ಶಾಸಕರ ಹಕ್ಕಿಗೆ ಚ್ಯುತಿ:ಆಕ್ರೋಶ

7

ಶಾಸಕರ ಹಕ್ಕಿಗೆ ಚ್ಯುತಿ:ಆಕ್ರೋಶ

Published:
Updated:

ಬೆಂಗಳೂರು: `ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ನೆಲೆಸಿರುವ ಬಡಾವಣೆಗಳಲ್ಲಿ ಮೂಲಸೌಲಭ್ಯ ಕಲ್ಪಿಸಲು ಹಣ ನೀಡುವಂತೆ ಎಷ್ಟೇ ಮನವಿ ಪತ್ರ ಕೊಟ್ಟರೂ ಅದಕ್ಕೆ ಹಣ ಇಲ್ಲ ಎಂಬ ಹಿಂಬರಹ ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಅವರಿಂದ ಬರುತ್ತದೆ.

 

ಹೀಗೆ ನನಗೆ ಪತ್ರ ಕೊಟ್ಟ ನಂತರ ಬಿಜೆಪಿ ಕಾರ್ಯಕರ್ತರೊಬ್ಬರ ಪತ್ರದ ಆಧಾರದಲ್ಲಿ ಹಣ ಬಿಡುಗಡೆಯ ಆದೇಶ ನೀಡುತ್ತಾರೆ. ಸಚಿವರೇ ಹೀಗೆ ನಮ್ಮ ಹಕ್ಕಿಗೆ ಚ್ಯುತಿ ಬರುವಂತೆ ನಡೆದುಕೊಂಡರೆ ನಾವೇನು ಮಾಡಬೇಕು?~ಈ ರೀತಿಯ ಪ್ರಶ್ನೆಯನ್ನು ಶೂನ್ಯವೇಳೆಯಲ್ಲಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ಮುಂದೆ ಪ್ರಸ್ತಾಪಿಸಿದ್ದು ಹಾಸನದ ಜೆಡಿಎಸ್ ಶಾಸಕ ಎಚ್.ಎಸ್.ಪ್ರಕಾಶ್.`ಯಾರದೊ ಪತ್ರವನ್ನು ಆಧಾರವಾಗಿಟ್ಟುಕೊಂಡು 71 ಲಕ್ಷ ರೂಪಾಯಿ ಬಿಡುಗಡೆ ಮಾಡಿರುವುದು ಸರಿಯಲ್ಲ. ಸರ್ಕಾರಿ ಆದೇಶದಲ್ಲಿ ಕಾರ್ಯಕರ್ತನ ಹೆಸರು ಕೂಡ ಪ್ರಸ್ತಾಪಿಸಲಾಗಿದೆ. ಶಾಸಕರು ಯಾವ ಕೆಲಸವನ್ನೂ ಮಾಡುತ್ತಿಲ್ಲ ಎಂದು ಆ ಪತ್ರದಲ್ಲಿ ದೂರಿದ್ದು, ಅದರ ಮೇಲೆಯೇ ಸಚಿವರು ಕೂಡ ಸಹಿ ಮಾಡುತ್ತಾರೆ. ಹೀಗೆ ಮಾಡಿದರೆ ನಾವು ಶಾಸಕರಾಗಿ ಏಕೆ ಇರಬೇಕು~ ಎಂದೂ ಖಾರವಾಗಿಯೇ ಪ್ರಶ್ನಿಸಿದರು.ಇದಕ್ಕೆ ಸಚಿವ ನಾರಾಯಣಸ್ವಾಮಿ ಉತ್ತರಿಸಿ, `ಪ್ರವಾಸ ಸಂದರ್ಭದಲ್ಲಿ ಕೊಟ್ಟ ಪತ್ರಕ್ಕೆ ಹಣ ಬಿಡುಗಡೆ ಆದೇಶ ನೀಡಿದ್ದು, ಹಣವನ್ನು ನೇರವಾಗಿ ಯಾವ ವ್ಯಕ್ತಿಗೂ ನೀಡುವುದಿಲ್ಲ. ಜಿಲ್ಲಾಧಿಕಾರಿಯೇ ಕಾಮಗಾರಿಗಳ ಉಸ್ತುವಾರಿ ಮತ್ತು ಹಣ ಬಿಡುಗಡೆ ಅಧಿಕಾರ ಹೊಂದಿದ್ದಾರೆ~ ಎಂದು ಸಮರ್ಥಿಸಿಕೊಂಡರು.ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರು ಇದನ್ನು ಗಂಭೀರವಾಗಿ ತೆಗೆದುಕೊಂಡು, ಹಕ್ಕುಚ್ಯುತಿಯಡಿ ಚರ್ಚೆಗೆ ಅವಕಾಶ ಕಲ್ಪಿಸಬೇಕೆಂದು ಪಟ್ಟುಹಿಡಿದರು. ನಂತರ ಆ ಕುರಿತು ಅರ್ಜಿ ಸಲ್ಲಿಸುವಂತೆ ಸ್ಪೀಕರ್ ಸೂಚನೆ ನೀಡಿದರು.ಚಿಕಿತ್ಸೆಗೆ ಕ್ರಮ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಯಿಂದಾಗಿ ನೂರಾರು ಜನರು ತೊಂದರೆ ಅನುಭವಿಸುತ್ತಿದ್ದು, ಚಿಕಿತ್ಸೆಗೆ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ ವಿಧಾನಸಭೆಯಲ್ಲಿ ಆಗ್ರಹಪಡಿಸಿದರು.ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು `ನಮ್ಮ ಭಾಗದಲ್ಲಿ 100ಕ್ಕೂ ಹೆಚ್ಚು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ಜನ ತೊಂದರೆ ಅನುಭವಿಸುತ್ತಿದ್ದಾರೆ~ ಎಂದು ದೂರಿದರು.ಬಿಜೆಪಿಯ ಬೇಳೂರು ಗೋಪಾಲಕೃಷ್ಣ ಕೂಡ ಈ ವಿಷಯ ಪ್ರಸ್ತಾಪಿಸಿ, ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರ ನೀಡಿದ ಕಾನೂನು ಸಚಿವ ಸುರೇಶ್‌ಕುಮಾರ್ ಅವರು `ಮಂಗನ ಕಾಯಿಲೆ ಬಗ್ಗೆ ಸರ್ಕಾರ ತುರ್ತು ಗಮನ ಕೊಟ್ಟು ಚಿಕಿತ್ಸೆಗೆ ವ್ಯವಸ್ಥೆ ಮಾಡಲಿದೆ~ ಎಂದರು.ಸೂಕ್ತ ಕ್ರಮ: ಪ್ರತಿಭಟನೆ ಮಾಡುತ್ತಿದ್ದ ಶಾಲಾ ಮಕ್ಕಳನ್ನು ಬಜಪೆ ಪೊಲೀಸರು ಥಳಿಸಿದ ಪ್ರಕರಣ ಕುರಿತು ಉನ್ನತಮಟ್ಟದ ತನಿಖೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಾನೂನು ಸಚಿವ ಸುರೇಶ್‌ಕುಮಾರ್ ಹೇಳಿದರು.ಶೂನ್ಯವೇಳೆಯಲ್ಲಿ ಅಭಯಚಂದ್ರ ಜೈನ್ ವಿಷಯ ಪ್ರಸ್ತಾಪಿಸಿ, ಜ.16ರಂದು ಈ ಘಟನೆ ನಡೆದಿದೆ. ಈ ಬಗ್ಗೆ ಮಂಗಳೂರಿನ ಪೊಲೀಸ್ ಕಮಿಷನರ್‌ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ~ ಎಂದು ದೂರಿದರು.  ಬಜಪೆ ಪೊಲೀಸ್ ಇನ್ಸ್‌ಪೆಕ್ಟರ್ ಈ ಘಟನೆಗೆ ಕಾರಣರಾಗಿದ್ದು, ಅವರನ್ನು ಅಮಾನತು ಮಾಡಬೇಕು ಎಂದು ಜೈನ್ ಆಗ್ರಹಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry