು, ಕೆ. ಲಕ್ಷ್ಮೀನಾರಾಯಣ (ಬೈಂದೂರು), ಡಾ.ವಿಶ್ವನಾಥ್ (ಕಡೂರು) ಮತ್ತು ಎಸ್.ವಿ.ರಾಮಚಂದ್ರ (ಜಗಳೂರು) ಅವರು ಯಾರದೋ ಒತ್ತಡಕ್ಕೆ ಮಣಿದು ಕೆಜೆಪಿ ಸಮಾವೇಶಕ್ಕೆ ಹೋಗಿದ್ದಾಗಿ ಮುಖ್ಯಮಂತ್ರಿ ಬಳಿ ಅಲವತ್ತುಕೊಂಡಿದ್ದಾರೆ. ಇದೇ ರೀತಿ ಇನ್ನೂ ಕೆಲವರು ವಿವರಣೆ ನೀಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದುಡುಕಿ ಕ್ರಮ ತೆಗೆದುಕೊಂಡರೆ ಪರಿಸ್ಥಿತಿ ಸರಿ ಇರುವುದಿಲ್ಲ ಎನ್ನುವ ಕಾರಣಕ್ಕೆ ಸ್ವಲ್ಪ ದಿನ ಕಾದು ನೋಡಿ, ನಂತರ ಕ್ರಮ ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಸಚಿವ ಸಂಪುಟ ವಿಸ್ತರಣೆ ಕುರಿತು ಪಕ್ಷದ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ. ಆದರೆ ಈ ಕುರಿತು ಪ್ರಮುಖರ ಸಭೆಯಲ್ಲಿ ಚರ್ಚೆ ಆಗಿಲ್ಲ. ನಾಲ್ಕೈದು ದಿನಗಳಲ್ಲಿ ಪುನಃ ನಡೆಯುವ ಪ್ರಮುಖರ ಸಭೆಯಲ್ಲಿ ಈ ಎರಡೂ ವಿಷಯಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕೆಜೆಪಿ ಸಮಾವೇಶದ ಸಾಧಕ-ಬಾಧಕ, ಅದರಿಂದ ಬಿಜೆಪಿ ಮೇಲಾಗುವ ಪರಿಣಾಮಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ಆಗಿದೆ. ಸಮಾವೇಶದಲ್ಲಿ ಭಾಗವಹಿಸಿದ್ದ ಶಾಸಕರ ವಿರುದ್ಧ ಕ್ರಮ ತೆಗೆದುಕೊಂಡರೆ ಸರ್ಕಾರದ ಮೇಲೆ ಆಗುವ ಪರಿಣಾಮಗಳ ಕುರಿತೂ ಚರ್ಚೆ ಆಗಿದೆ.ಶಾಸಕರ ವಿರುದ್ಧ ಕ್ರಮ ತೆಗೆದುಕೊಂಡರೆ ಸರ್ಕಾರಕ್ಕೆ ಗಂಡಾಂತರ ತಪ್ಪಿದ್ದಲ್ಲ. ಹೀಗಾಗಿ ಅವರಿಗೆ ಕೆಲವು ದಿನಗಳ ನಂತರ, ನೋಟಿಸ್ ಕೊಡುವ ಹಾಗೆ ಮಾಡಿ, ಅದನ್ನು ಅಲ್ಲಿಗೇ ಕೈಬಿಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಅವರ ವಿರುದ್ಧ ಕ್ರಮ ಜರುಗಿಸಿದರೆ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ವಿಧಾನಸಭೆಯ 14 ಮಂದಿ ಸದಸ್ಯರೂ ರಾಜೀನಾಮೆ ನೀಡಿದರೆ ಬಿಜೆಪಿಯ ಸಂಖ್ಯಾಬಲ 103ಕ್ಕೆ ಕುಸಿಯಲಿದೆ. ಆಗ ಸರ್ಕಾರ ಉಳಿಯುವುದು ಕಷ್ಟ. ಅಂತಹ ಸಾಹಸಕ್ಕೆ ಹೋಗುವುದು ಬೇಡ ಎಂದು ಒಂದಿಬ್ಬರು ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.ಕ್ರಮ ತೆಗೆದುಕೊಳ್ಳದಿದ್ದರೆ ಪಕ್ಷ ಇಕ್ಕಟ್ಟಿಗೆ ಸಿಲುಕುತ್ತದೆ ಎಂದು ಕೆಲವರು ವಾದಿಸಿದ್ದಾರೆ. ಅಧಿಕಾರಕ್ಕೆ ಅಂಟಿಕೊಂಡು ಭಿನ್ನರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಪ್ರತಿಪಕ್ಷಗಳಿಂದ ಟೀಕೆ ಎದುರಿಸಬೇಕಾಗುತ್ತದೆ. ಹೀಗಾಗಿ ಕ್ರಮ ತೆಗೆದಕೊಳ್ಳುವುದು ಅನಿವಾರ್ಯ. ಆ ಮೂಲಕ ಭಿನ್ನರಿಗೆ ಸಂದೇಶ ರವಾನಿಸಬೇಕಾಗಿದೆ ಎಂಬುದು ಅವರ ವಾದ. ಇದರ ನಡುವೆಯೇ ತಕ್ಷಣಕ್ಕೆ ಯಾವ ನಿರ್ಧಾರವೂ ಬೇಡ ಎನ್ನುವ ತೀರ್ಮಾನಕ್ಕೆ ಬರಲಾಗಿದೆ.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, `ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಕುರಿತು ಎರಡು ದಿನದಲ್ಲಿ ನಿರ್ಧರಿಸಲಾಗುವುದು. ಹೈಕಮಾಂಡ್ ಜತೆ ಚರ್ಚಿಸಬೇಕಾಗಿದೆ. ಹೈಕಮಾಂಡ್ ಅನುಮತಿ ಕೊಟ್ಟ ನಂತರ ಕ್ರಮ ಕುರಿತು ನಿರ್ಧರಿಸಲಾಗುವುದು' ಎಂದರು.ಈ ತಿಂಗಳ 30ರೊಳಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೂತ್‌ಮಟ್ಟದ ಕಾರ್ಯಕರ್ತರ ಸಮಾವೇಶಗಳನ್ನು ಆಯೋಜಿಸಲಾಗುವುದು. ಐದು ತಂಡಗಳಲ್ಲಿ ಪಕ್ಷದ ಪ್ರಮುಖರು ಪ್ರವಾಸ ಮಾಡಲಿದ್ದಾರೆ. `ನಾನೂ ಸೇರಿದಂತೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮುಖಂಡರಾದ ಅನಂತಕುಮಾರ್, ಡಿ.ವಿ.ಸದಾನಂದ ಗೌಡ ಮತ್ತು ಆರ್.ಅಶೋಕ ನೇತೃತ್ವದಲ್ಲಿ ಪ್ರವಾಸ ತೆರಳಲಾಗುವುದು. ಇಡೀ ದಿನ ಒಂದು ಜಿಲ್ಲೆಯಲ್ಲಿದ್ದು, ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು' ಎಂದರು.

ಪಕ್ಷದ ರಾಷ್ಟ್ರೀಯ ಮುಖಂಡರ ಸಭೆ ದೆಹಲಿಯಲ್ಲಿ ಇದೆ ಎನ್ನುವ ಕಾರಣಕ್ಕೆ ಇಲ್ಲಿನ ಪ್ರಮುಖರ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಭಾಗವಹಿಸಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮುಖಂಡರಾದ ಡಿ.ವಿ.ಸದಾನಂದಗೌಡ, ಆರ್.ಅಶೋಕ, ಪಕ್ಷದ ಸಂಘಟನಾ ಕಾರ್ಯದರ್ಶಿ ಸಂತೋಷ್ ಮತ್ತಿತರರು ಭಾಗವಹಿಸಿದ್ದರು.

ನಿರ್ಣಯಕ್ಕೆ ಬರದ ವರಿಷ್ಠರು

ನವದೆಹಲಿ: ಕೆಜೆಪಿ ಜತೆ ಗುರುತಿಸಿಕೊಂಡಿರುವ ಬಿಜೆಪಿಯ 14 ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಬುಧವಾರ ಸಂಜೆ ಇಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆ ಯಾವುದೇ ನಿರ್ಣಯಕ್ಕೆ ಬರದೇ ಕೊನೆಗೊಂಡಿತು. ಶಾಸಕರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎನ್ನುವುದಕ್ಕಿಂತ ಜಗದೀಶ ಶೆಟ್ಟರ್ ನೇತೃತ್ವದ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಪಕ್ಷದ ಪ್ರಮುಖರು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ ಮುಖಂಡರಾದ ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು, ಅನಂತ್‌ಕುಮಾರ್, ಮುರಳಿಮನೋಹರ್ ಜೋಷಿ ಪಾಲ್ಗೊಂಡಿದ್ದರು. ರಾಜಧಾನಿಯಿಂದ ಹೊರಗೆ ಇರುವ ಅರುಣ್ ಜೇಟ್ಲಿ ಮತ್ತು ರಾಜನಾಥ್ ಸಿಂಗ್ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.ಪಕ್ಷದಲ್ಲಿ ತಲೆದೋರಿರುವ ಅಶಿಸ್ತಿಗೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಕೋರ್ ಕಮಿಟಿ  ಸೇರಿ ಚರ್ಚಿಸಿದೆ. ಎರಡು ದಿನಗಳಲ್ಲಿ ಈ ಕುರಿತು ವಿಸ್ತೃತ ವರದಿ ಸಲ್ಲಿಸಲಿದೆ. ಬಳಿಕ ಪಕ್ಷದ ವರಿಷ್ಠರು ರಾಜ್ಯದ ಪ್ರಮುಖರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಅನಂತ್‌ಕುಮಾರ್ ಸುದ್ದಿಗಾರರಿಗೆ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry