ಶಾಸಕರ ನೇತೃತ್ವದಲ್ಲಿ ತಂಡ ರಚನೆ

7

ಶಾಸಕರ ನೇತೃತ್ವದಲ್ಲಿ ತಂಡ ರಚನೆ

Published:
Updated:

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಯಿಂದ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ, ಮದ್ದೂರು ಹಾಗೂ ಗೆಜ್ಜಲಗೆರೆಯಲ್ಲಿ ಅಹೋರಾತ್ರಿ ರಸ್ತೆ ತಡೆ ಹಾಗೂ ಶ್ರೀರಂಗಪಟ್ಟಣದ ಬಳಿ ಅಹೋರಾತ್ರಿ ಜಲ ಸತ್ಯಾಗ್ರಹ ಮಾಡಲು ನಿರ್ಧರಿಸಲಾಗಿದೆ.ಅಣೆಕಟ್ಟೆಯಿಂದ ನೀರು ಹೊರ ಬಿಡುವುದನ್ನು ನಿಲ್ಲಿಸಲಾಗಿದೆಯೇ, ಇಲ್ಲವೆ ಎಂಬುದನ್ನು ಶಾಸಕ ಸಿ.ಎಸ್. ಪುಟ್ಟರಾಜು ನೇತೃತದ ತಂಡವೊಂದು ಕಾವಲು ಕಾಯಲಿದೆ.ನಗರದ ಕಾವೇರಿ ವನ ಎದುರು, ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಪ್ರತಿಭಟಣಾ ಧರಣಿ 25ನೇ ದಿನವೂ, ಸರದಿ ಉಪವಾಸ ಸತ್ಯಾಗ್ರಹ 5ನೇ ದಿನಕ್ಕೂ ಕಾಲಿಟ್ಟಿದೆ.ಎಂ.ಬಿ.ಶ್ರೀನಿವಾಸ್, ಹನಿಯಂಬಾಡಿ ನಾಗರಾಜು, ಕೆ.ಟಿ.ಹನುಮಂತು, ಮಹಮ್ಮದ್, ಪಣಕನಹಳ್ಳಿ ಶಿವರಾಮು ಹಾಗೂ ಶಿವಸ್ವಾಮಿ ಸೋಮವಾರ ನಡೆದ ಸರದಿ ಉಪವಾಸ ಸತ್ಯಾಗ್ರಹದಲ್ಲಿ ಇದ್ದರು.ತಲೆಯ ಮೇಲೆ ಕಲ್ಲಿಟ್ಟುಕೊಂಡು ಪ್ರತಿಭಟನೆ: ಮಾರಸಿಂಗನಹಳ್ಳಿ ಗ್ರಾಮದ ಯುವಕರು ತಲೆಯ ಮೇಲೆ ಕಲ್ಲು ಇಟ್ಟುಕೊಂಡು ಪಾದಯಾತ್ರೆ ನಡೆಸಿ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು. ತಮಿಳುನಾಡಿಗೆ ನೀರು ಬಿಡುವ ಮೂಲಕ ರಾಜ್ಯ ಸರ್ಕಾರ, ರೈತರ ಮೇಲೆ ಚಪ್ಪಡಿ ಕಲ್ಲು ಎಳೆದಿದೆಯೆಂದು ಆಕ್ರೋಶ ವ್ಯಕ್ತಪಡಿಸಿದರು.ಎತ್ತಿನಗಾಡಿಗಳ ಮೆರವಣಿಗೆ: ಹೊಳಲು ಗ್ರಾಮದಲ್ಲಿ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಬೆಳಿಗ್ಗೆ ಗ್ರಾಮದ ಪ್ರವೇಶ ದ್ವಾರದ ಎರಡೂ ಬದಿಯಲ್ಲಿ ಟೈರ್ ಹಾಗೂ ಮರದ ದಿಮ್ಮಿಗಳಿಗೆ ಬೆಂಕಿ ಹಾಕಿ ಗ್ರಾಮಸ್ಥರು, ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಗ್ರಾಮದಿಂದ ನಗರಕ್ಕೆ ಎತ್ತಿನಗಾಡಿಗಳಲ್ಲಿ ಮೆರವಣಿಗೆ ಬಂದು ಬೆಂಬಲ ಸೂಚಿಸಿದರು.ಮುಸ್ಲಿಂಮರಿಂದ ನಮಾಜ್: ಕಾವೇರಿ ಸಮಸ್ಯೆಗೆ ಪರಿಹಾರ ದೊರಕಲಿ, ವರುಣ ಕೃಪೆ ತೋರಲೆಂದು ಪ್ರಾರ್ಥಿಸಿ ಮುಸ್ಲಿಂಮರು ಸಾಮೂಹಿಕ ಪ್ರಾರ್ಥನೆ ನಡೆಸಿದರು. ರಾಮನಗರ ತಾಲ್ಲೂಕು ವೀರಶೈವ ಪರಿಷತ್ತಿನ ನೇತೃತ್ವದಲ್ಲಿ ಅನೇಕರು ರಾಮನಗರದಿಂದ ಮಂಡ್ಯ ವರೆಗೆ ಬೈಕ್ ರ‌್ಯಾಲಿ ನಡೆಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.