ಗುರುವಾರ , ಏಪ್ರಿಲ್ 15, 2021
28 °C

ಶಾಸಕರು ಮತ್ತೆ ಶೆಟ್ಟರ ಬೆಂಬಲಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಿಜೆಪಿಯಲ್ಲಿ ಭಿನ್ನಮತ ಮತ್ತೆ ಗರಿಗೆದರಿದೆ. ಭಿನ್ನಮತದ ಮೊದಲ ಇನ್ನಿಂಗ್ಸ್‌ನಲ್ಲಿ ನೇತೃತ್ವವಹಿಸಿದ್ದ ಜಿಲ್ಲೆಯ ಜಗದೀಶ ಶೆಟ್ಟರ ಅವರೇ ಈಗ ಎರಡನೇ ಇನ್ನಿಂಗ್ಸ್‌ನಲ್ಲೂ ಮುಂಚೂಣಿಯಲ್ಲಿದ್ದಾರೆ. ಈ ಹಿಂದೆ ಗುಂಪುಗಾರಿಕೆ ನಡೆದಾಗ ಶೆಟ್ಟರ ಅವರನ್ನು ಬೆಂಬಲಿಸಿದ್ದ ಜಿಲ್ಲೆಯ ಬಹುತೇಕ ಬಿಜೆಪಿ ಶಾಸಕರು ಈಗಲೂ ಅದೇ ನಿಷ್ಠೆ ಪ್ರದರ್ಶಿಸಿದ್ದಾರೆ.



ಮೂರು ವರ್ಷಗಳ ಹಿಂದೆ ಮೊಟ್ಟಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಸರ್ಕಾರದ ನೇತೃತ್ವ ವಹಿಸಿದ ಯಡಿಯೂರಪ್ಪ ಅವರು ಶೆಟ್ಟರ ಅವರನ್ನು ಸಂಪುಟದಿಂದ ದೂರವಿಟ್ಟರು. ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ (ಈ ಹಿಂದೆ ಹುಬ್ಬಳ್ಳಿ ಗ್ರಾಮೀಣ) ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಶೆಟ್ಟರ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಹಾಗೂ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದವರು.



ಇಷ್ಟೊಂದು ಹಿರಿತನ ಇದ್ದರೂ ಶೆಟ್ಟರ ಅವರಿಗೆ ಸಚಿವ ಸ್ಥಾನ ಕೊಡದೆ, ವಿಧಾನಸಭಾಧ್ಯಕ್ಷ ಸ್ಥಾನ ನೀಡಿದ್ದು ಬಿಜೆಪಿಯಲ್ಲಿ ಅಪಸ್ವರಕ್ಕೆ ಮುನ್ನುಡಿ ಬರೆಯಿತು. ಸಚಿವ ಸ್ಥಾನ ನೀಡದಿರುವುದನ್ನು ಪ್ರತಿಭಟಿಸಿ ಜಿಲ್ಲೆಯಲ್ಲಿ ಶೆಟ್ಟರ ಬೆಂಬಲಿಗರು ಬಸ್‌ಗಳಿಗೆ ಬೆಂಕಿ ಹಚ್ಚಿ   ಆಕ್ರೋಶವನ್ನೂ ವ್ಯಕ್ತಪಡಿಸಿದರು.



ಇದಾದ ನಂತರ 2009ರ ವರ್ಷಾಂತ್ಯದಲ್ಲಿ ಭುಗಿಲೆದ್ದ ಭಿನ್ನಮತದ ಸಂದರ್ಭದಲ್ಲಿ ಗಣಿ ಧಣಿ ಸಚಿವರಾದ ರೆಡ್ಡಿ ಸೋದರರೊಂದಿಗೆ ಕೈಜೋಡಿಸಿ ಮುಂಚೂಣಿಯಲ್ಲಿ ಶೆಟ್ಟರ ನಿಂತರು. ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಚಂದ್ರಕಾಂತ ಬೆಲ್ಲದ ಅವರೊಬ್ಬರನ್ನು ಹೊರತುಪಡಿಸಿದರೆ ಜಿಲ್ಲೆಯ ಉಳಿದೆಲ್ಲ ಬಿಜೆಪಿ ಶಾಸಕರು ಈ ಹಂತದಲ್ಲಿ ಶೆಟ್ಟರ ಅವರನ್ನು ಬಹಿರಂಗವಾಗಿಯೇ ಬೆಂಬಲಿಸಿದರು. ಈಗ ಯಡಿಯೂರಪ್ಪ ವಿರುದ್ಧ ಆರಂಭವಾಗಿರುವ ಭಿನ್ನಮತದ ಚಟುವಟಿಕೆಯ ಹಿನ್ನೆಲೆಯಲ್ಲಿ ಈ ಶಾಸಕರು ಮತ್ತೆ ಶೆಟ್ಟರ ಬೆನ್ನಿಗೆ ನಿಲ್ಲಲು ಸಜ್ಜಾಗಿದ್ದಾರೆ.



ಕಳೆದ ಎರಡ್ಮೂರು ದಿನಗಳಿಂದ ಭಿನ್ನಮತಿಯ ನಾಯಕರು ಬೆಂಗಳೂರಿನಲ್ಲಿ ಸಭೆಗಳನ್ನು ನಡೆಸುತ್ತಿದ್ದರೂ ಈ ಶಾಸಕರು ಜಿಲ್ಲೆಯಲ್ಲೇ ಠಿಕಾಣಿ ಹೂಡಿ ಸಭೆ-ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದಾರೆ. ಸೋಮವಾರ ನಡೆದ ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಸಭೆಯಲ್ಲಿ ಕೆಲ ಶಾಸಕರು ಪಾಲ್ಗೊಂಡರು.ಕುಂದಗೋಳ ಶಾಸಕ ಎಸ್.ಐ.ಚಿಕ್ಕನಗೌಡ್ರ ಅವರು ನವನಗರದ ಹುಡಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದರು. ನಗರದ ಲಕ್ಷ್ಮಿ ಕಾಂಪ್ಲೆಕ್ಸ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಬಹುಸಮಯ   ಕಳೆದರು.



ಯಡಿಯೂರಪ್ಪ ವಿರುದ್ಧ ನಡೆದಿರುವ ಭಿನ್ನಮತೀಯ ಚಟುವಟಿಕೆಗಳ ಬಗೆಗೆ ಪ್ರತಿಕ್ರಿಯಿಸಿದ ಅವರು, ’ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ’ ಎಂದರು.ಮೂರು ಸಲ ಶಾಸಕರಾಗಿ ಆಯ್ಕೆಯಾಗಿದ್ದರೂ ಸಚಿವ ಸ್ಥಾನ ಬಯಸುವುದಿಲ್ಲವೇ ಎಂಬುದಕ್ಕೆ, ‘ಕಾಲ ಕೂಡಿ ಬಂದರೆ ತಾನೇ ಆ ಅವಕಾಶ ಒದಗಿಬರುತ್ತದೆ. ನಾನೇನೂ ಒತ್ತಡ ಹೇರುವುದಿಲ್ಲ’ ಎಂದೂ ಉತ್ತರಿಸಿದರು.



ಧಾರವಾಡ ಶಾಸಕಿ ಸೀಮಾ ಮಸೂತಿ ಅವರೂ ಹುಡಾ ಸಭೆಯಲ್ಲಿ ಪಾಲ್ಗೊಂಡರು. ಈಚೆಗೆ ಶಬರಿಮಲೈನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಧಾರವಾಡ ತಾಲ್ಲೂಕಿನ ಕಲ್ಲೂರು ಗ್ರಾಮದ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸುವ ಕೆಲಸವನ್ನೂ ಮಾಡಿದರು. ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದ ಶಾಸಕ ವೀರಭಧ್ರಪ್ಪ ಹಾಲಹರವಿ ಕೂಡ ಹುಡಾ ಸಭೆಯಲ್ಲಿ ಪಾಲ್ಗೊಂಡರು. ಇಂದಿರಾನಗರದ ಶಾಲೆಯೊಂದರ ವಾರ್ಷಿಕೋತ್ಸವದಲ್ಲೂ ಅತಿಥಿಯಾಗಿ ಕಾಣಿಸಿಕೊಂಡರು.



"ಇನ್ನು ಯಡಿಯೂರಪ್ಪ ನಿಷ್ಠರಾಗಿರುವ ಜಿಲ್ಲೆಯ ಏಕೈಕ ಶಾಸಕ ಚಂದ್ರಕಾಂತ ಬೆಲ್ಲದ ಕೂಡ ಸೋಮವಾರ ಧಾರವಾಡದಲ್ಲಿಯೇ ಇದ್ದರು. ‘ಈ ಭಿನ್ನಮತದ ಚಟುವಟಿಕೆಯ ಹಿನ್ನೆಲೆಯಲ್ಲಿ ಬೆಲ್ಲದ ಅವರಿಗೆ ಸಚಿವರಾಗುವ ಭಾಗ್ಯ ಒದಗಿಬರುವ ಸಾಧ್ಯತೆ ಇದೆ’ ಎಂದು ಅವರ ಬೆಂಬಲಿಗರೊಬ್ಬರು ಅಭಿಪ್ರಾಯಪಟ್ಟರು. ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮದುವೆ ಊಟ ಸವಿದರು. ಸಂಬಂಧಿಕರೊಬ್ಬರ ಮದುವೆಯಲ್ಲಿ ಪಾಲ್ಗೊಂಡ ಅವರು, ‘ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ’ ಎಂಬ ಸಿದ್ಧ ಉತ್ತರವನ್ನೇ ನೀಡಿದರು.



ಶಾಸಕರು ಅಧಿಕೃತವಾಗಿ ಇಂತಹ ಹೇಳಿಕೆ ನೀಡಿದರೂ, ಬೆಲ್ಲದ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಶೆಟ್ಟರ ಅವರನ್ನು ಬೆಂಬಲಿಸುವುದಾಗಿ   ಖಾಸಗಿಯಾಗಿ ಒಪ್ಪಿಕೊಂಡರು. ಉತ್ತರ ಕರ್ನಾಟಕದ, ಅದರಲ್ಲೂ ಜಿಲ್ಲೆಯವರೊಬ್ಬರು ಮುಖ್ಯಮಂತ್ರಿಯಾದರೆ ಈ ಭಾಗದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಈ ಕಾರಣಕ್ಕಾಗಿ ಶೆಟ್ಟರ ಬೆಂಬಲಕ್ಕೆ ನಾವಿದ್ದೇವೆ ಎಂದು ಶಾಸಕರೊಬ್ಬರು ಹೇಳಿದರು.



ಶೆಟ್ಟರ ಅವರನ್ನು ಎದುರು ಹಾಕಿಕೊಂಡು ಜಿಲ್ಲೆಯಲ್ಲಿ ರಾಜಕಾರಣ ಮಾಡುವುದು ಕಷ್ಟಕರ ಎಂದು ವಾಸ್ತವವನ್ನು ಇನ್ನೊಬ್ಬ ಶಾಸಕರು ತೆರೆದಿಟ್ಟರೆ, ‘ದೊಡ್ಡವರ ಜಗಳದಲ್ಲಿ ನಮ್ಮಂಥ ಸಣ್ಣವರಿಗೆ ತೊಂದರೆಯಾಗುತ್ತಿದೆ. ಅಭಿವೃದ್ಧಿ ಕೆಲಸಗಳನ್ನು ಮಾಡಲು ಕಷ್ಟವಾಗುತ್ತಿದೆ’ ಎಂಬ ಬೇಸರವನ್ನು ಮಗದೊಬ್ಬ ಶಾಸಕರು ತೋಡಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.