ಮಂಗಳವಾರ, ಡಿಸೆಂಬರ್ 10, 2019
26 °C
ಮುಖ್ಯಮಂತ್ರಿ ಜನತಾದರ್ಶನದಲ್ಲಿ ದೂರು-ದುಮ್ಮಾನಗಳ ಸರಮಾಲೆ

ಶಾಸಕರ ಕಿರುಕುಳಕ್ಕೆ ಊರು ತೊರೆದ ಕುಟುಂಬ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಸಕರ ಕಿರುಕುಳಕ್ಕೆ ಊರು ತೊರೆದ ಕುಟುಂಬ!

ಬೆಂಗಳೂರು: `ಶಾಸಕ ಬಾಲಚಂದ್ರ ಜಾರಕಿಹೊಳಿ ಕಿರುಕುಳದಿಂದ ನಾವು ಗ್ರಾಮವನ್ನು ತೊರೆದಿದ್ದು ನಮಗೆ ರಕ್ಷಣೆ ಕೊಡಿ'

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ತಪಸಿ ಗ್ರಾಮದ ದಂಪತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಜನತಾ ದರ್ಶನದಲ್ಲಿ ನೀಡಿದ ಮನವಿ ಇದು.`ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನನ್ನ ಪತಿ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಿ ಬೆತ್ತಲೆಗೊಳಿಸಿ ಅವಮಾನ ಮಾಡಿದ್ದಾರೆ. ಆದರೆ ಗೋಕಾಕ ತಾಲ್ಲೂಕಿನ ಕುಲಗೋಡು ಪೊಲೀಸ್ ಠಾಣಾಧಿಕಾರಿ ಈ ಕುರಿತ ದೂರನ್ನೇ ಸ್ವೀಕರಿಸಿಲ್ಲ. ದಯಮಾಡಿ ನನಗೆ ನ್ಯಾಯ ಒದಗಿಸಿಕೊಡಿ' ಎಂಬ ರೇಣುಕಾ ಮನವಿ ಮಾಡಿದಾಗ ಅವರ ಪತಿ ಬಾಳಪ್ಪ ಅಡವೆಪ್ಪ ನಾಯಕ ಜೊತೆಗಿದ್ದರು.`ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಮದ್ಯ ವಿತರಿಸಲಾಗುತ್ತಿದೆ ಎಂದು ನನ್ನ ಪತಿ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದರು. ಆಗ ಶಾಸಕರ ಕಡೆಯ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಿದರು. ನಂತರ ನನ್ನ ಪತಿಯನ್ನು ಶಾಸಕರ ಒಡೆತನದ ಎನ್.ಎಸ್.ಎಫ್ ಕಚೇರಿಗೆ ಕರೆಸಿಕೊಂಡು ಚಪ್ಪಲಿಯಲ್ಲಿ ಹಲ್ಲೆ ಮಾಡಿದ್ದಾರೆ. ನಮ್ಮ ಜಾನುವಾರುಗಳನ್ನೂ ಕಳ್ಳತನ ಮಾಡಿದರು. ಮೊಬೈಲ್, ಬೈಕ್ ಕದ್ದಿದ್ದಾರೆ. ಒಂದು ಎಕರೆಯಲ್ಲಿ ಬೆಳೆಯಲಾಗಿದ್ದ ಕಬ್ಬು ಬೆಳೆಯನ್ನೂ ಸೇಡಿನಿಂದ ಕಟಾವು ಮಾಡಿದ್ದಾರೆ. ಆದರೆ ಇದುವರೆಗೂ ಪೊಲೀಸರು ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಜೀವಭಯದಿಂದ ನಾವೀಗ ತಪಸಿ ಗ್ರಾಮವನ್ನೇ ತೊರೆದು ಬೇರೆಡೆ ವಾಸಿಸುತ್ತಿದ್ದೇವೆ' ಎಂದು ರೇಣುಕಾ ಗೋಳು ತೋಡಿಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.ಅಂಗವಿಕಲರು, ಮಹಿಳೆಯರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾರ್ವಜನಿಕರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಬೆಳಿಗ್ಗೆಯೇ ಗೃಹ ಕಚೇರಿ ಕೃಷ್ಣಾ ಮುಂದೆ ಜಮಾಯಿಸಿದ್ದರು. ಬೆಳಿಗ್ಗೆ 10.30ಕ್ಕೆ ಆರಂಭವಾದ ಜನಸ್ಪಂದನ ಮಧ್ಯಾಹ್ನದವರೆಗೂ ನಡೆಯಿತು. `ಉದ್ಯೋಗ ಕಾಯಂಗೊಳಿಸಿ, ವಸತಿ ಕಲ್ಪಿಸಿ, ಪಿಂಚಣಿ ಕೊಡಿಸಿ, ವೈದ್ಯಕೀಯ ಪರಿಹಾರ ನೀಡಿ'... ಮುಂತಾದ ಹಲವು ರೀತಿಯ ಸಮಸ್ಯೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎದುರಾದವು.ವಿವಿಧ ವಿದ್ಯುತ್ ವಿತರಣಾ ಕಂಪೆನಿಗಳಲ್ಲಿ (ಎಸ್ಕಾಂ) ಗುತ್ತಿಗೆ ಆಧಾರದಲ್ಲಿ ಕಂದಾಯ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ 600 ಮಂದಿಯನ್ನು ಕಾಯಂಗೊಳಿಸುವಂತೆ ಮಂಡ್ಯದಿಂದ ಬಂದಿದ್ದ ಸೋಮಶೇಖರ್ ಮತ್ತಿತರರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಬೆಂಗಳೂರಿನ ನಂದಿನಿ ಬಡಾವಣೆ ಮತ್ತು ಹಲಗೇರಹಳ್ಳಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ 5.5 ಲಕ್ಷ ರೂಪಾಯಿಗೆ `ಫ್ಲ್ಯಾಟ್'ಗಳನ್ನು ನೀಡಿತ್ತು. ಆದರೆ, ಈಗ ಹೆಚ್ಚುವರಿಯಾಗಿ 2.5 ಲಕ್ಷ ರೂಪಾಯಿ ಪಾವತಿಸುವಂತೆ ಸೂಚಿಸಿದೆ. ದಿಢೀರನೆ ಈ ರೀತಿ ಬೆಲೆ ಹೆಚ್ಚಿಸಿರುವುದು ನಮಗೆಲ್ಲಾ ಆಘಾತ ಉಂಟು ಮಾಡಿದೆ. ಸಾಲ ಮಾಡಿ ಈ `ಫ್ಲ್ಯಾಟ್'ಗಳನ್ನು ಖರೀದಿಸಲಾಗಿತ್ತು. ಬಿಡಿಎ ಈ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ನಿವಾಸಿಗಳು ಕೋರಿದರು.ನಿಗಮ ಮಂಡಳಿ ನೇಮಕಕ್ಕೆ ಮನವಿ!

`ವಿವಿಧ ನಿಗಮ, ಮಂಡಳಿ ಮತ್ತು ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರನ್ನಾಗಿ ನಮ್ಮನ್ನು ನೇಮಿಸಿ' ಎಂದು ಹಲವು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಜನಸ್ಪಂದನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗೆ ಅಹವಾಲು ಸಲ್ಲಿಸಿದ ಪ್ರಸಂಗ ಜರುಗಿತು.ಕೆಲವರು ಸರದಿ ಸಾಲಿನಲ್ಲಿ ನಿಂತು ಇಂತಹ ಮನವಿ ಸಲ್ಲಿಸಿದರೆ, ಇನ್ನೂ ಕೆಲವರು ನೇರವಾಗಿ ಮುಖ್ಯಮಂತ್ರಿ ಬಳಿಯೇ ತೆರಳಿ ಕೊಟ್ಟರು. ತರಿಕೇರೆಯಿಂದ ಆಗಮಿಸಿದ್ದ ವಕೀಲರೊಬ್ಬರು ತಮ್ಮನ್ನು ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸುವಂತೆ ಮನವಿ ಮಾಡಿದರು.ಈ ಪರಿಯ ಮನವಿಗಳನ್ನೆಲ್ಲಾ ಪರಿಶೀಲಿಸಿದ ಮುಖ್ಯಮಂತ್ರಿಗಳು, `ಇಂತಹ ಮನವಿಗಳೆಲ್ಲಾ ಇಲ್ಲಿ ಏಕೆ ? ಕೊಟ್ಟು ಹೋಗಿ ನೋಡೋಣ' ಎಂದು ಅಸಮಾಧಾನದಿಂದಲೇ ಉತ್ತರಿಸಿದರು.ವಂಚನೆ ಪ್ರಕರಣ: ಸಂತ್ರಸ್ತರ ಅಳಲು

ಬೆಂಗಳೂರು ನಗರದ ಮಹಾಲಕ್ಷ್ಮೀಪುರದ ಭೋವಿ ಪಾಳ್ಯ ಪ್ರದೇಶದ ನಿವಾಸಿಗಳು ನಿವೇಶನ ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಸಿದರು.`ಕೊಳಚೆ ನಿರ್ಮೂಲನೆ ಮಂಡಳಿ, ಕರ್ನಾಟಕ ಗೃಹ ಮಂಡಳಿಯಿಂದ ನಿವೇಶನ ಕೊಡಿಸುವುದಾಗಿ ನಂಬಿಸಿ ಕೃಷ್ಣೇಗೌಡ, ಹನುಮಂತ, ಮುನಿರಾಜು ಎನ್ನುವವರು ರಾಜಕೀಯ ಮುಖಂಡರ ಸೋಗಿನಲ್ಲಿ 18 ಜನರಿಂದ ಒಟ್ಟು 29.80 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ.ಆದರೆ ಇವರೆಲ್ಲಾ ಯಾರಿಗೂ ಈತನಕ ನಿವೇಶನ ಕೊಡಿಸಿಲ್ಲ. ಹಣವನ್ನೂ ವಾಪಸು ನೀಡಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ' ಎಂದು ರಾಜ್ಯ ಡಾ.ಬಿ.ಆರ್. ಅಂಬೇಡ್ಕರ್ ಹಿಂದುಳಿದ ಸೇವಾ ಸಮಿತಿ ಅಧ್ಯಕ್ಷ ಕೆ. ವೆಂಕಟೇಶ್ ಎಂಬುವರು ದೂರು ಸಲ್ಲಿಸಿದರು.

ಪ್ರತಿಕ್ರಿಯಿಸಿ (+)