ದೊಡ್ಡಬಾಣಸವಾಡಿ ಮತ್ತು ಚಿಕ್ಕಬಾಣಸವಾಡಿ, ಕೋಣನಹಳ್ಳಿ, ಕಾರಸವಾಡಿ, ಬೇಲೂರು, ಎಚ್.ಮಲ್ಲಿಗೆರೆ, ಶಂಭೂನಹಳ್ಳಿ, ಗಾಣದಾಳು, ಹೊನಗಾನಹಳ್ಳಿ, ಈಚಗೆರೆ, ಕೊಮ್ಮೇರಹಳ್ಳಿ, ತಗ್ಗಹಳ್ಳಿ, ಕೆ.ಶೆಟ್ಟಹಳ್ಳಿ, ಕರಡಕೆರೆ, ಹನುಮಂತನಗರ, ಜಿ.ಮಲ್ಲಿಗೆರೆ, ಹುಲಿವಾನ ಸೇರಿದಂತೆ ಹಲವು ಗ್ರಾಮಗಳ ರೈತರು ಎತ್ತಿನಗಾಡಿಗಳಲ್ಲಿ ಗ್ರಾಮದಿಂದ ನಗರಕ್ಕೆ ಆಗಮಿಸಿದರು. ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿಪತ್ರ ಸಲ್ಲಿಸಿದರು. ಬಳಿಕ ಧರಣಿ ಸ್ಥಳಕ್ಕೆ ಆಗಮಿಸಿ, ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಬಹುತೇಕ ರೈತರು, ಎತ್ತಿನಗಾಡಿಗಳೋಂದಿಗೆ ಕಾವೇರಿ ಮಾತೆ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಭಾವಚಿತ್ರವನ್ನು ಇಟ್ಟುಕೊಂಡು, ಮೆರವಣಿಗೆ ನಡೆಸಿ ಗಮನ ಸೆಳೆದರು. ಗ್ರಾಮದಿಂದಲೇ ಸಿದ್ಧಪಡಿಸಿ ತಂದಿದ್ದ ಆಹಾರವನ್ನು ಅಲ್ಲಲ್ಲಿ ಕುಳಿತು ಸೇವಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ನಗರಸಭೆ ವತಿಯಿಂದ ಕುಡಿಯುವ ನೀರಿನ ಸೌಲಭ್ಯ ಏರ್ಪಡಿಸಲಾಗಿತ್ತು.ಸಂಘಟನೆಗಳು: ಮೋದಿಕೇರ್ ಪ್ರತಿನಿಧಿಗಳು, ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಮತ್ತು ಜಿಲ್ಲಾ ವಿದ್ಯುತ್ ಗುತ್ತಿಗೆದಾರರು, ಎಂಒಬಿ ಗ್ರಾಮೀಣ ಆರೋಗ್ಯ ಕೇಂದ್ರ ಸಿಬಿಆರ್ ಯೋಜನೆಯ ಆಶ್ರಯ ಮಹಿಳಾ ಒಕ್ಕೂಟ, ಕೃಷ್ಣರಾಜಸಾಗರ ಮತ್ತು ಹೇಮಾವತಿ ವಲಯದ ಟಾಸ್ಕ್ ವರ್ಕ್ ದಿನಗೂಲಿ ನೌಕರರ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಚಳವಳಿ ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಸರ್ಕಾರಿ ಬಸ್ ಸಂಚಾರ ವಿರಳ

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಇಂದೂ ಸಹ ಸರ್ಕಾರಿ ಬಸ್ಸುಗಳ ಓಡಾಟ ಕಂಡು ಬರಲಿಲ್ಲ. ಬೆಳಿಗ್ಗೆ 9ರ ನಂತರ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ಬಸ್‌ಗಳಿಲ್ಲದೆ ಭಣಭಣ ಎನ್ನುತ್ತಿತ್ತು.ವ್ಯಾಪಾರಸ್ಥರಿಗೆ ಸುಗ್ಗಿ: ಧರಣಿ ಸ್ಥಳದಲ್ಲಿ ಕಲ್ಲಂಗಡಿ, ಸೌತೇಕಾಯಿ, ಕಡ್ಲೆಕಾಯಿ, ಕಾಫಿ-ಟೀ ಸೇರಿದಂತೆ ಹಲವು ತಿನಿಸುಗಳ ವ್ಯಾಪಾರ ಜೋರಾಗಿ ನಡೆದಿದ್ದು, ಸಣ್ಣಪುಟ್ಟ ವ್ಯಾಪಾರಸ್ಥರ ಜೋಳಿಗೆ ತುಂಬುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry